ಕಲಬುರಗಿ: ಡಿಸಿಎಂ ಸ್ಥಾನಕ್ಕೆ ಇನ್ನೂ ಯಾವುದೇ ಪ್ರಸ್ತಾಪ ಬಂದಿಲ್ಲ. ಜೂನ್ 3ರ ಬಳಿಕ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ಸಿಎಂ ಜತೆ ಎಷ್ಟು ಜನ ಸಚಿವರು ಪ್ರಮಾಣ ವಚನ ಸ್ವಿಕರಿಸುತ್ತಾರೆ ಎನ್ನುವುದೂ ನಿರ್ಧಾರ ಆಗಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟನೆ ನೀಡಿದ್ದಾರೆ.
ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಡಿಕೆಶಿ ಸಿಎಂ ಆದ ಮೇಲೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಹಜವಾಗಿ ಬದಲಾವಣೆ ಆಗೆಯೇ ಆಗುತ್ತದೆ. ಜನ ಬೆಂಬಲ ಇರುವ ಸೂಕ್ತ ವ್ಯಕ್ತಿಯನ್ನೇ ನೇಮಕ ಮಾಡುತ್ತೇವೆ. ಸಿಎಂ ಅವರಿಗೂ ಒಳ್ಳೆಯ ಕೋ-ಆರ್ಡಿನೇಷನ್ ಇರಬೇಕು. ಅಂತಹ ವ್ಯಕ್ತಿಯನ್ನ ಆಯ್ಕೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಡಿಕೆ ಆಡಳಿತದಲ್ಲಿ ಡಿಸಿಎಂ ಹುದ್ದೆಗಳಿಗೆ ಕೊಕ್?
ನಿಯೋಜಿತ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ಸರಕಾರದಲ್ಲಿ ಉಪ ಮುಖ್ಯಮಂತ್ರಿ ಹುದ್ದೆಗಳನ್ನು ಕೈ ಬಿಡುವ ಗಂಭೀರ ಚಿಂತನೆ ಶುರುವಾಗಿದೆ. ಕೇವಲ ಎರಡು ಡಿಸಿಎಂ ಹುದ್ದೆಗಳಿಗೆ ಮಾಡಲಾಗಿದ್ದ ಪ್ರಸ್ತಾಪ ದಿನ ಕಳೆದಂತೆ ಪೈಪೋಟಿ ಹೆಚ್ಚಾಗಿ ನಾಲ್ಕೈದು ಡಿಸಿಎಂ ಹುದ್ದೆಗಳವರೆಗೂ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಆ ಪ್ರಸ್ತಾಪವನ್ನು ಕೈಬಿಡಬೇಕು ಎಂದು ಪಕ್ಷದ ವರಿಷ್ಠರು ಆಲೋಚಿಸಿದ್ದಾರೆ ಎನ್ನಲಾಗಿದೆ.
ಈ ಮಧ್ಯೆ ಕಿರಿಯರಿಗೆ ಡಿಸಿಎಂ ಹುದ್ದೆಗಳನ್ನು ನೀಡಿದರೆ ಹಿರಿಯರಿಗೂ ನೀಡಬೇಕಾದ ಅನಿವಾರ್ಯ ಎದುರಾಗುತ್ತದೆ. ಜತೆಗೆ ಸಂಪುಟದಲ್ಲಿ ಅವಕಾಶ ಸಿಗದ ಹಿರಿಯರಿಗೆ ಅಪಮಾನ ಮಾಡಿದಂತಾಗುತ್ತದೆ ಎನ್ನುವ ಹಿನ್ನೆಲೆಯಲ್ಲಿ ಡಿಸಿಎಂ ಹುದ್ದೆಗಳೇ ಬೇಡ ಎನ್ನುವ ಚರ್ಚೆ ಶುರುವಾಗಿದೆ. ಇನ್ನು ಡಿಸಿಎಂ ಹುದ್ದೆಗಳಿಗೆ ಕಚ್ಚಾಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ಡಿಸಿಎಂ ಹುದ್ದೆಗಳ ಬಗ್ಗೆ ಆಸಕ್ತಿ ತೋರುತ್ತಿಲ್ಲ ಎಂದು ಮೂಲಗಳು ನಡೆಸಿವೆ. ಉಪಮುಖ್ಯಮಂತ್ರಿ ಹುದ್ದೆಗಳು ಹೆಚ್ಚಾದಷ್ಟು ಆಡಳಿತ ದಲ್ಲಿ ಕಿರಿಕಿರಿ ಉಂಟಾಗುವ ಸಾಧ್ಯತೆಯಿದ್ದು, ಇದರಿಂದ ಸಚಿವರಲ್ಲಿ ಭಿನ್ನಾಭಿಪ್ರಾಯಕ್ಕೆ ದಾರಿಯಾಗಲಿದೆ ಎನ್ನುವುದು ಡಿಕೆಶಿ ಆಪ್ತರ ವಾದ.
ಇದೆಲ್ಲಕ್ಕಿಂತ ಮುಖ್ಯವಾಗಿ ಹೊಸ ಮುಖ್ಯಮಂತ್ರಿ ಅಧಿಕಾರ ಸ್ವೀಕಾರವಾಗಬೇಕು. ನಂತರ ಸಚಿವ ಸಂಪುಟ ವಿಸ್ತರಣೆ ಆಗಬೇಕು. ಆದರೆ ಅದಕ್ಕೂ ಮುನ್ನವೇ ಉಪಮುಖ್ಯಮಂತ್ರಿ ಹುದ್ದೆಗೆ ಕಚ್ಚಾಟ ನಡೆಯುತ್ತಿರುವುದು ಪಕ್ಷದ ವರಿಷ್ಠರಿಗೆ ಹೊಸ ತಲೆನೋವು ತಂದಿದ್ದು, ಸದ್ಯಕ್ಕೆ ಇದರ ಸಹವಾಸವೇ ಬೇಡ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಹೀಗಾಗಿ ಸದ್ಯ ನಿರ್ಧಾರವಾಗಿರುವಂತೆ ಜೂನ್ 3ರಂದು ಸಂಜೆ 5 ಗಂಟೆಗೆ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಪದಗ್ರಹಣ ಮಾಡಲಿದ್ದು, ಜತೆಗೆ 10 ರಿಂದ 15 ನೂತನ ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇದಾದ ನಂತರ ಸಚಿವರಿಗೆ ಖಾತೆ ಹಂಚಿಕೆ ನಡೆಯಲಿದ್ದು, ಆಗ ತೀರಾ ಅನಿವಾರ್ಯ ವಾದರೆ ಮಾತ್ರ ಯತೀಂದ್ರ ಸಿದ್ದರಾಮಯ್ಯ ಹಾಗೂ ಪ್ರಿಯಾಂಕ್ ಖರ್ಗೆ ಅವರಿಬ್ಬರಿಗೆ ಡಿಸಿಎಂ ಹುದ್ದೆ ನೀಡುವ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.