ಬೆಂಗಳೂರು, ಅ.29: ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ, ಕರ್ನಾಟಕ ಸರ್ಕಾರವು (Karnataka Government) 2026–27ನೇ ಹಣಕಾಸು ವರ್ಷಕ್ಕಾಗಿ ತನ್ನ ‘ತಳಮಟ್ಟದ ನಾವೀನ್ಯತಾ ಕಾರ್ಯಕ್ರಮʼ ದಡಿ ಅರ್ಜಿಗಳನ್ನು ಆಹ್ವಾನಿಸಿದೆ. ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ ಮೂಲಕ ಅನುಷ್ಠಾನಗೊಳ್ಳುವ ಈ ಕಾರ್ಯಕ್ರಮವು ತಳಮಟ್ಟದಲ್ಲಿ ಮೂಡಿಬರುವ ನವೀನ ಆಲೋಚನೆಗಳು ಮತ್ತು ಪರಿಹಾರಗಳನ್ನು ಗುರುತಿಸುವುದು, ಉತ್ತೇಜಿಸುವುದು ಹಾಗೂ ಬೆಂಬಲಿಸುವುದರ ಜತೆಗೆ ಅವುಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಿ ವ್ಯಾಪಕ ಬಳಕೆಗೆ ತರುವ ಉದ್ದೇಶ ಹೊಂದಿದೆ.
ಈ ಕಾರ್ಯಕ್ರಮದಡಿ ಆಯ್ಕೆಯಾಗುವ ಯೋಜನೆಗಳಿಗೆ ₹4 ಲಕ್ಷದವರೆಗೆ ಆರ್ಥಿಕ ನೆರವು ಒದಗಿಸಲಾಗುತ್ತದೆ. ದೈನಂದಿನ ಬದುಕಿನ ಸವಾಲುಗಳಿಗೆ ಪ್ರಾಯೋಗಿಕ ಪರಿಹಾರಗಳನ್ನು ಅಭಿವೃದ್ಧಿಪಡಿಸಲು ಹಾಗೂ ಸಮಾಜದ ಮೇಲೆ ವ್ಯಾಪಕ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವ ಆಲೋಚನೆಗಳನ್ನು ಮುಂದುವರಿಸಲು ಕರ್ನಾಟಕದಾದ್ಯಂತದ ವೈಯಕ್ತಿಕ ಆವಿಷ್ಕಾರಕರನ್ನು ಪ್ರೋತ್ಸಾಹಿಸುವುದು ಈ ಉಪಕ್ರಮದ ಉದ್ದೇಶವಾಗಿದೆ.
ಗೃಹ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಇ-ಆಡಳಿತ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, “ತಳಮಟ್ಟದ ನಾವೀನ್ಯತೆಯು ಅಂತರ್ಗತ ಬೆಳವಣಿಗೆಯ ಬುನಾದಿಯಾಗಿದೆ. ದೈನಂದಿನ ಸವಾಲುಗಳನ್ನು ನೇರವಾಗಿ ಅನುಭವಿಸಿ, ಅವುಗಳನ್ನು ಅರ್ಥ ಮಾಡಿಕೊಂಡಿರುವ ಜನರಿಂದಲೇ ಅತ್ಯಂತ ಪರಿಣಾಮಕಾರಿ ಪರಿಹಾರಗಳು ಹೊರಹೊಮ್ಮುತ್ತವೆ. ಕರ್ನಾಟಕದ ತಳಮಟ್ಟದ ನಾವೀನ್ಯತಾ ಕಾರ್ಯಕ್ರಮದ ಮೂಲಕ ರೈತರು, ಕುಶಲಕರ್ಮಿಗಳು, ಕಾರ್ಮಿಕರು ಮತ್ತು ಸ್ಥಳೀಯ ಆವಿಷ್ಕಾರಕರು ತಮ್ಮ ಆಲೋಚನೆಗಳನ್ನು ಜನರ ಬದುಕನ್ನು ಸುಧಾರಿಸುವ ಪ್ರಾಯೋಗಿಕ ಪರಿಹಾರಗಳಾಗಿ ರೂಪಿಸಲು ಅಗತ್ಯವಾದ ಸಂಪನ್ಮೂಲಗಳನ್ನು ಒದಗಿಸಲು ನಾವು ಬಯಸುತ್ತೇವೆ. ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ ಅಥವಾ ಗ್ರಾಮೀಣ ಜೀವನೋಪಾಯ ಯಾವುದೇ ಕ್ಷೇತ್ರವಾಗಿರಲಿ, ಭರವಸೆಯ ನಾವೀನ್ಯತೆಗಳು ಬೆಳವಣಿಗೆ ಹೊಂದಿ ಅವುಗಳ ಅಗತ್ಯವಿರುವ ಜನರನ್ನು ತಲುಪಲು ನಾವು ನೆರವಾಗಲು ಬಯಸುತ್ತೇವೆ. ಬದಲಾವಣೆ ತರಬಲ್ಲ ಆಲೋಚನೆ ನಿಮ್ಮಲ್ಲಿದ್ದರೆ, ಅದಕ್ಕೆ ಬೆಂಬಲ ನೀಡಲು ನಾವು ಸಿದ್ಧರಿದ್ದೇವೆ” ಎಂದು ಹೇಳಿದರು.
