ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಕಲಬುರಗಿಯಲ್ಲಿ ‘ಗನ್’ ಬೆನ್ನಲ್ಲೇ ಈಗ ‘ಮಾರಕಾಸ್ತ್ರ’ಗಳ ಅಬ್ಬರ: ಮದುವೆ ಮೆರವಣಿಗೆಯಲ್ಲಿ ಪುಂಡರ ನೃತ್ಯ!

ಕಲಬುರಗಿ ನಗರದ ಶಕ್ತಿನಗರ ಬಡಾವಣೆಯಲ್ಲಿ ನಡೆದ ಮದುವೆ ಮೆರವಣಿಗೆಯೊಂದರಲ್ಲಿ ಯುವಕರು ಮಾರಕಾಸ್ತ್ರ ಹಿಡಿದು ಡ್ಯಾನ್ಸ್‌ ಮಾಡಿದ್ದಾರೆ. 'ಮೇ ಹೂ ಡಾನ್' ಚಿತ್ರದ ಹಾಡಿಗೆ ಕೈಯಲ್ಲಿ ಲಾಂಗ್, ಮಚ್ಚು ಹಿಡಿದು ಯುವಕರು ನೃತ್ಯ ಮಾಡಿದ್ದು, ಇಂತಹವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕಲಬುರಗಿಯಲ್ಲಿ ಮಾರಕಾಸ್ತ್ರ ಹಿಡಿದು ಯುವಕರ ಡ್ಯಾನ್ಸ್.

ವಿಶ್ವವಾಣಿ ಸುದ್ದಿಮನೆ, ಕಲಬುರಗಿ: ಶಾಂತಿಯ ತೋಟದಂತಿದ್ದ ಕಲಬುರಗಿ ಜಿಲ್ಲೆ ಈಗ ಬಿಹಾರದ ಹಾದಿ ಹಿಡಿಯುತ್ತಿದೆಯೇ? ಇಂತಹದೊಂದು ಆತಂಕ ಈಗ ಸಾರ್ವಜನಿಕ ವಲಯದಲ್ಲಿ ಎದುರಾಗಿದೆ. ಇತ್ತೀಚೆಗಷ್ಟೇ ಕಾಂಗ್ರೆಸ್ ಮುಖಂಡರೊಬ್ಬರು ಗನ್ ಹಿಡಿದು ಡ್ಯಾನ್ಸ್ ಮಾಡಿದ್ದ ಘಟನೆ ಮಾಸುವ ಮುನ್ನವೇ, ಈಗ ಪುಡಿ ರೌಡಿಗಳು ಮದುವೆ ಮೆರವಣಿಗೆಯೊಂದರಲ್ಲಿ ಬಹಿರಂಗವಾಗಿ ಮಾರಕಾಸ್ತ್ರಗಳನ್ನು ಪ್ರದರ್ಶಿಸಿ ಭೀತಿ ಸೃಷ್ಟಿಸಿದ್ದಾರೆ.

ನಗರದ ಶಕ್ತಿನಗರ ಬಡಾವಣೆಯಲ್ಲಿ ನಡೆದ ಮದುವೆ ಮೆರವಣಿಗೆಯೊಂದರಲ್ಲಿ ಈ ಕೃತ್ಯ ನಡೆದಿದೆ. 'ಮೇ ಹೂ ಡಾನ್' ಚಿತ್ರದ ಹಾಡಿಗೆ ಹುಚ್ಚೆದ್ದು ಕುಣಿದಿರುವ ಪುಂಡರು, ಕೈಯಲ್ಲಿ ಲಾಂಗ್, ಮಚ್ಚು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಪ್ರದರ್ಶಿಸಿದ್ದಾರೆ. ಪೊಲೀಸರ ಭಯವೇ ಇಲ್ಲದಂತೆ ರಸ್ತೆಯಲ್ಲೇ ಆಯುಧಗಳನ್ನು ಝಳಪಿಸುತ್ತಾ ಕುಣಿದಿರುವುದು ನಾಗರಿಕರ ನಿದ್ದೆಗೆಡಿಸಿದೆ.

ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ವೈರಲ್:

ತಮ್ಮ ಈ ಕೃತ್ಯದ ವಿಡಿಯೊವನ್ನು ಪುಂಡರು 'S G Natikar 27' ಎಂಬ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಅಪ್‌ಲೋಡ್ ಮಾಡಿ ವೈರಲ್ ಮಾಡಿದ್ದಾರೆ. ಆ ಮೂಲಕ ಇಡೀ ನಗರದಲ್ಲಿ ಭಯದ ವಾತಾವರಣ ಸೃಷ್ಟಿಸಲು ಸಂಚು ರೂಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಜ್ಞಾವಂತ ಜನರಲ್ಲಿ ಈ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಪದೇ ಪದೇ ಇಂತಹ ಘಟನೆಗಳು ಮರುಕಳಿಸುತ್ತಿದ್ದರೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಕೂಡಲೇ ವಿಡಿಯೋದಲ್ಲಿರುವ ಆರೋಪಿಗಳನ್ನು ಬಂಧಿಸಿ, ನಗರದಲ್ಲಿ ಶಾಂತಿ ಕಾಪಾಡಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇತ್ತೀಚೆಗೆ ಅಫಜಲಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಆಪ್ತ ಹಾಗೂ ಬಲಗೈ ಬಂಟನೆಂದು ಹೇಳಲಾಗಿರುವ ಕಾಂಗ್ರೆಸ್ ಮುಖಂಡ ಮತೀನ್ ಪಟೇಲ್ ಕಲಬುರಗಿ ನಗರದಲ್ಲಿ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಕೈಯಲ್ಲಿ ಗನ್ ಹಿಡಿದು ‘ಧುರಂಧರ್’ ಹಾಡಿಗೆ ಡ್ಯಾನ್ಸ್ ಮಾಡಿದ ಘಟನೆ ನಡೆದಿತ್ತು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

Shivamogga news: ಶಿವಮೊಗ್ಗದಲ್ಲಿ ಕೊಲೆಯಾದ ಸಂಕೇತ್‌ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ; ಗೃಹ ಸಚಿವರು ಹೇಳಿದ್ದೇನು?

ಸಮಾರಂಭದ ವೇಳೆ ಕಾಂಗ್ರೆಸ್‌ ಮುಖಂಡ ಕೈಯಲ್ಲಿ ಗನ್ ಹಿಡಿದು ವೇದಿಕೆಯ ಮೇಲೆ ಕುಣಿದು ಬಿಲ್ಡಪ್ ನೀಡಿದ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ದಾಖಲಾಗಿದ್ದವು. ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಮದುವೆ ಕಾರ್ಯಕ್ರಮದಲ್ಲಿ ಸಂಗೀತದ ನಡುವೆಯೇ ಗನ್ ಹಿಡಿದು ವೇದಿಕೆಯ ಮೇಲೆ ಕುಣಿದಿರುವುದು ಹಾಗೂ ಕೆಲವರು ಅವರೊಂದಿಗೆ ಫೋಟೊ ಮತ್ತು ವಿಡಿಯೊಗಳನ್ನು ತೆಗೆದುಕೊಂಡಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ್ದವು. ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.