Menstrual Leave: ಮಹಿಳಾ ನೌಕರರಿಗೆ ಮುಟ್ಟಿನ ರಜೆ: ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್‌ನಲ್ಲಿ ಹಿನ್ನಡೆ
ರ್ನಾಟಕ ಸರ್ಕಾರ ನವೆಂಬರ್ 12ರಂದು ವೇತನ ಸಹಿತ ಮುಟ್ಟಿನ ರಜೆ ಕಡ್ಡಾಯಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು. ಹಲವಾರು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಬರುವ ಸಂಸ್ಥೆಗಳು ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆಯನ್ನು (Menstrual leave) ಒದಗಿಸುವಂತೆ ಆದೇಶವನ್ನು ಹೊರಡಿಸಿತ್ತು. ಈ ಆದೇಶ ಮಾಡುವ ಮುನ್ನ ನಮ್ಮನ್ನು ಕರೆದು ಸರ್ಕಾರ ಚರ್ಚೆಯೇ ಮಾಡಿಲ್ಲ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘ ವಾದಿಸಿತ್ತು.
ಕರ್ನಾಟಕ ಹೈಕೋರ್ಟ್ -
ಬೆಂಗಳೂರು, ಡಿ.09: ಮಹಿಳಾ ಉದ್ಯೋಗಿಗಳಿಗೆ ಕಡ್ಡಾಯ ಮುಟ್ಟಿನ ರಜೆಯನ್ನು (Menstrual Leave) ನೀಡಿದ ರಾಜ್ಯ ಸರ್ಕಾರದ ಇತ್ತೀಚಿನ ಆದೇಶದ ವಿರುದ್ಧ ಬೆಂಗಳೂರು ಹೋಟೆಲ್ ಮಾಲೀಕರ ಸಂಘ ಕರ್ನಾಟಕ ಹೈಕೋರ್ಟ್‌ಗೆ (Karnataka high court) ಅರ್ಜಿ ಸಲ್ಲಿಸಿತ್ತು. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ವಾದ ಆಲಿಸಿದ ಹೈಕೋರ್ಟ್, ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ (Interim stay) ನೀಡಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
ಉಚ್ಚ ನ್ಯಾಯಾಲಯದ ಮುಂದೆ ಇಂದು ಹೋಟೆಲ್ ಮಾಲೀಕರ ಸಂಘದ ಅರ್ಜಿ ವಿಚಾರಣೆಗೆ ಬಂದಿದ್ದು, ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು. ಕರ್ನಾಟಕ ಸರ್ಕಾರ ನವೆಂಬರ್ 12ರಂದು ವೇತನ ಸಹಿತ ಮುಟ್ಟಿನ ರಜೆ ಕಡ್ಡಾಯಗೊಳಿಸುವ ನಿರ್ಧಾರ ತೆಗೆದುಕೊಂಡಿತ್ತು. ಕಾರ್ಮಿಕ ಇಲಾಖೆಯ ಕಾರ್ಖಾನೆ ಕಾಯ್ದೆ, ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆ ಸೇರಿದಂತೆ ಹಲವಾರು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ಬರುವ ಸಂಸ್ಥೆಗಳು ಪ್ರತಿ ತಿಂಗಳು ಒಂದು ದಿನ ವೇತನ ಸಹಿತ ಮುಟ್ಟಿನ ರಜೆಯನ್ನು ಒದಗಿಸುವಂತೆ ಆದೇಶವನ್ನು ಹೊರಡಿಸಿತ್ತು.
ಆದರೆ ಸರ್ಕಾರದ ಈ ನಿರ್ಧಾರಕ್ಕೆ ವಿರೋಧ ವ್ಯಕ್ತವಾಗಿದ್ದು, ರಾಜ್ಯ ಸರ್ಕಾರಕ್ಕೆ ಅಂತಹ ಆದೇಶವನ್ನು ವಿಧಿಸಲು ಕಾರ್ಮಿಕ ಕಾನೂನುಗಳ ಪ್ರಕಾರ ಅಧಿಕಾರವಿಲ್ಲವೆಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಹೈಕೋರ್ಟ್ ಮೆಟ್ಟಿಲೇರಿತ್ತು. ಸರ್ಕಾರವು 1948 ರ ಕಾರ್ಖಾನೆ ಕಾಯ್ದೆ, 1961 ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1951 ರ ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, 1966 ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು 1961 ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಂಸ್ಥೆಗಳಿಗೆ ಮೇಲೆ ತಿಳಿಸಿದ ನೀತಿಯನ್ನು ಅನುಸರಿಸಲು ನಿರ್ದೇಶನ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ. ಆದರೆ ರಜೆ ನೀತಿಗಳು ವೈಯಕ್ತಿಕ ಸಂಸ್ಥೆಗಳಿಗೆ ಆಂತರಿಕ ಆಡಳಿತಾತ್ಮಕ ವಿಷಯವಾಗಿ ಉಳಿಯಬೇಕು ಎಂದು ಹೋಟೆಲ್ ಮಾಲೀಕರ ಸಂಘ ಅರ್ಜಿ ಸಲ್ಲಿಸಿತ್ತು.
