ಕುಂದಾಪುರ, ಏ.24: ವಿಶ್ವವಾಣಿ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ (Vishweshwar Bhat) ಅವರು ಅನುವಾದಿಸಿದ ‘ಕಾರಂತರ ಸುಳಿಯಲ್ಲಿ’ ಪುಸ್ತಕ ನಾಳೆ (ಏ.25) ಸಾಸ್ತಾನದಲ್ಲಿ (Karantara Suliyalli Book Release) ಅನಾವರಣಗೊಳ್ಳಲಿದೆ. ಈ ಪುಸ್ತಕವು ಕನ್ನಡದ ಮೇರು ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ಡಾ. ಕೋಟ ಶಿವರಾಮ ಕಾರಂತ ಅವರ ಮಕ್ಕಳಾದ ಉಲ್ಲಾಸ್ ಕಾರಂತ, ಮಾಲವಿಕಾ ಕಪೂರ, ಕ್ಷಮಾ ರಾವ್ ಅವರು ಬರೆದ ‘ Growing Up Karanth' ’ಪುಸ್ತಕದ ಕನ್ನಡ ಅವತರಣಿಕೆಯಾಗಿದೆ.
ಏಪ್ರಿಲ್ 25ರಂದು ಸಂಜೆ 4.30 ಗಂಟೆಗೆ ಸಾಸ್ತಾನದ ಕೋಸ್ಟಲ್ ಪ್ಯಾರಡೈಸ್‌ನಲ್ಲಿ ಪುಸ್ತಕ ಅನಾವರಣಗೊಳ್ಳಲಿದ್ದು, ಕೃತಿಯನ್ನು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಲೋಕಾರ್ಪಣೆ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನು ಕುಂದಾಪುರದ ಹಿರಿಯ ಪತ್ರಕರ್ತ ಎಎಸ್‌ಎನ್ ಹೆಬ್ಬಾರ್ ವಹಿಸಲಿದ್ದಾರೆ. ವನ್ಯಜೀವಿ ತಜ್ಞ, ಮೂಲ ಕೃತಿಯ ಕರ್ತೃಗಳಲ್ಲಿ ಒಬ್ಬರಾದ ಡಾ. ಉಲ್ಲಾಸ್ ಕಾರಂತ ಪ್ರಾಸ್ತಾವಿಕವಾಗಿ ಮಾತಾಡುವರು. ಅನುವಾದ ವಿಶ್ವೇಶ್ವರ ಭಟ್, ನಾಗರಿಕ ವಾರಪತ್ರಿಕೆ ಸಂಪಾದಕ ಕೃಷ್ಣಮೂರ್ತಿ ಹೆಬ್ಬಾರ್ ಉಪಸ್ಥಿತರಿರಲಿದ್ದಾರೆ. ಟೀಂ ಅಭಿಮತ ಹಾಗೂ ಮೂಡುಗಿಳಿಯಾರು ಜನಸೇವಾ ಟ್ರಸ್ಟ್ ಕಾರ್ಯಕ್ರಮವನ್ನು ಸಂಯೋಜಿಸಿವೆ.
ಶಿವರಾಮ ಕಾರಂತರು ನಿಧನರಾದ 29 ವರ್ಷಗಳ ನಂತರ ಈ ಪುಸ್ತಕ ಹೊರಬರುತ್ತಿದೆ. ಈ ಕೃತಿಯ ವಿಶೇಷತೆ ಏನೆಂದರೆ, ಇದನ್ನು ಕಾರಂತರ ಮೂವರು ಮಕ್ಕಳೂ ಸೇರಿ ಬರೆದಿದ್ದಾರೆ. ಕಾರಂತರ ವ್ಯಕ್ತಿತ್ವವನ್ನು ನೋಡುವ ದೊಡ್ಡ ಪ್ರಯತ್ನವಾಗಿದೆ. ಬಹುಶಃ ಇದು ಕಾರಂತರಿಗೆ ಮಕ್ಕಳು ಸಲ್ಲಿಸಿದ ಬಹುದೊಡ್ಡ ಶ್ರದ್ಧಾಂಜಲಿ ಎನ್ನಬಹುದು.
ಇತ್ತೀಚೆಗೆ ಬೆಂಗಳೂರಿನಲ್ಲಿ ಸಹ ಈ ಕೃತಿ ಬಿಡುಗಡೆಯಾಗಿತ್ತು. ಕಾರ್ಯಕ್ರಮದಲ್ಲಿ ಗ್ರಂಥಕರ್ತೃಗಳಾದ ಉಲ್ಲಾಸ್ ಕಾರಂತ, ಕ್ಷಮಾ ರಾವ್, ಮಾಲವಿಕಾ ಕಪೂರ್, ಪತ್ರಕರ್ತ ಎಸ್. ದಿವಾಕರ್, ವಿಮರ್ಶಕ ಎಸ್.ಆರ್. ವಿಜಯಶಂಕರ್, ಡಾ.ಅಜಯ್ ಕುಮಾರ್ ಸಿಂಗ್, ಚಿರಂಜೀವಿ ಸಿಂಗ್ ಸೇರಿ ನೂರಾರು ಮಂದಿ ಉಪಸ್ಥಿತರಿದ್ದರು.