ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Cabinet Reshuffle: ದೆಹಲಿಗೆ ಶಿಫ್ಟ್‌ ಆದ ರಾಜ್ಯ ರಾಜಕೀಯ, ಹೈಕಮಾಂಡ್‌ನಿಂದ ಸಂಪುಟ ಪುನಾರಚನೆ ಭರವಸೆ!

ಮಲ್ಲಿಕಾರ್ಜುನ ಖರ್ಗೆಯವರು ನಮಗೆ ಭರವಸೆ ಕೊಟ್ಟಿದ್ದಾರೆ. ಸಂಪುಟ ಪುನರ್ ರಚನೆ ಆಗುತ್ತೆ ಎಂಬ ವಿಶ್ವಾಸ ಇದೆ. ಸರ್ಕಾರ ಮೂರು ವರ್ಷ ತುಂಬುವ ಮುನ್ನ ಮಾಡಬಹುದು ಎಂದು ಭಾವಿಸಿದ್ದೇವೆ ಎಂದು ದಿಲ್ಲಿಯಲ್ಲಿ ಸಂಪುಟ ಪುನಾರಚನೆಗಾಗಿ ಬೀಡು ಬಿಟ್ಟಿರುವ 25ಕ್ಕೂ ಅಧಿಕ ಕಾಂಗ್ರೆಸ್‌ ಶಾಸಕರು ತಿಳಿಸಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಜೊತೆಗೆ ಕಾಂಗ್ರೆಸ್‌ ಶಾಸಕರು

ನವದೆಹಲಿ, ಏ14: ರಾಜ್ಯದಲ್ಲಿ ಉಪ ಚುನಾವಣೆಯ (Karnataka bypoll) ಬಳಿಕ ಸಂಪುಟ ಪುನಾರಚನೆಯ (Cabinet Reshuffle) ರಾಜಕೀಯ ಜೋರಾಗಿದೆ. 25ಕ್ಕೂ ಅಧಿಕ ಕಾಂಗ್ರೆಸ್ ಶಾಸಕರ (‌congress MLAs) ದಂಡು ನವದೆಹಲಿಯಲ್ಲಿ ಬೀಡು ಬಿಟ್ಟಿದೆ. ಸಂಪುಟ ಪುನಾರಚನೆ ಆಗಬೇಕು, ಅದರಲ್ಲಿ ತಮಗೂ ಸಚಿವ ಸ್ಥಾನ ದೊರೆಯಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ಸಂಪುಟ ರಚನೆಗೊಂಡು ಅರ್ಧ ಅವಧಿ ಮುಗಿದಿದೆ. ಆದರೆ ಸಂಪುಟ ಪುನಾರಚನೆಯ ಬಗ್ಗೆ ಯಾವುದೇ ಬೆಳವಣಿಗೆ ಆಗಿಲ್ಲ. ಇದೀಗ ಉಪಚುನಾವಣೆಯೂ ಮುಗಿದಿದ್ದು, ಪುನಾರಚನೆಗೆ ಸೂಕ್ತ ಸಮಯವಾಗಿದೆ ಎಂದು ಶಾಸಕರು ಹೇಳಿದ್ದಾರೆ.

ಮುಖ್ಯ ಸಚೇತಕ ಅಶೋಕ್ ಪಟ್ಟಣ್ (Ashok Pattan) ಸೇರಿ ಹಲವು ಶಾಸಕರು ಈಗಾಗಲೇ ದೆಹಲಿಯಲ್ಲಿದ್ದು, ಇನ್ನೂ ಆರೇಳು ಶಾಸಕರು (MLA) ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಭೇಟಿಯಾಗಿದ್ದಾರೆ. 3 ದಿನ ದೆಹಲಿಯಲ್ಲೇ ಉಳಿದು, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ಸುರ್ಜೆವಾಲ ಭೇಟಿಗೆ ಪ್ಲ್ಯಾನ್ ಮಾಡಿದ್ದಾರೆ.

ಎರಡೂವರೆ ವರ್ಷದ ಬಳಿಕ ಸಂಪುಟ ಪುನರ್ ರಚನೆ ಭರವಸೆ ನೀಡಲಾಗಿತ್ತು. ಆದರೀಗ 3 ವರ್ಷ ಆಗ್ತಿದೆ. ಕೆಲವೇ ಕೆಲವು ಸಚಿವರನ್ನು ಉಳಿಸಿಕೊಂಡು, ಬಹುತೇಕ ಎಲ್ಲ ಸಚಿವರನ್ನು ಬದಲಿಸಬೇಕು ಎಂದು ವರಿಷ್ಠರ ಎದುರು ಹಕ್ಕೊತ್ತಾಯ ಮಾಡಲು ಮುಂದಾಗಿದ್ದಾರೆ. ಮೇ 15ರೊಳಗೆ ಕ್ಯಾಬಿನೆಟ್ ಪುನಾರಚನೆಗೆ ಒತ್ತಾಯಿಸಿದ್ದಾರೆ.