ಮಹಿಳಾ ಸರ್ಕಾರಿ ನೌಕರರಿಗೆ ಗುಡ್‌ನ್ಯೂಸ್; ಋತುಚಕ್ರ ರಜೆ ನೀಡಿ ಸರ್ಕಾರ ಆದೇಶ
ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರ: ಹೈಕೋರ್ಟ್
ಅಸೋಸಿಯೇಶನ್ನ ಪರ ವಾದ ಆಲಿಸಿದ ನ್ಯಾ.ಜ್ಯೋತಿ ಮೂಲಿಮನಿ ಅವರಿದ್ದ ಹೈಕೋರ್ಟ್ ಪೀಠ ಋತುಚಕ್ರ ರಜೆ ಸಂಬಂಧಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಕಾಯ್ದೆಯಲ್ಲಿಲ್ಲದ ನಿಯಮವನ್ನು ಸರ್ಕಾರಿ ಆದೇಶದ ಮೂಲಕ ಜಾರಿಗೊಳಿಸಿದೆ. ಸರ್ಕಾರದ ಏಕಪಕ್ಷೀಯ ಆದೇಶದಿಂದ ಹೋಟೆಲ್ಗಳಿಗೆ ಸಮಸ್ಯೆ ಎಂದು ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು. ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿತ್ತೆ ಎಂದು ಪ್ರಶ್ನೆ ಹಾಕಿದ ನ್ಯಾಯಮೂರ್ತಿಯವರಿಗೆ ಇಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ಉತ್ತರ ನೀಡಿದ್ದು, ಮುಂದಿನ ವಿಚಾರಣೆವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
ಮಹಿಳೆಯರಿಗೆ ಮಾಸಿಕ 1 ದಿನ ಋತುಚಕ್ರ ರಜೆ, ಷರತ್ತುಗಳು ಅನ್ವಯ
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಹೇಳಿದ್ದೇನು?
ಹೈ ಕೋರ್ಟ್ ತಡೆಯಾಜ್ಞೆಗೆ ಪ್ರತಿಕ್ರಿಯಿಸಿದ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ ಸಿ ರಾವ್, ಸರ್ಕಾರ ಈ ಆದೇಶ ಮಾಡುವ ಮುನ್ನ ನಮ್ಮನ್ನು ಕರೆದು ಸರ್ಕಾರ ಚರ್ಚೆಯೇ ಮಾಡಿಲ್ಲ. ಆದೇಶದ ಸಾಧಕ ಬಾಧಕಗಳ ಬಗ್ಗೆ ಸರ್ಕಾರ ಅವಲೋಕನ ಮಾಡಿಯೇ ಇಲ್ಲ. ಈಗಾಗಲೇ ಖಾಸಗಿ ವಲಯದಲ್ಲಿ ಮಹಿಳಾ ನೌಕರರಿಗೆ ಸಾಕಷ್ಟು ರಜೆಗಳನ್ನು ನೀಡುತ್ತಿದ್ದೇವೆ. ಅದರ ಮೇಲೆ ಈಗ ವಾರ್ಷಿಕ 12 ರಜೆ ಕೊಡಬೇಕು ಅನ್ನುವುದು ಕಾನೂನಾತ್ಮಕವಾಗಿಲ್ಲ. ಹೀಗಾಗಿ ಆದೇಶ ಪ್ರಶ್ನೆ ಮಾಡಿ ಮಾನ್ಯ ಹೈಕೋರ್ಟ್ ಮೊರೆ ಹೋಗಿದ್ದೇವೆ. ನಮ್ಮ ಮನವಿಯನ್ನು ಆಲಿಸಿ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಈ ರೀತಿಯ ಆದೇಶಗಳಿಂದಾಗಿ ಉದ್ಯಮಗಳ ಮೇಲೆ ಭಾರೀ ಹೊಡೆತ ಬೀಳಲಿದೆ. ಮುಂದಿನ ದಿನಗಳಲ್ಲಾದರೂ ಸರ್ಕಾರ ನಮ್ಮನ್ನು ಕರೆದು ಚರ್ಚೆ ಮಾಡಲಿ ಎಂದಿದ್ದಾರೆ.