ಬೆಂಗಳೂರು, ಮಾ.11: ಶಿವಮೊಗ್ಗ (Shivamogga) ಮತ್ತು ಉತ್ತರ ಕನ್ನಡ (Uttara Kannada) ಜಿಲ್ಲೆಗಳಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ 10 ಸಾವಿರ ಕೋಟಿ ರೂ. ವೆಚ್ಚದ ಶರಾವತಿ ಪಂಪ್ ಸ್ಟೋರೇಜ್ (Sharavathi Pumped Storage) ಜಲವಿದ್ಯುತ್ ಯೋಜನೆಯ ಕಾಮಗಾರಿಯನ್ನು ಅರಣ್ಯ ಪ್ರದೇಶದಲ್ಲಿ ಕೈಗೊಳ್ಳುವುದಕ್ಕೆ ಕರ್ನಾಟಕ ಹೈಕೋರ್ಟ್ (karnataka high court) ಮಂಗಳವಾರ ಮಧ್ಯಂತರ ತಡೆಯಾಜ್ಞೆ (interin stay) ನೀಡಿದೆ.
ಸಾಗರದ ಪರಿಸರವಾದಿ ಅಖಿಲೇಶ್ ಚಿಪ್ಲಿ, ಉಡುಪಿಯ ಡಾ.ರವೀಂದ್ರನಾಥ ಶಾನಬಾಗ್ ಮತ್ತು ಶಿವಮೊಗ್ಗದ ಸಿ.ಬಿ ಮನೋಹರ ಕುಮಾರ್ ಸಲ್ಲಿಸಿರುವ ಅರ್ಜಿ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು.
ಕೇಂದ್ರ ಸರಕಾರದ ಪರ ಹಾಜರಾಗಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಅರವಿಂದ ಕಾಮತ್, ''ಯೋಜನೆಗೆ ಕೇಂದ್ರ ವನ್ಯಜೀವಿ ಮಂಡಳಿಯಿಂದ ಅನುಮೋದನೆ ಇನ್ನೂ ಸಿಕ್ಕಿಲ್ಲ. ಯೋಜನೆ ಬಗೆಗಿನ ಆತಂಕಗಳ ಪರಿಶೀಲನೆ ಮಾಡಲಾಗುತ್ತಿದೆ' ಎಂದು ನ್ಯಾಯಪೀಠಕ್ಕೆ ವಿವರಿಸಿದರು.
ರಾಜ್ಯ ಸರಕಾರದ ಪರ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ ಶೆಟ್ಟಿ ಯಾವುದೇ ಮಧ್ಯಂತರ ತಡೆ ನೀಡದಂತೆ ಮನವಿ ಮಾಡಿದರು. ಆದರೆ, ಯೋಜನೆಯಿಂದಾಗುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಾಲಯ, ಅರಣ್ಯ ಪ್ರದೇಶದಲ್ಲಿ ಯಾವುದೇ ಕಾಮಗಾರಿ ಕೈಗೊಳ್ಳಬಾರದು ಎಂದು ಮಧ್ಯಂತರ ತಡೆ ನೀಡಿ ವಿಚಾರಣೆಯನ್ನು ಜೂ. 10ಕ್ಕೆ ಮುಂದೂಡಿತು.
Yettinahole project: ಎತ್ತಿನಹೊಳೆ, ಶರಾವತಿ ಪಂಪ್ ಸ್ಟೋರೇಜ್ ಯೋಜನೆಗೆ ಕೇಂದ್ರ ಸರಕಾರ ಬ್ರೇಕ್
ಅರ್ಜಿದಾರರ ಪರ ವಾದಿಸಿದ ಹಿರಿಯ ವಕೀಲೆ ಬಿ.ವಿ ವಿದ್ಯುಲ್ಲತಾ, ''ವನ್ಯಜೀವಿಗಳ ಪ್ರಯೋಜನಕ್ಕಾಗಿ ಮತ್ತು ಬೇಡದ ಉದ್ದೇಶಗಳಿಗಾಗಿ ವನ್ಯಜೀವಿ ಅಭಯಾರಣ್ಯ ಪ್ರದೇಶ ಬಳಕೆಗೆ ಅನುಮೋದನೆ ನೀಡುವ ಅಧಿಕಾರ ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿಗೆ ಇಲ್ಲ. ಈ ನಿಟ್ಟಿನಲ್ಲಿ, ವನ್ಯಜೀವಿ ರಕ್ಷಣಾ ಕಾಯಿದೆ 1972ರ ಕಲಂ 29ರಡಿಯಲ್ಲಿ ವಿಧಿಸಲಾದ ನಿರ್ಬಂಧವನ್ನು ಗಮನದಲ್ಲಿರಿಸಿಕೊಂಡು ಶರಾವತಿ ಕಣಿವೆಯ ಅಭಯಾರಣ್ಯ ಮತ್ತು ಅದರ ಪರಿಸರ ಸೂಕ್ಷ್ಮ ವಲಯದಲ್ಲಿ ಕೈಗೆತ್ತಿಕೊಳ್ಳಲಿರುವ ಉದ್ದೇಶಿತ ಯೋಜನೆಗೆ ಯಾವುದೇ ಅನುಮೋದನೆ ನೀಡಬಾರದು,'' ಎಂದರು.
