ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kalaburagi News: ಕರ್ತವ್ಯದ ವೇಳೆಯೇ ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಕಾನ್‌ಸ್ಟೇಬಲ್‌ ಆತ್ಮಹತ್ಯೆ!

ಕಲಬುರಗಿ ನಗರದ ಜಗತ್ ವೃತ್ತದ ಬಳಿ ಪೊಲೀಸ್ ವಾಹನದಲ್ಲೇ ಕಾನ್‌ಸ್ಟೇಬಲ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರು ಕಲಬುರಗಿ ಸಿಎಆರ್ ವಿಭಾಗದಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಲಬುರಗಿ: ನಗರದ ಜಗತ್ ವೃತ್ತದ ಬಳಿ ಪೊಲೀಸ್ ವಾಹನದಲ್ಲೇ ಸಿಎಆರ್ ಕಾನ್‌ಸ್ಟೇಬಲ್‌ವೊಬ್ಬರು ರೈಫಲ್‌ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ. ಮೃತರನ್ನು ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ ನಿವಾಸಿ ಶಿವಕುಮಾರ್ ಎಂದು ಗುರುತಿಸಲಾಗಿದೆ. ಇವರು ಕಲಬುರಗಿ ಸಿಎಆರ್ ವಿಭಾಗದಲ್ಲಿ ಕಾನ್‌ಸ್ಟೇಬಲ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮುಖ್ಯಮಂತ್ರಿ ನಗರ ಪ್ರವಾಸದಲ್ಲಿದ್ದ ಹಿನ್ನೆಲೆಯಲ್ಲಿ ಇತರ ಪೊಲೀಸ್ ಸಿಬಂದಿಯೊಂದಿಗೆ ಶಿವಕುಮಾರ್ ಕೂಡ ಬಂದೋಬಸ್ತ್ ಕರ್ತವ್ಯದಲ್ಲಿದ್ದರು. ಕರ್ತವ್ಯದ ವೇಳೆ ಪೊಲೀಸ್ ವಾಹನದಲ್ಲಿದ್ದ 303 ರೈಫಲ್‌ನಿಂದ ಎದೆಗೆ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಶಿವಕುಮಾ‌ರ್ ಅವರನ್ನು ಸುಮಾರು ಮೂರು ತಿಂಗಳ ಹಿಂದೆ ಬೆಂಗಳೂರಿನಿಂದ ಕಲಬುರಗಿಗೆ ವರ್ಗಾವಣೆ ಮಾಡಲಾಗಿತ್ತು. ಬಳಿಕ ನಗರ ಸಶಸ್ತ್ರ ಮೀಸಲು ಪಡೆಯಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದರು. ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದ ಶಿವಕುಮಾರ್, ಅದರ ಮರುದಿನವೇ ಆತ್ಮಹತ್ಯೆಗೆ ಶರಣಾಗಿರುವುದು ಕುಟುಂಬಸ್ಥರು ಹಾಗೂ ಸಹೋದ್ಯೋಗಿಗಳಲ್ಲಿ ನೋವುಂಟು ಮಾಡಿದೆ.

ನನಗೆ ಬದುಕು ಸಾಕಾಗಿದೆ; ಪ್ರಿಯಕರನಿಗೆ ಕೊನೆಯ ಮೆಸೇಜ್‌ ಮಾಡಿ ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಇನ್ನು ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ನಗರ ಪೊಲೀಸ್ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.