ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಲಬುರಗಿ ಜೈಲಿನಲ್ಲಿ ಆರ್.ಡಿ. ಪಾಟೀಲ್ ಕಿರಿಕ್; ಸ್ಥಳಾಂತರಕ್ಕೆ ಜೈಲಾಧಿಕಾರಿ ಪತ್ರ

RD Patil: ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‌ ಕಿರಿಕ್‌ ಮಿತಿಮೀರಿದೆ. ಕಲಬುರಗಿ ಕೇಂದ್ರ ಕಾರಾಗೃಹದಲ್ಲಿರುವ ಬೇರೆ ಜೈಲಿಗೆ ವರ್ಗಾಯಿಸುವಂತೆ ಜೈಲು ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಕಾರಾಗೃಹ ಇಲಾಖೆಯ ಡಿಐಜಿಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಪಿಎಸ್‌ಐ ನೇಮಕಾತಿ ಹಗರಣದ ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‌.

ಕಲಬುರಗಿ, ಡಿ.30: ಪಿಎಸ್‌ಐ ನೇಮಕಾತಿ ಹಗರಣದ (PSI recruitment scam) ಪ್ರಮುಖ ಆರೋಪಿ ಆರ್.ಡಿ. ಪಾಟೀಲ್‌ನ ಆಟಾಟೋಪವು ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಮಿತಿಮೀರಿದ್ದು, ಆತನನ್ನು ಬೇರೆ ಜೈಲಿಗೆ ಸ್ಥಳಾಂತರಿಸುವಂತೆ ಜೈಲು ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಕಾರಾಗೃಹ ಇಲಾಖೆಯ ಡಿಐಜಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಇದರ ಬೆನ್ನಲ್ಲೇ ಆರ್.ಡಿ. ಪಾಟೀಲ್ (RD Patil), ಜೈಲಾಧಿಕಾರಿಗಳ ವಿರುದ್ಧವೇ ಗಂಭೀರ ಆರೋಪ ಮಾಡಿರುವ ವಿಡಿಯೊವೊಂದನ್ನು ಬಿಡುಗಡೆ ಮಾಡಿರುವುದು ಸಂಚಲನ ಮೂಡಿಸಿದೆ.

ಜೈಲು ಸಿಬ್ಬಂದಿ ಮೇಲೆ ಹಲ್ಲೆ: ವಿಚಾರಣೆಗೆ ಒಳಪಡಿಸಿದ ಪೊಲೀಸರು

ಬ್ಯಾರಕ್ ತಪಾಸಣೆಗೆ ತೆರಳಿದ್ದ ಜೈಲು ಸಿಬ್ಬಂದಿ ಶಿವಕುಮಾರ್ ಅವರ ಮೇಲೆ ಹಲ್ಲೆ ಮಾಡಿದ ಆರೋಪದ ಹಿನ್ನೆಲೆ, ಫರಹತಾಬಾದ್ ಪೊಲೀಸರು ಆರ್.ಡಿ. ಪಾಟೀಲ್‌ನನ್ನು ಜೈಲಿನಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕಳೆದ ಒಂದು ತಿಂಗಳ ಅವಧಿಯಲ್ಲಿ ಸಿಬ್ಬಂದಿ ಜತೆ ಕಿರಿಕ್ ಮಾಡಿಕೊಂಡಿದ್ದಕ್ಕಾಗಿ ಈತನ ವಿರುದ್ಧ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಾಗಿವೆ. ಎಡಿಜಿಪಿ ಅಲೋಕ್ ಕುಮಾರ್ ಅವರು ಕಾರಾಗೃಹ ಇಲಾಖೆಯ ಜವಾಬ್ದಾರಿ ವಹಿಸಿಕೊಂಡ ನಂತರ ಜೈಲಿನಲ್ಲಿ ಬಿಗಿ ನಿಯಮ ಜಾರಿಗೊಳಿಸಲಾಗಿದ್ದು, ಇದನ್ನು ವಿರೋಧಿಸಿ ಆರ್.ಡಿ. ಪಾಟೀಲ್‌ ಪದೇ ಪದೇ ಸಿಬ್ಬಂದಿ ಜತೆ ಸಂಘರ್ಷಕ್ಕಿಳಿಯುತ್ತಿದ್ದಾನೆ ಎನ್ನಲಾಗಿದೆ.