ಹೊನ್ನಾವರದಲ್ಲಿ ಪಕ್ಷಾತೀತ ಪ್ರತಿಭಟನೆ
ಶರಾವತಿ ಉಳಿಸಿ ಹೋರಾಟ ಸಮಿತಿ ಪಟ್ಟಣದಲ್ಲಿ ಮಂಗಳವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆಗೆ ಒಕ್ಕೊರಲಿನ ವಿರೋಧ ವ್ಯಕ್ತವಾಯಿತು. ವಿವಿಧ ಮಠಾಧೀಶರು, ಹಾಲಿ ಸಚಿವರು, ಶಾಸಕರು, ಮಾಜಿ ಶಾಸಕರು, ವಿವಿಧ ಪಕ್ಷಗಳ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಪಕ್ಷಾತೀತವಾಗಿ ಯೋಜನೆಯನ್ನು ವಿರೋಧಿಸಿದರು. ವಿವಿಧ ಸಂಘಟನೆಗಳ ಮುಖ್ಯಸ್ಥರು, ಸಾವಿರಾರು ಸಂಖ್ಯೆಯಲ್ಲಿ ಜನರು ಸಮಾವೇಶದಲ್ಲಿ ಸೇರಿದ್ದರು.
Sigandur Bridge: ಶರಾವತಿ ನೂತನ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರು: ನಿತಿನ್ ಗಡ್ಕರಿ ಘೋಷಣೆ
ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ರಾಮಚಂದ್ರಾಪುರ ಮಠಾಧೀಶ ರಾಘವೇಶ್ವರ ಭಾರತೀ ಸ್ವಾಮೀಜಿ, ''ಪ್ರಕೃತಿ ನಾಶ ಮಾಡುವ ಎಲ್ಲ ಯೋಜನೆಗಳೂ ಉತ್ತರ ಕನ್ನಡಕ್ಕೆ ಬರುತ್ತವೆ. ಜನರ ಅಭಿಪ್ರಾಯ ಕೇಳುವ ವ್ಯವಧಾನ ಯಾರಿಗೂ ಇಲ್ಲ. ಯೋಜನೆ ನಿಲ್ಲಿಸಲು ಎಲ್ಲರೂ ಒಂದಾಗಿ ಹೋರಾಟ ಮಾಡೋಣ,'' ಎಂದರು.
ನಾರಾಯಣಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿ, ''ಸಚಿವ ಮಂಕಾಳ ವೈದ್ಯ ಅವರು ಯಾವುದೇ ಕಾರಣಕ್ಕೂ ಈ ಯೋಜನೆ ನಡೆಯಲು ಬಿಡುವುದಿಲ್ಲ. ನಡೆದರೆ ಆ ಸ್ಥಾನದಲ್ಲಿಇರುವುದಿಲ್ಲಎಂದು ವೇದಿಕೆಯಲ್ಲಿ ಘೋಷಣೆ ಮಾಡಬೇಕು,'' ಎಂದು ಆಗ್ರಹಿಸಿದರು.
ಜಿಲ್ಲಾಉಸ್ತುವಾರಿ ಸಚಿವ ಮಂಕಾಳ ವೈದ್ಯ ಮಾತನಾಡಿ ''ಈ ಯೋಜನೆ ಜಾರಿಯಾದಲ್ಲಿ ಭಟ್ಕಳ, ಹೊನ್ನಾವರ, ಕುಮಟಾ ತಾಲೂಕಿನ ಜನರಿಗೆ ಕುಡಿಯುವ ನೀರಿನ ಸಮಸ್ಯೆ, ಮೀನುಗಾರರು, ಕೃಷಿಕರಿಗೂ ತೊಂದರೆಯಾಗಲಿದೆ. ಯೋಜನೆ ಬಗ್ಗೆ ಮಾಹಿತಿ ಸಿಕ್ಕ ತಕ್ಷಣವೇ ಸಿಎಂ ಹಾಗೂ ಇಂಧನ ಮಂತ್ರಿಗಳಿಗೆ ಸಮಸ್ಯೆ ಬಗ್ಗೆ ಅರಿವು ಮೂಡಿಸಿದ್ದೇನೆ. ಯೋಜನೆಗೆ ತಡೆ ನೀಡಿರುವ ಕೇಂದ್ರ ಸರಕಾರವನ್ನು ಅಭಿನಂದಿಸುವೆ,'' ಎಂದರು.