ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸದಂತೆ ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ಹಾಗೂ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಕರೆ ನೀಡಿರುವ ನಾಳಿನ (ಆ.13) ಕರ್ನಾಟಕ ಬಂದ್‌ಗೆ (Karnataka Bandh) ಪ್ರಮುಖ ಸಂಘಟನೆಗಳಿಂದ ಬೆಂಬಲ ವ್ಯಕ್ತವಾಗಿಲ್ಲ. ಇದರಿಂದ ಬಂದ್ ನಡೆಯುತ್ತೋ, ಇಲ್ಲವೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಮೂಡಿತ್ತು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ವಾಟಾಳ್ ನಾಗರಾಜ್ (Vatal Nagaraj) ಅವರು, ನಾಳೆ ʼಕರ್ನಾಟಕ ಬಂದ್ʼ ಆಗಿಯೇ ಆಗುತ್ತೆ, ಅದರಲ್ಲಿ ಬದಲಾವಣೆ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.
ಕರ್ನಾಟಕ ಬಂದ್ ಬಗ್ಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿರುವ ಅವರು, ಯಾರು ಬೆಂಬಲ ಕೊಟ್ಟರೂ, ಬಿಟ್ಟರೂ ನಾಳೆ ಕರ್ನಾಟಕ ಬಂದ್ ಮಾಡುವುದು ನಿಶ್ಚಿತ. ಜುಲೈ 29ರಂದು ಮೈಸೂರು ಬ್ಯಾಂಕ್ ಸರ್ಕಲ್‌ನಲ್ಲಿ ನಾವು ಪ್ರತಿಭಟನೆ ಮಾಡುವಾಗ, ಈಗ ಯಾರೆಲ್ಲಾ ಮಾತನಾಡಿದ್ದಾರೋ ಅವರೆಲ್ಲಾ ಬಂದಿದ್ದರು. ಬಳಿಕ ಜುಲೈ 31ರಂದು ವುಡ್‌ಲ್ಯಾಂಡ್ ಹೋಟೆಲ್‌ನಲ್ಲಿ ಎಲ್ಲಾ ಮುಖಂಡರು ಉಪಸ್ಥಿತರಿದ್ದರು. ಕಾವೇರಿ ನೀರಿನ ವಿಚಾರ ಒಂದೇ ಅಲ್ಲ, ಮಹದಾಯಿ, ಮೇಕೆದಾಟು ಯೋಜನೆ ಆಗಬೇಕು ಎಂಬುವುದು ಸೇರಿ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಹೋರಾಟ ಮಾಡಲು ನಿರ್ಧರಿಸಿದ್ದೆವು. ಇದಕ್ಕೆ ಎಲ್ಲರೂ ಬೆಂಬಲ ಸೂಚಿಸಿದ್ದರು.
ಬಂದ್‌ಗೆ ಈಗಾಗಲೇ ರಾಜ್ಯಾದ್ಯಂತ ಬೆಂಬಲ ವ್ಯಕ್ತವಾಗಿದೆ. ಹೀಗಾಗಿ ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗೆ ಕರ್ನಾಟಕ ಬಂದ್ ಮಾಡಲಾಗುತ್ತದೆ. ಜನರು ಅಪಪ್ರಚಾರಕ್ಕೆ ಕಿವಿಗೊಡಬಾರದು. ಬಂದ್ ಎಂದರೆ ಎಲ್ಲಾ ಮುಚ್ಚಿಹೋಗುತ್ತೆ ಎಂಬರ್ಥವಲ್ಲ, ಸ್ವಲ್ಪ ಹೆಚ್ಚೂಕಡಿಮೆ ಆಗುತ್ತೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಬಂದ್ ನಡೆಯುತ್ತದೆ ಎಂದು ವಾಟಾಳ್ ನಾಗರಾಜ್ ತಿಳಿಸಿದ್ದಾರೆ.

