ಕಲಬುರಗಿ, ಏ. 30: ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿರುವ ನಾಯಕತ್ವ ಬದಲಾವಣೆ ಹಾಗೂ ತಾವು ಮುಖ್ಯಮಂತ್ರಿಯಾಗುವ ವಿಚಾರದ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮಾರ್ಮಿಕ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿ ಸದ್ಯಕ್ಕೆ ಮುಖ್ಯಮಂತ್ರಿ ಇದ್ದಾರೆ. ಹೀಗಾಗಿ, ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಹೈಕಮಾಂಡ್ ಸೂಚಿಸಿದರೆ ಖರ್ಗೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ ಎಂಬ ಚರ್ಚೆಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ ಅವರು, ಪಕ್ಷಕ್ಕಾಗಿ ದಶಕಗಳಿಂದ ಪ್ರಾಮಾಣಿಕವಾಗಿ ದುಡಿದಿದ್ದೇವೆ. ನಮ್ಮ ಹಣೆಬರಹಕ್ಕಿಂತಲೂ ಪಕ್ಷದ ಸಿದ್ಧಾಂತ ನಮಗೆ ಮುಖ್ಯ. ನಾಯಕತ್ವದ ಬದಲಾವಣೆಯ ಬಗ್ಗೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಚರ್ಚಿಸಿ ಸೂಕ್ತ ಸಮಯದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು. ಸಿಎಂ ಬದಲಾವಣೆಯ ಸಮಯ ಬಂದಾಗ ನಾವೆಲ್ಲರೂ ಕುಳಿತು ಚರ್ಚಿಸುತ್ತೇವೆ. ಅಲ್ಲಿಯವರೆಗೆ ಇಂತಹ ಚರ್ಚೆಗಳಿಗೆ ಆಸ್ಪದವಿಲ್ಲ ಎಂದು ಹೇಳಿದರು. ಅಲ್ಲದೆ, ರಾಜ್ಯ ಕಾಂಗ್ರೆಸ್‌ನಲ್ಲಿರುವ ಸಣ್ಣಪುಟ್ಟ ಗೊಂದಲಗಳನ್ನು ಶೀಘ್ರದಲ್ಲೇ ಬಗೆಹರಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಂಚರಾಜ್ಯಗಳಲ್ಲಿ ಮೈತ್ರಿಕೂಟಕ್ಕೆ ಜಯ: ಖರ್ಗೆ ವಿಶ್ವಾಸ
ಇದೇ ವೇಳೆ ಪಂಚರಾಜ್ಯಗಳ ಚುನಾವಣೋತ್ತರ ಸಮೀಕ್ಷೆಗಳ ಬಗ್ಗೆ ಮಾತನಾಡಿದ ಅವರು, ಸಮೀಕ್ಷೆಗಳು ಏನೇ ಹೇಳಿದರೂ ತಮಿಳುನಾಡು ಮತ್ತು ಕೇರಳದಲ್ಲಿ ನಮ್ಮ ಮೈತ್ರಿಕೂಟ ಅಧಿಕಾರ ಹಿಡಿಯುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಸ್ಸಾಂನಲ್ಲಿ ಎಕ್ಸಿಟ್ ಪೋಲ್ ಭವಿಷ್ಯಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಗೆಲ್ಲಲಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ದಬ್ಬಾಳಿಕೆ ನಡೆಸಿದ್ದರೂ ಟಿಎಂಸಿ ಮುನ್ನಡೆ ಸಾಧಿಸಲಿದೆ. ಫಲಿತಾಂಶದ ಬಳಿಕ ಮಮತಾ ಬ್ಯಾನರ್ಜಿ ಅವರಿಗೆ ಬೆಂಬಲ ನೀಡುವ ಕುರಿತು ಹೈಕಮಾಂಡ್ ತೀರ್ಮಾನಿಸಲಿದೆ ಎಂದರು.
ಡಿ.ಕೆ ಶಿವಕುಮಾರ್ ಹುಟ್ಟುಹಬ್ಬದಂದು ಗುಡ್ ನ್ಯೂಸ್ ಸಿಗುತ್ತಾ?; ಆ ವಿಚಾರ ನನಗೆ ಗೊತ್ತಿಲ್ಲ ಎಂದ ಡಿ.ಕೆ. ಸುರೇಶ್
![]()
ಬೆಂಗಳೂರಿನಲ್ಲಿ ಕಾಂಪೌಂಡ್ ಕುಸಿದು ಸಂಭವಿಸಿದ ಸಾವು ನೋವುಗಳು ಅತ್ಯಂತ ದುರದೃಷ್ಟಕರ. ರಸ್ತೆ ಬದಿ ವ್ಯಾಪಾರಿಗಳನ್ನು ತೆರವುಗೊಳಿಸಿದರೆ ಹೊಟ್ಟೆಯ ಮೇಲೆ ಹೊಡೆಯುತ್ತೀರಿ ಎನ್ನುತ್ತಾರೆ. ಆದರೆ ಜನರ ಪ್ರಾಣ ರಕ್ಷಣೆ ಮಾಡುವುದು ಸರ್ಕಾರದ ಆದ್ಯತೆಯಾಗಬೇಕು. ಅಪಾಯಕಾರಿ ಸ್ಥಳಗಳಲ್ಲಿ ವ್ಯಾಪಾರಕ್ಕೆ ಅವಕಾಶ ನೀಡದೆ ಅವರಿಗೆ ಪರ್ಯಾಯ ಸುರಕ್ಷಿತ ಜಾಗ ಕಲ್ಪಿಸಬೇಕು.
- ಮಲ್ಲಿಕಾರ್ಜುನ ಖರ್ಗೆ, ಎಐಸಿಸಿ ಅಧ್ಯಕ್ಷ.