ಸ್ಥಳಾಂತರಕ್ಕೆ ಮನವಿ

ಆರ್.ಡಿ. ಪಾಟೀಲ್ ಜೈಲಿನ ವಾತಾವರಣ ಹಾಳು ಮಾಡುತ್ತಿದ್ದಾನೆ ಮತ್ತು ಇತರ ಕೈದಿಗಳಿಗೂ ತೊಂದರೆ ನೀಡುತ್ತಿದ್ದಾನೆ. ಈತನನ್ನು ಕೂಡಲೇ ಕಲಬುರಗಿಯಿಂದ ಬೇರೆ ಜೈಲಿಗೆ ಶಿಫ್ಟ್ ಮಾಡಿ ಎಂದು ಮುಖ್ಯ ಅಧೀಕ್ಷಕಿ ಡಾ. ಅನಿತಾ ಅವರು ಜೈಲು ಅಧೀಕ್ಷಕಿ ಉತ್ತರ ವಲಯ (ಬೆಳಗಾವಿ) ಡಿಐಜಿಗೆ ಪತ್ರ ಬರೆದಿದ್ದಾರೆ. ಆದರೆ, ಪತ್ರ ಬರೆದು ಹತ್ತು ದಿನ ಕಳೆದರೂ ಮೇಲಾಧಿಕಾರಿಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತಿಳಿದುಬಂದಿದೆ.

ಕೋಲಿ, ಕಬ್ಬಲಿಗ ಸಮಾಜವನ್ನು ಎಸ್‌ಟಿ ಪಟ್ಟಿಗೆ ಸೇರ್ಪಡಿಸಲು ಆಗ್ರಹ; ಕಲಬುರಗಿಯಲ್ಲಿ ಬೃಹತ್ ಪ್ರತಿಭಟನೆ

ಕಿಂಗ್‌ಪಿನ್ ಹರಿಬಿಟ್ಟ ‘ವಿಡಿಯೊ ಬಾಂಬ್ʼ

ತನ್ನನ್ನು ಸ್ಥಳಾಂತರ ಮಾಡಲು ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಂತೆಯೇ ಆರ್.ಡಿ. ಪಾಟೀಲ್ ತನ್ನ ಬೆಂಬಲಿಗರ ಮೂಲಕ ಜೈಲಿನ ಒಳಗಿನಿಂದ ವಿಡಿಯೋವೊಂದನ್ನು ಬಿಡುಗಡೆ ಮಾಡಿಸಿದ್ದಾನೆ. ಕೆಲವು ಜೈಲಾಧಿಕಾರಿಗಳು ನನ್ನ ಬಳಿ ಹಣಕ್ಕೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ನನ್ನ ಮೇಲೆ ಅಟ್ಯಾಕ್ ಮಾಡಿಸುವ ಸಂಚು ನಡೆಸಿದ್ದಾರೆ ಎಂದು ವಿಡಿಯೊದಲ್ಲಿ ಆರೋಪಿಸುವ ಮೂಲಕ ಅಧಿಕಾರಿಗಳಿಗೆ ತಿರುಗೇಟು ನೀಡಲು ಯತ್ನಿಸಿದ್ದಾನೆ.‌ ಒಟ್ಟಿನಲ್ಲಿ, ಪಿಎಸ್‌ಐ ಹಗರಣದ ಕಿಂಗ್‌ಪಿನ್ ಜೈಲಿನ ಒಳಗಿದ್ದೂ ಅಧಿಕಾರಿಗಳ ನಿದ್ದೆಗೆಡಿಸುತ್ತಿದ್ದು, ಸರ್ಕಾರ ಈ ಬಗ್ಗೆ ಎಂತಹ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.