ನಾಳೆ ಏನಿರುತ್ತೆ, ಏನಿರಲ್ಲ?
- ನಾಳೆ ರಾಜ್ಯದಾದ್ಯಂತ ಬಹುತೇಕ ಎಲ್ಲಾ ಅಗತ್ಯ ಹಾಗೂ ಪ್ರಮುಖ ಸೇವೆಗಳು ಎಂದಿನಂತೆ ಲಭ್ಯವಾಗಲಿವೆ. ಸಾರಿಗೆ ಬಸ್, ನಮ್ಮ ಮೆಟ್ರೋ, ರೈಲ್ವೆ ಸೇವೆಗಳು, ಆಟೋ ರಿಕ್ಷಾ ಹಾಗೂ ಟ್ಯಾಕ್ಸಿ ಸೇವೆಗಳು ಎಂದಿನಂತೆ ಲಭ್ಯವಿರಲಿವೆ. ಆಸ್ಪತ್ರೆಗಳು, ಮೆಡಿಕಲ್ ಶಾಪ್‌ಗಳು ಹಾಗೂ ಆಂಬ್ಯುಲೆನ್ಸ್ ಸೇವೆಗಳು ಯಥಾರೀತಿ ಇರಲಿವೆ.
- ಶಾಲಾ-ಕಾಲೇಜುಗಳಿಗೆ ಯಾವುದೇ ಅಧಿಕೃತ ರಜೆ ಘೋಷಣೆಯಾಗಿಲ್ಲ. ಇನ್ನು ದಿನಸಿ ಅಂಗಡಿಗಳು, ಹಾಲು, ತರಕಾರಿ, ಮಾರುಕಟ್ಟೆಗಳು, ಬೇಕರಿ, ಜ್ಯೂಸ್ ಅಂಗಡಿಗಳು ಹಾಗೂ ಬೀದಿ ಬದಿ ವ್ಯಾಪಾರಗಳು ಓಪನ್ ಇರಲಿವೆ.
- ಮಾಲ್‌ಗಳು, ಚಿತ್ರಮಂದಿರಗಳು, ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು, ಕೈಗಾರಿಕಾ ಕ್ಷೇತ್ರಗಳು ಹಾಗೂ ಸರ್ಕಾರಿ ಆಫೀಸ್‌ಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.
ಒಟ್ಟಾರೆಯಾಗಿ ಹೇಳುವುದಾದರೆ, ನಾಳೆ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲವೆಡೆ ಧರಣಿ ಹಾಗೂ ಪ್ರತಿಭಟನೆಗಳು ನಡೆಯಬಹುದೇ ವಿನಃ ರಾಜ್ಯಾದ್ಯಂತ ಜನಜೀವನ ಸಾಮಾನ್ಯ ದಿನಗಳಂತೆಯೇ ಇರಲಿದೆ.
ಬಂದ್‌ಗೆ ಯಾವೆಲ್ಲಾ ಸಂಘಟನೆಗಳ ಬೆಂಬಲ?
ವಾಟಾಳ್ ನಾಗರಾಜ್ ನೇತೃತ್ವದ 'ಕನ್ನಡ ಸಂಘಟನೆಗಳ ಒಕ್ಕೂಟ', ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಹಾಗೂ ಕೆಲವು ಸಣ್ಣಪುಟ್ಟ ಸಂಘಟನೆಗಳು ಮಾತ್ರ ಬಂದ್‌ಗೆ ಬೆಂಬಲ ನೀಡಿವೆ.
ಖಾಸಗಿ ಶಾಲಾ ಒಕ್ಕೂಟ ನೈತಿಕ ಬೆಂಬಲ ನೀಡಿದರೂ, ಪರೀಕ್ಷೆ ನಡೆಯುತ್ತಿರುವುದರಿಂದ ಶಾಲೆಗೆ ರಜೆ ನೀಡುವುದಿಲ್ಲ. ಹೋಟೆಲ್ ಮಾಲೀಕ ಸಂಘಟನೆಗಳಿಂದಲ ನೈತಿಕ ಬೆಂಬಲವಿದ್ದರೂ ಸೇವೆಗಳನ್ನು ಬಂದ್ ಮಾಡುವುದಿಲ್ಲ.