ಖರ್ಗೆ ಭೇಟಿ ಬಳಿಕ ಮಾತನಾಡಿದ ಶಾಸಕ ಹಾಗೂ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸಚಿವ ಸಂಪುಟ ಪುನರ್ ರಚನೆ ಕುರಿತು ಚರ್ಚೆ ಮಾಡಿದ್ದೇವೆ. ಸಹಾನುಭೂತಿಯಿಂದ ನಮ್ಮ ಮನವಿ ಕೇಳಿದ್ದಾರೆ. ಅವರು ಸೂಕ್ತ ಸಮಯದಲ್ಲಿ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ನಮ್ಮ ಮನವಿ ನಾವು ಮಾಡಿದ್ದೇವೆ. ಸಿಎಂ ಬದಲಾವಣೆ ಕುರಿತು ನಾವು ಯಾವುದೇ ಚರ್ಚೆ ಮಾಡಿಲ್ಲ. ನಾಲ್ಕು ಗೋಡೆಗಳ ನಡುವೆ ಈ ವಿಷಯ ಇದೆ. ಖರ್ಗೆಯವರು ನಮಗೆ ಭರವಸೆ ಕೊಟ್ಟಿದ್ದಾರೆ. ಸಂಪುಟ ಪುನರ್ ರಚನೆ ಆಗುತ್ತೆ ಎಂಬ ವಿಶ್ವಾಸ ಇದೆ. ಸರ್ಕಾರ ಮೂರು ವರ್ಷ ತುಂಬುವ ಮುನ್ನ ಮಾಡಬಹುದು ಎಂದು ಭಾವಿಸಿದ್ದೇವೆ. ಯಾವ ಸಚಿವರ ಮೇಲೂ ಆರೋಪ ಮಾಡಿಲ್ಲ. ನಮಗೂ ಅವಕಾಶ ಬೇಕು ಅಂತ ಕೇಳಿದ್ದೇವೆ. ಸಿಎಂ ಬದಲಾವಣೆ ಬಗ್ಗೆ ನಾವು ಮಾತನಾಡಿಲ್ಲ. ನಾಡಿದ್ದು ವೇಣುಗೋಪಾಲ್, ಮತ್ತು ಸುರ್ಜೆವಾಲಾ ಅವರನ್ನು ಭೇಟಿ ಮಾಡಲಿದ್ದೇವೆ ಎಂದಿದ್ದಾರೆ.

Nazeer Ahmed: ಹೈಕಮಾಂಡ್‌ ಕಠಿಣ ನಿಲುವು, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ನಜೀರ್ ಅಹ್ಮದ್ ರಾಜೀನಾಮೆ

ಸಭೆ ಬಳಿಕ ಅಶೋಕ್ ಪಟ್ಟಣ್ ಮಾತನಾಡಿ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ ನಮ್ಮ ಅಹವಾಲು ತಿಳಿಸಿದ್ದೇವೆ. ಪ್ರಧಾನ ಕಾರ್ಯದರ್ಶಿಗಳ ಜೊತೆಗೆ ಚರ್ಚೆ ನಡೆಸುವ ಭರವಸೆ ನೀಡಿದ್ದಾರೆ. ಸೂಕ್ತ ಸಹಾಯ ಮಾಡಲು ಪ್ರಯತ್ನಿಸುವುದಾಗಿ ಹೇಳಿದ್ದಾರೆ. ಮುಂದಿನ ತಿಂಗಳು 15ರೊಳಗೆ ಆಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ. ನಮಗೆ ಸಹಾಯ ಮಾಡುವುದಾಗಿ ಹೇಳಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಚರ್ಚೆ ಮಾಡಿಲ್ಲ. ಡಿ.ಕೆ ಶಿವಕುಮಾರ್ ಅವರಿಗೆ ನಾವೇ ವರದಿ ನೀಡುತ್ತೇವೆ. ನಾವು ಯಾವುದೇ ತಪ್ಪು ಮಾಡಿಲ್ಲ, ನಮಗೆ ನೋಟಿಸ್ ನೀಡಲು ಸಾಧ್ಯವಿಲ್ಲ. ತಪ್ಪು ಮಾಡಿದರೆ ಕ್ರಮ ತೆಗೆದುಕೊಳ್ಳಬೇಕು. ಒಟ್ಟಿನಲ್ಲಿ ಸಚಿವ ಸಂಪುಟ ಪುನರ್ ರಚನೆ ಆಗಬೇಕು ಎನ್ನುವುದಷ್ಟೇ ನಮ್ಮ ಒತ್ತಾಯ. ನಾಡಿದ್ದು ವೇಣುಗೋಪಾಲ ಸುರ್ಜೆವಾಲಾ ಅವರನ್ನು ಭೇಟಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಸಿಎಂ ಏನಂದ್ರು?

ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುತ್ತಿರುವ ಬಗ್ಗೆ ಸಿಎಂ ಸಿದ್ದರಾಮಯ್ಯ ಮೊನ್ನೆ ಪ್ರತಿಕ್ರಿಯೆ ನೀಡಿದ್ದರು. ಸಚಿವ ಆಕಾಂಕ್ಷಿ ಶಾಸಕರು ನವದೆಹಲಿಗೆ ಭೇಟಿ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ಸಂಪುಟ ಪುನಾರಚನೆ ಕಾರ್ಯ ಬಾಕಿಯಿದೆ. ಐದು ರಾಜ್ಯಗಳ ಚುನಾವಣೆ, ಬಜೆಟ್ ಅಧಿವೇಶನ ಸಂಪುಟ ಪುನಾರಚನೆ ವಿಳಂಬಕ್ಕೆ ಕಾರಣವಿರಬಹುದು ಎಂದರು.

ಡಿಕೆಶಿ ಎಚ್ಚರಿಕೆ

ಈ ನಡುವೆ, ದೆಹಲಿಗೆ ಹೋದ ಶಾಸಕರಿಗೆ ಪಕ್ಷದ ಚೌಕಟ್ಟು ಮೀರದಂತೆ ಡಿಸಿಎಂ ಡಿಕೆಶಿ ಎಚ್ಚರಿಕೆ ನೀಡಿದ್ದಾರೆ. ಪಕ್ಷದ ಶಾಸಕರು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡುವುದರಲ್ಲಿ ತಪ್ಪೇನಿಲ್ಲ. ಅನವಶ್ಯಕವಾಗಿ ಏನೇನೋ ಹೇಳಿಕೆ ನೀಡಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ಪಕ್ಷದ ಶಿಸ್ತನ್ನು ಎಲ್ಲಾ ಶಾಸಕರು ಕಾಪಾಡಬೇಕು. ಪಕ್ಷಕ್ಕೆ ಗೌರವ ನೀಡಬೇಕು. ಮಾಧ್ಯಮಗಳ ಮುಂದೆ ಪಕ್ಷದ ಗೌರವವನ್ನು ಹಾಳು ಮಾಡಬಾರದು. ಮುಖ್ಯಮಂತ್ರಿಗಳೂ ಸಹ ಈಗಾಗಲೇ ಈ ವಿಚಾರದ ಬಗ್ಗೆ ಹೇಳಿದ್ದಾರೆ. ಮುಂದಕ್ಕೆ ಎಲ್ಲರ ಭವಿಷ್ಯ ಪಕ್ಷದಲ್ಲಿದೆಯೇ ಹೊರತು ಮಾಧ್ಯಮಗಳಲ್ಲಿ ಇಲ್ಲ ಎಂದಿದ್ದಾರೆ.

ಬಹಿರಂಗವಾಗಿ ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಅದ್ರೆ ಡಿಸೈಡ್ ಮಾಡೋದು ಹೈಕಮಾಂಡ್ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಸಚಿವ ಸ್ಥಾನಕ್ಕಾಗಿ ಹೈಕಮಾಂಡ್ ಮೊರೆ ಹೋದ ಕಾಂಗ್ರೆಸ್ ಶಾಸಕರು: ಡಿಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ

ದೆಹಲಿಗೆ ತೆರಳಿದ ಪ್ರಮುಖ ಶಾಸಕರು ಯಾರು?

ಟಿ.ಬಿ. ಜಯಚಂದ್ರ, ಅಶೋಕ್ ಪಟ್ಟಣ್, ಎಸ್.ಎನ್. ಸುಬ್ಬಾರೆಡ್ಡಿ, ಸಿ. ಪುಟ್ಟರಂಗಶೆಟ್ಟಿ, ಹಂಪನಗೌಡ ಬಾದರ್ಲಿ, ಡಿ.ಜಿ. ಶಾಂತನಗೌಡ, ಬಸವರಾಜ್ ಶಿವಣ್ಣನವರ್, ಎ.ಆರ್. ಕೃಷ್ಣಮೂರ್ತಿ, ಪ್ರಸಾದ್ ಅಬ್ಬಯ್ಯ, ಯು.ಬಿ. ಬಣಕರ್, ಜಿ.ಎಸ್. ಪಾಟೀಲ್, ಯಶವಂತರಾಯಗೌಡ ಪಾಟೀಲ್, ಕೆ. ಷಡಕ್ಷರಿ, ಎಸ್.ಎನ್. ನಾರಾಯಣಸ್ವಾಮಿ, ಲಕ್ಷ್ಮಣ ಸವದಿ, ಅಪ್ಪಾಜಿ ನಾಡಗೌಡ, ಪ್ರಿಯಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಬಿ. ಶಿವಣ್ಣ, ರಾಘವೇಂದ್ರ ಹಿಟ್ನಾಳ್, ಬೇಳೂರು ಗೋಪಾಲಕೃಷ್ಣ ದೆಹಲಿಗೆ ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಹರೀಶ್‌ ಕೇರ

View all posts by this author