ಮಂಗಳೂರು: ಕಳೆದ ಹಲವು ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿದ್ದ ಮಂಗಳೂರಿನ (Mangaluru) ಬಿಸಿರೋಡ್- ಅಡ್ಡಹೊಳೆ ಚತುಷ್ಪಥ ಹೆದ್ದಾರಿ ಕಾಮಗಾರಿಯ ಭಾಗವಾಗಿ ನಿರ್ಮಾಣಗೊಂಡ ಬಹು ನಿರೀಕ್ಷೆಯ ಕಲ್ಲಡ್ಕ ಫ್ಲೈ ಓವರ್ (Kalladka Flyover) ಕೊನೆಗೂ ಸಂಚಾರಕ್ಕೆ ತೆರೆದುಕೊಂಡಿದೆ. ಮಾಣಿ ಭಾಗದಿಂದ ಬಿಸಿ ರೋಡ್ (BC Road) ಭಾಗಕ್ಕೆ ಆಗಮಿಸುವ ವಾಹನಗಳು ಫ್ಲೈ ಓವರ್ ಮೂಲಕ ಸಂಚಾರವನ್ನು ಒಂದು ಬದಿಯಿಂದ ಆರಂಭಿಸಿವೆ. ಸೋಮವಾರ ಬೆಳಗ್ಗೆ 10:30 ಗಂಟೆಗೆ ಫ್ಲೈ ಓವರ್‌ನ ಆರಂಭಿಕ ಭಾಗ ಪೂರ್ಲಿಪಾಡಿಯಲ್ಲಿ ವಾಹನ ಸಂಚಾರವನ್ನು ಉದ್ಘಾಟನೆ ಮಾಡಲಾಗಿದೆ.
ಪೂರ್ಲಿಪಾಡಿಯಲ್ಲಿ ಸೇರಿದ ಕಲ್ಲಡ್ಕದ ನಾಗರಿಕರು, ಹಿರಿಯ ಮುಂದಾಳು, ಕಲ್ಲಡ್ಕ ಶ್ರೀರಾಮ ವಿದ್ಯಾಸಂಸ್ಥೆಗಳ ಸಂಸ್ಥಾಪಕ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಅವರ ನೇತೃತ್ವದಲ್ಲಿ ಕಲ್ಲಡ್ಕದ ನಾಗರಿಕರು ವಾಹನ ಸಂಚಾರವನ್ನು ಸ್ವಾಗತಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಅನೇಕ ವರ್ಷಗಳ ಕನಸು ಕಲ್ಲಡ್ಕ ದಲ್ಲಿ ನನಸಾಗಿದೆ. ಇಡೀ ರಾಜ್ಯದಲ್ಲಿ ಬಹಳ ದೊಡ್ಡ ಸಂಪರ್ಕ ಸೇತು ಆಗಿರುವ ಈ ಫ್ಲೈ ಓವರ್ ಜನರ ನಿರೀಕ್ಷೆಯ ರಸ್ತೆಗಳಲ್ಲಿ ಒಂದಾಗಿತ್ತು. ರಸ್ತೆ ನಿರ್ಮಾಣ ಮಾಡಿದ ಕಂಪನಿ ಹೇಳಿದ ಸಮಯಕ್ಕೆ ತುಂಬಾ ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ ಎಂದರು. ಬೆಂಗಳೂರು- ಮಂಗಳೂರು ವಾಹನ ಸಂಚಾರದ ಅತ್ಯಂತ ದೀರ್ಘವಾದ ಈ ಮೇಲ್ಸೇತುವೆಗೆ ಶ್ರೀರಾಮ ಮೇಲ್ಸೇತುವೆ ಎಂದು ಕಲ್ಲಡ್ಕ ನಾಗರಿಕರು ನಾಮಕರಣ ಮಾಡಿದ್ದಾರೆ.
2.1 ಕಿಮೀ ಉದ್ದದ ಈ ಮೇಲ್ಸೇತುವೆ ಜನರ ಬಹುಬೇಡಿಕೆಯ ಸೇತುವೆ ಆಗಿತ್ತು. ಜನ ಕಲ್ಲಡ್ಕ ಫ್ಲೈ ಓವರ್ ನಿರ್ಮಾಣ ಆಗದೇ ಸಾಕಷ್ಟು ಸಂಕಷ್ಟ ಅನುಭವಿಸಿದ್ದರು. ಸರ್ವೀಸ್ ರಸ್ತೆ ಸರಿಯಾಗಿ ನಿರ್ಮಾಣ ಆಗದೇ ಪ್ರಯಾಣಿಕರು ಪರದಾಡಿದ್ದರು. ಇದೀಗ ಫ್ಲೈ ಓವರ್ ನಲ್ಲಿ ಏಕಮುಖ ಸಂಚಾರ ತೆರದುಕೊಂಡಿದ್ದು, ಜನ ನಿಟ್ಟುಸಿರು ಬಿಡುವಂತಾಗಿದೆ.