ಯಾರಿಂದ ಬೆಂಬಲವಿಲ್ಲ?
ಈ ಬಾರಿಯ ಬಂದ್‌ಗೆ ಪ್ರಮುಖ ಸಂಘಟನೆಗಳು ನೇರವಾಗಿ ವಿರೋಧ ವ್ಯಕ್ತಪಡಿಸಿವೆ ಅಥವಾ ದೂರ ಉಳಿದಿವೆ. ಕನ್ನಡ ರಕ್ಷಣಾ ವೇದಿಕೆ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ ಹಾಗೂ ಶಿವರಾಮೇಗೌಡ ಬಣಗಳು ಬಂದ್‌ಗೆ ಬೆಂಬಲ ನೀಡುತ್ತಿಲ್ಲ.ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ಡಾ. ರಾಜ್‌ಕುಮಾರ್ ಅಭಿಮಾನಿ ಸಂಘ ಬಂದ್‌ನಿಂದ ದೂರ ಇರಲಿವೆ.
ಖಾಸಗಿ ಸಾರಿಗೆ ಒಕ್ಕೂಟ, ಆಟೋ ಯೂನಿಯನ್‌ಗಳು ಹಾಗೂ ಖಾಸಗಿ ಶಾಲೆಗಳ ಒಕ್ಕೂಟಗಳಾದ 'ರುಪ್ಸಾ' (RUPSA) ಮತ್ತು 'ಕ್ಯಾಮ್ಸ್' (KAMS) ಬೆಂಬಲ ನೀಡಿಲ್ಲ. ಹೋಟೆಲ್ ಅಸೋಸಿಯೇಷನ್ ಕೂಡ ಬಂದ್‌ಗೆ ಕೇವಲ ನೈತಿಕ ಬೆಂಬಲ ನೀಡಿದ್ದು, ಹೋಟೆಲ್‌ಗಳು ತೆರೆದಿರಲಿವೆ.
ಬಂದ್ ಅನವಶ್ಯಕ ಎಂದ ಕರವೇ ಪ್ರವೀಣ್ ಶೆಟ್ಟಿ ಬಣ
'ತಮಿಳುನಾಡಿಗೆ ಕಾವೇರಿ ನೀರು ಹರಿಸಲು ಕಾವೇರಿ ನೀರು ನಿರ್ವಹಣಾ ಸಮಿತಿ ನೀಡಿರುವ ಆದೇಶ ಖಂಡಿಸಿ ಆಗಸ್ಟ್ 13ರಂದು ಕರ್ನಾಟಕ ಬಂದ್‌ಗೆ ಬೆಂಬಲ ನೀಡುವುದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ಬಂದ್ ಅನವಶ್ಯಕ' ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ತಿಳಿಸಿದ್ದಾರೆ. ಸಂಘಟನೆಯ ಕಾರ್ಯಕರ್ತರೊಂದಿಗೆ ಬುಧವಾರ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, 'ಸದ್ಯ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಕೊರತೆ ಏರ್ಪಡುವ ಸಾಧ್ಯತೆ ಕಡಿಮೆ. ಹೀಗಾಗಿ ಬಂದ್‌ಗೆ ನಮ್ಮ ಬೆಂಬಲ ಇಲ್ಲ. ಆದರೆ ಮಹದಾಯಿ ಕಳಸಾ - ಬಂಡೂರಿ ಯೋಜನೆ ಜಾರಿಗೆ ಹೋರಾಟ ಮುಂದುವರಿಯಲಿದೆ' ಎಂದಿದ್ದಾರೆ.