ಕಲಬುರಗಿ: ಕೃಷ್ಣಾ ಜಲಾಶಯದ ಎತ್ತರ ಹೆಚ್ಚಳಕ್ಕೆ ಮಹಾರಾಷ್ಟ್ರ ಹಾಗೂ ಆಂಧ್ರದವರು ಅಡಚಣೆ ಮಾಡಿದ್ದಾರೆ. ನಮ್ಮ ನೀರು ನಮ್ಮ ಹಕ್ಕು, ನಿಮಗೆ ಸಿಗಬೇಕಾದಂತಹ ನ್ಯಾಯ ಅದು. ರೈತರನ್ನು ಬದುಕಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ (DK Shivakumar) ತಿಳಿಸಿದರು. ಜಿಲ್ಲೆಯ ಚಿತ್ತಾಪುರದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳ ಭೂಮಿ ಪೂಜೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
ಈ ರಾಜ್ಯದ ಮುಂದಿನ ಭವಿಷ್ಯಕ್ಕಾಗಿ ಪ್ರಿಯಾಂಕ್ ಖರ್ಗೆ ಅವರನ್ನು ಕೊಟ್ಟಿದ್ದೀರಿ ನಿಮಗೆ ನಮಸ್ಕಾರಗಳು. ಸಾಧನೆ ಅದರ ಪಾಡಿಗೆ ಅದು ಆಗುವುದಿಲ್ಲ, ಅದಕ್ಕೆ ಶ್ರಮ ಮತ್ತು ಛಲ ಇರಬೇಕು. ಜನರ ಬದುಕು ಬದಲಾವಣೆ ಮಾಡುತ್ತೇನೆ ಎಂಬ ಹಠ ಇರಬೇಕು. ಮಲ್ಲಿಕಾರ್ಜುನ ಖರ್ಗೆ ಅವರ ಮಾರ್ಗದರ್ಶನದಲ್ಲಿ ಪ್ರಿಯಾಂಕ್ ಖರ್ಗೆ ಅವರಿಗೆ ಯಾವುದೇ ಜವಾಬ್ದಾರಿ ಕೊಟ್ಟರೂ ಪಕ್ಷದ ಅಭಿವೃದ್ಧಿಗಾಗಿ, ರಾಜ್ಯದ ಅಭಿವೃದ್ಧಿಗಾಗಿ ಹಾಗೂ ಎಲ್ಲ ವರ್ಗದ ಜನರಿಗೆ ನ್ಯಾಯವನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ನಾಯಕರ ಜೊತೆಗೆ ನೀವು ನಿಂತಿದ್ದಕ್ಕೆ ನಿಮಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ಸಿಕ್ಕ ಅವಕಾಶದಲ್ಲಿ ಜನರ ಕಣ್ಣೀರು ಒರೆಸುವಂತಹ ಕೆಲಸವನ್ನು ನಮ್ಮ ನಾಯಕರು ಮಾಡಿಕೊಂಡು ಬರುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರ ದೀರ್ಘವಾದ ಶ್ರಮದಿಂದ 371 (ಜೆ) ತಂದು ನಿಮ್ಮ ಋಣ ತೀರಿಸುವ ಕೆಲಸ ಮಾಡಿದ್ದಾರೆ. ನಮ್ಮ ಇಲಾಖೆಯಿಂದ 365 ಕೋಟಿ ರೂ. ವೆಚ್ಚದ ಯೋಜನೆಗಳನ್ನು ಪ್ರಾರಂಭ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಖರ್ಗೆ ಸಾಹೇಬರ 50 ವರ್ಷಗಳ ತಪಸ್ಸಿನಿಂದ ಕಲ್ಯಾಣ ಕರ್ನಾಟಕಕ್ಕೆ ಅವರು ಕೊಟ್ಟ ಕಾರ್ಯಕ್ರಮಗಳನ್ನು ಇಡೀ ರಾಜ್ಯ ಹಾಗೂ ದೇಶ ನೆನೆಯುತ್ತಿದೆ. ರಾಜ್ಯದಲ್ಲಿ ನೀರಾವರಿ ಗ್ಯಾರಂಟಿ ಕೊಟ್ಟಿದ್ದೇವೆ. ಎಲ್ಲಾ ಕೆರೆಗಳನ್ನು ತುಂಬಿಸುವ ಕೆಲಸ ಮಾಡುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ 400ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ್ದೇವೆ. ನಿಮ್ಮ ಸಹಕಾರದಿಂದ ಹಲವು ಕಾರ್ಯಕ್ರಮಗಳನ್ನೂ ಕೊಟ್ಟಿದ್ದೇವೆ. ಪ್ರಿಯಾಂಕ್ ಖರ್ಗೆ ಹಾಗೂ ನಮ್ಮ ಪಕ್ಷದ ನಾಯಕರ ಮೇಲೆ ನಿಮ್ಮ ಆಶೀರ್ವಾದ ಇರಲಿ ಎಂದು ಆಶಿಸುತ್ತೇನೆ ಎಂದು ಹೇಳಿದ್ದಾರೆ.
Karnataka Budget 2026: ಸಾಲದ ಪ್ರಮಾಣ ಹೆಚ್ಚಳವೆಂಬುದು ಸತ್ಯಕ್ಕೆ ದೂರವಾದ ಮಾತು: ಸಿಎಂ ಸಿದ್ದರಾಮಯ್ಯ
ಕಾರ್ಯಕ್ರಮದಲ್ಲಿ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಪ್ರಿಯಾಂಕ್ ಖರ್ಗೆ ಹಾಗೂ ಶರಣಪ್ರಕಾಶ್ ಪಾಟೀಲ್, ಶರಣಬಸಪ್ಪ ದರ್ಶನಾಪುರ ಮತ್ತಿತರರು ಉಪಸ್ಥಿತರಿದ್ದರು.