ಕಲಬುರಗಿ, ಏ. 23: ನಗರದ ಅಜೀಮ್ ಪ್ರೇಮ್‌ಜೀ ಶಾಲೆಯ ವಿದ್ಯಾರ್ಥಿ ಗಣೇಶ್ ಬೋಸ್ಲೆ 625ಕ್ಕೆ 623 ಅಂಕಗಳನ್ನು ಪಡೆಯುವ ಮೂಲಕ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಪ್ರಥಮ ಹಾಗೂ ರಾಜ್ಯಕ್ಕೆ ತೃತೀಯ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಗುರುವಾರ ಪ್ರಕಟಗೊಂಡ ಫಲಿತಾಂಶದಲ್ಲಿ (Kalaburagi SSLC Result) ಈ ಸಾಧನೆ ಹೊರಬಿದ್ದಿದ್ದು, ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ನಗರದ ನ್ಯೂ ರಾಘವೇಂದ್ರ ಕಾಲೋನಿಯ ನಿವಾಸಿ ಸಹದೇವ ಬೋಸ್ಲೆ ಹಾಗೂ ಗೀತಾ ದಂಪತಿಯ ಪುತ್ರ ಗಣೇಶ್, ಸಾವಳಗಿ (ಬಿ) ಗ್ರಾಮದ ಬಳಿಯಿರುವ ಅಜೀಮ್ ಪ್ರೇಮ್‌ಜೀ ಶಾಲೆಯ ವಿದ್ಯಾರ್ಥಿ.
ಇಂಗ್ಲಿಷ್ ಮತ್ತು ವಿಜ್ಞಾನ ವಿಷಯಗಳಲ್ಲಿ ತಲಾ ಒಂದು ಅಂಕ ಕಳೆದುಕೊಂಡಿರುವ ಗಣೇಶ್, "ಆ ಎರಡು ಅಂಕಗಳು ಬಂದಿದ್ದರೆ ಇನ್ನೂ ಖುಷಿಯಾಗುತ್ತಿತ್ತು" ಎಂದು ಪ್ರತಿಕ್ರಿಯಿಸಿದ್ದಾರೆ. ಭವಿಷ್ಯದಲ್ಲಿ ಎಂಬಿಬಿಎಸ್ ಪೂರೈಸಿ ಮಕ್ಕಳ ತಜ್ಞರಾಗಬೇಕೆಂಬ ಹಂಬಲವನ್ನು ಅವರು ವ್ಯಕ್ತಪಡಿಸಿದ್ದಾರೆ.
ಜಿಲ್ಲೆಗೆ ದ್ವಿತೀಯ ಸ್ಥಾನದ ಇಬ್ಬರು ಸಾಧಕಿಯರು
ಗಣೇಶ್ ಬೋಸ್ಲೆ ಪ್ರಥಮ ಸ್ಥಾನ ಪಡೆದರೆ, ನಗರದ ಹೆಸರಾಂತ ಎಸ್‌ಬಿಆರ್ ಶಾಲೆಯ ಮಾಧವಿ ಹಾಗೂ ಮೇಘನಾ ಇಬ್ಬರೂ ತಲಾ 622 ಅಂಕಗಳನ್ನು ಗಳಿಸುವ ಮೂಲಕ ಜಂಟಿಯಾಗಿ ಜಿಲ್ಲೆಗೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ಜಿಲ್ಲೆಯ ಒಟ್ಟಾರೆ ಚಿತ್ರಣ
ಕಲ್ಯಾಣ ಕರ್ನಾಟಕ ಭಾಗದಲ್ಲಿ ಶೈಕ್ಷಣಿಕ ಸುಧಾರಣೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಜಿಲ್ಲೆಯ ಸಾಧನೆ ಗಮನಾರ್ಹವಾಗಿದೆ. ಪ್ರಸಕ್ತ ಸಾಲಿನಲ್ಲಿ ಕಲಬುರಗಿ ಜಿಲ್ಲೆಯು ಶೇ. 85.1ರಷ್ಟು ಫಲಿತಾಂಶ ದಾಖಲಿಸಿದೆ. ಕಳೆದ ವರ್ಷದ ಶೇ. 56.9ಕ್ಕೆ ಹೋಲಿಸಿದರೆ ಈ ಬಾರಿ ಜಿಲ್ಲೆಯ ಫಲಿತಾಂಶದಲ್ಲಿ ಶೇ. 28.2ರಷ್ಟು ಗಣನೀಯ ಏರಿಕೆ ಕಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ, ಶೇ. 94.10 ಉತ್ತೀರ್ಣ
ಕಲಬುರಗಿ ಜಿಲ್ಲೆಯಲ್ಲಿ ಒಟ್ಟು 37,352 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 31,770 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಸುಧಾರಿತ ಫಲಿತಾಂಶದೊಂದಿಗೆ ಪ್ರತಿಭಾನ್ವಿತ ವಿದ್ಯಾರ್ಥಿಗಳು ರಾಜ್ಯ ಮಟ್ಟದಲ್ಲಿ ಸ್ಥಾನ ಪಡೆದಿರುವುದು ಜಿಲ್ಲೆಯ ಹೆಮ್ಮೆಯನ್ನು ಹೆಚ್ಚಿಸಿದೆ.