ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ತಡೋಳಾ ಬಳಿ ಪಿಸ್ತೂಲ್‌ನಿಂದ ಗುಂಡಿನ ಸದ್ದು; ಇಬ್ಬರ ಬಂಧನ, ಮಾರಕಾಸ್ತ್ರ, ಖಾರದ ಪುಡಿ ಜಪ್ತಿ

Alanda News: ಜನರನ್ನು ಹಾಗೂ ವಾಹನ ಸವಾರರನ್ನು ಬೆದರಿಸಿ ದರೋಡೆಗೆ ಸಜ್ಜಾಗಿ ಕುಳಿತಿದ್ದ ಐವರು ಸಶಸ್ತ್ರ ದುಷ್ಕರ್ಮಿಗಳ ಗ್ಯಾಂಗ್‌ ಮೇಲೆ ಪೊಲೀಸರು ದಾಳಿ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಆಳಂದ ತಾಲೂಕಿನ ತಡೋಳಾ ಗ್ರಾಮದ ಬಳಿ ಜರುಗಿದೆ.

ಸಾಂದರ್ಭಿಕ ಚಿತ್ರ.

ಆಳಂದ, ಅ.27: ಜನರನ್ನು ಹಾಗೂ ವಾಹನ ಸವಾರರನ್ನು ಬೆದರಿಸಿ ದರೋಡೆಗೆ ಸಜ್ಜಾಗಿ ಕುಳಿತಿದ್ದ ಐವರು ಸಶಸ್ತ್ರ ದುಷ್ಕರ್ಮಿಗಳ ಗ್ಯಾಂಗ್‌ ಮೇಲೆ ಪೊಲೀಸರು ಹಾಗೂ ಗ್ರಾಮಸ್ಥರು ದಾಳಿ ನಡೆಸಿದ್ದು, ಇಬ್ಬರನ್ನು ಸಿನಿಮೀಯ ರೀತಿಯಲ್ಲಿ ಬೆನ್ನಟ್ಟಿ ಬಂಧಿಸಿದ್ದಾರೆ. ಈ ವೇಳೆ ಓರ್ವ ಆರೋಪಿ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿ ಬೆದರಿಕೆ ಹಾಕಿದ್ದು, ಮೂವರು ಕಬ್ಬಿನ ಹೊಲದತ್ತ ಪರಾರಿಯಾಗಿದ್ದಾರೆ.

ಸೋಮವಾರ ಮಧ್ಯಾಹ್ನ 1.30ರಿಂದ ಸಂಜೆ 5 ಗಂಟೆಯೊಳಗೆ ತಡೋಳಾ ಗ್ರಾಮದ ಸೀಮಾಂತರದ ಖಜೂರಿ ಬಾರ್ಡರ್‌ನಿಂದ ತಡೋಳಾ ಕಡೆ ತೆರಳುವ ಆಳಂದ ಕ್ರಾಸ್‌ ಬಳಿ ಐವರು ಮಾರಕಾಸ್ತ್ರಗಳೊಂದಿಗೆ ದರೋಡೆಗೆ ಹೊಂಚು ಹಾಕಿದ್ದಾರೆಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಕೂಡಲೇ ಪಿಎಸ್‌ಐ ಚಂದ್ರಕಾಂತ್ ನೇತೃತ್ವದ ತಂಡ ಸ್ಥಳಕ್ಕೆ ಧಾವಿಸಿತು.

ಇದೇ ವೇಳೆ ಅನುಮಾನಗೊಂಡ ವಿಶ್ವನಾಥ ಪಾಟೀಲ, ವಿಠಲ ಮಾನೆ, ಸುಭಾಷ ಕಲಶೆಟ್ಟಿ ಸೇರಿದಂತೆ 10–15 ಮಂದಿ ಗ್ರಾಮಸ್ಥರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾದರು. ಸುತ್ತುವರಿಯುವಿಕೆ ಅರಿತ ಗ್ಯಾಂಗ್‌ನ ಸದಸ್ಯನೊಬ್ಬ ಪಿಸ್ತೂಲ್‌ನಿಂದ ಎರಡು ಸುತ್ತು ಗುಂಡು ಹಾರಿಸಿ ಭೀತಿ ಹುಟ್ಟಿಸಿದ. ಬಳಿಕ ಕಬ್ಬಿನ ಹೊಲ ಹಾಗೂ ತೋಟದ ದಾರಿಯಲ್ಲಿ ಪರಾರಿಯಾಗಲು ಯತ್ನಿಸಿದ್ದ ವೇಳೆ ಪೊಲೀಸರು ಹಾಗೂ ಗ್ರಾಮಸ್ಥರು ಬೆನ್ನಟ್ಟಿ ದತ್ತಾತ್ರೇಯ ಮುಲಗೆ (25) ಹಾಗೂ ಗಣೇಶ್ ಬಿರಾದಾರ್ (22) ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಸುಮಾರು ಮೂರು ಅಡಿ ಉದ್ದದ ಕಬ್ಬಿಣದ ತಲವಾರ, ಮೊಬೈಲ್, ಮುಖಕ್ಕೆ ಕಟ್ಟಿಕೊಳ್ಳುವ ದಸ್ತಿ ಹಾಗೂ ಖಾರದ ಪುಡಿ ಜಪ್ತಿ ಮಾಡಲಾಗಿದೆ.

Gokarna Boat Tragedy: ತದಡಿ ಬಂದರಿನಲ್ಲಿ ದುರಂತ; ಬೋಟ್‌ ಸ್ವಚ್ಛಗೊಳಿಸುವಾಗ ಉಸಿರುಗಟ್ಟಿ ಮೂವರು ಮೀನುಗಾರರ ಸಾವು, ಮತ್ತೊಬ್ಬನ ಸ್ಥಿತಿ ಗಂಭೀರ

ಮೂವರಿಗಾಗಿ ಶೋಧ

ಸಂಜು ಅಲಿಯಾಸ್ ಸಂಜಯ್ ಸಿಂಗ್, ಕಾರ್ತಿಕ್ ಕಲ್ಲಪ್ಪ ಬೋಕಳೆ ಹಾಗೂ ದತ್ತು ವೆಂಕಟ ಜಮಾದಾರ್‌ಗಾಗಿ ಶೋಧ ಮುಂದುವರಿದಿದೆ. ಇವರ ಪೈಕಿ ಸಂಜು ಪಿಸ್ತೂಲ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಪ್ರಕರಣ ಆಳಂದ ಠಾಣೆಯಲ್ಲಿ ದಾಖಲಾಗಿದೆ.