ತಳಮಟ್ಟದ ಆವಿಷ್ಕಾರಕರಿಗೆ ಬೆಂಬಲ
ಈ ಕಾರ್ಯಕ್ರಮವು ಪ್ರಾಯೋಗಿಕವಾಗಿ ಅನ್ವಯಿಸಬಹುದಾದ ಮತ್ತು ವ್ಯಾಪಕ ಪರಿಣಾಮ ಬೀರುವ ಸಾಮರ್ಥ್ಯ ಹೊಂದಿರುವ ನವೀನ ಆಲೋಚನೆಗಳು ಅಥವಾ ಪರಿಹಾರಗಳನ್ನು ಅಭಿವೃದ್ಧಿಪಡಿಸಿರುವ ಕರ್ನಾಟಕದ ಅರ್ಹ ವೈಯಕ್ತಿಕ ಆವಿಷ್ಕಾರಕರಿಗೆ ಮುಕ್ತವಾಗಿದೆ. ಆರ್ಥಿಕ ನೆರವಿನ ಮೂಲಕ ಆಯ್ಕೆಯಾದ ಆವಿಷ್ಕಾರಕರು ತಮ್ಮ ಪರಿಹಾರಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸಲು ಹಾಗೂ ಅವುಗಳನ್ನು ವ್ಯಾಪಕವಾಗಿ ಅನ್ವಯಿಸುವ ಮತ್ತು ವಾಣಿಜ್ಯೀಕರಿಸುವ ಅವಕಾಶಗಳನ್ನು ಅನ್ವೇಷಿಸಲು KITS ನೆರವು ನೀಡಲಿದೆ.
ಕೃಷಿ, ಆರೋಗ್ಯ, ಶಿಕ್ಷಣ, ಪರಿಸರ ಸುಸ್ಥಿರತೆ ಮತ್ತು ಗ್ರಾಮೀಣ ಜೀವನೋಪಾಯ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸ್ಥಳೀಯ ಸವಾಲುಗಳನ್ನು ಪರಿಹರಿಸುವಲ್ಲಿ ತಳಮಟ್ಟದ ನಾವೀನ್ಯತೆಗಳು ಮಹತ್ವದ ಪಾತ್ರ ವಹಿಸಬಲ್ಲವು. ಸ್ಥಳೀಯ ಜ್ಞಾನ ಮತ್ತು ಪ್ರಾಯೋಗಿಕ ಅನುಭವವನ್ನು ಆಧರಿಸಿದ ಆಲೋಚನೆಗಳಿಗೆ ಬೆಂಬಲ ನೀಡುವುದರಿಂದ, ಅವುಗಳನ್ನು ಅರ್ಥಪೂರ್ಣ ಸಾಮಾಜಿಕ ಮತ್ತು ಆರ್ಥಿಕ ಪ್ರಯೋಜನಗಳನ್ನು ಒದಗಿಸುವ ಪರಿಹಾರಗಳಾಗಿ ರೂಪಿಸಲು ಸಾಧ್ಯವಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಮತ್ತು ಕೊನೆಯ ದಿನಾಂಕ
ಆಸಕ್ತ ಆವಿಷ್ಕಾರಕರು ನಿಗದಿತ ಅರ್ಜಿ ನಮೂನೆಯ ಮೂಲಕ ಆನ್ಲೈನ್ನಲ್ಲಿ ಅರ್ಜಿಗಳನ್ನು ಸಲ್ಲಿಸಬೇಕು. ಅರ್ಹತಾ ಮಾನದಂಡಗಳು, ಅಗತ್ಯ ದಾಖಲೆಗಳು ಹಾಗೂ ಇತರ ಸಂಬಂಧಿತ ಮಾಹಿತಿಯನ್ನು ಅರ್ಜಿ ನಮೂನೆಯಲ್ಲಿ ನೀಡಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಇದೇ ನವೆಂಬರ್ 23, ಸಂಜೆ 5 ಗಂಟೆ.
ಅರ್ಜಿ ನಮೂನೆ: https://docs.google.com/forms/u/0/d/15sYvcKlxqks1SS6aLWKtrLi0hVKg7I0XpDH-MFxmpSg/viewform?edit_requested=true
ಅರ್ಹ ಆವಿಷ್ಕಾರಕರು ನಿಗದಿತ ಗಡುವಿನೊಳಗೆ ಅರ್ಜಿ ಸಲ್ಲಿಸಿ, ತಮ್ಮ ತಳಮಟ್ಟದ ನಾವೀನ್ಯತೆಗಳನ್ನು ಅಭಿವೃದ್ಧಿಪಡಿಸಲು ಮತ್ತು ಮುನ್ನಡೆಸಲು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೋರಲಾಗಿದೆ.