ಕಲಬುರಗಿ, ಅ. 27: ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ-2026ರ ಮತ ಎಣಿಕೆಯಲ್ಲಿ (MLC Election Result 2026) ಮೊದಲ ಸುತ್ತಿನಲ್ಲೇ ಬಿಜೆಪಿ–ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು, ಎನ್ಡಿಎ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಅಲ್ಪ ಮುನ್ನಡೆ ಸಾಧಿಸಿದರೆ, ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ ಕೊಂಚ ಹಿನ್ನಡೆಯಲ್ಲಿದ್ದಾರೆ. ಹೀಗಾಗಿ ಆರಂಭಿಕ ಹಂತದಲ್ಲೇ ಫಲಿತಾಂಶ ಕುತೂಹಲ ಕೆರಳಿಸಿದ್ದು, ಕಣದಲ್ಲಿ ನೆಕ್ ಟು ನೆಕ್ ಫೈಟ್ ಮುಂದುವರಿದಿದೆ.
ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದ ಭಾಸ್ಕರ್ ಸಭಾಂಗಣದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಮೊದಲ ಸುತ್ತಿನ ಮತ ಎಣಿಕೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾಯಿತು. ಇದಕ್ಕೂ ಮುನ್ನ 144 ಮತಪೆಟ್ಟಿಗೆಗಳ ಮತಪತ್ರಗಳ ಬಂಡ್ಲಿಂಗ್ ಕಾರ್ಯ ಪೂರ್ಣಗೊಳಿಸಲಾಯಿತು.
ಚುನಾವಣಾ ವೀಕ್ಷಕ ಶಿವಕುಮಾರ ಕೆ.ಬಿ., ಚುನಾವಣಾಧಿಕಾರಿ ಜಹೀರಾ ನಸೀಮ್, ಅಭ್ಯರ್ಥಿಗಳು ಹಾಗೂ ಚುನಾವಣಾ ಏಜೆಂಟ್ಗಳ ಸಮ್ಮುಖದಲ್ಲಿ ಸ್ಟ್ರಾಂಗ್ರೂಂ ತೆರೆಯಲಾಯಿತು. ಬಳಿಕ ಮತಪತ್ರಗಳನ್ನು ಬಂಡ್ಲಿಂಗ್ ಮಾಡಿ, ಬ್ಯಾರೆಲ್ನಲ್ಲಿ ರ್ಯಾಂಡಮೈಜೇಷನ್ ಪ್ರಕ್ರಿಯೆ ನಡೆಸಲಾಯಿತು. ನಂತರ ಪ್ರಥಮ ಪ್ರಾಶಸ್ತ್ಯದ ಮತಗಳ ಎಣಿಕೆ ಆರಂಭಿಸಲಾಯಿತು.
ಕ್ಷೇತ್ರದಲ್ಲಿ ಒಟ್ಟು 13 ಅಭ್ಯರ್ಥಿಗಳು ಕಣದಲ್ಲಿದ್ದು, ಪ್ರಮುಖವಾಗಿ ಕಾಂಗ್ರೆಸ್ನ ಶರಣಪ್ಪ ಮಟ್ಟೂರ, ಬಿಜೆಪಿ–ಎನ್ಡಿಎಯ ಶಶೀಲ್ ಜಿ. ನಮೋಶಿ, ಆಮ್ ಆದ್ಮಿ ಪಕ್ಷದ ಸಾಯಬಣ್ಣಾ ಜಮಾದಾರ ಹಾಗೂ ಜೆಡಿಯು(ಯು)ನ ಶಂಕರೆಡ್ಡಿ ಪಾಟೀಲ್ ಸ್ಪರ್ಧಿಸಿದ್ದಾರೆ.
ಮೊದಲ ಸುತ್ತಿನ ಆರಂಭಿಕ ಮತಗಳಲ್ಲಿ ನಮೋಶಿ ಮುನ್ನಡೆ ಕಾಯ್ದುಕೊಂಡಿದ್ದರೂ, ಮಟ್ಟೂರ ಕೂಡ ಸಮೀಪದಲ್ಲೇ ಇರುವುದರಿಂದ ಫಲಿತಾಂಶದ ಚಿತ್ರಣ ಇನ್ನೂ ಸ್ಪಷ್ಟವಾಗಿಲ್ಲ. ಮುಂದಿನ ಸುತ್ತುಗಳಲ್ಲಿ ಮತಗಳ ಅಂತರ ಬದಲಾಗುವ ಸಾಧ್ಯತೆ ಇದ್ದು, ಎರಡೂ ಪ್ರಮುಖ ಅಭ್ಯರ್ಥಿಗಳ ನಡುವೆ ತೀವ್ರ ಪೈಪೋಟಿ ಮುಂದುವರಿದಿದೆ.