ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಎಸ್​​ಎಸ್​​ಎಲ್​ಸಿ ತೃತೀಯ ಭಾಷೆ ಹಿಂದಿ ಪರೀಕ್ಷೆ ದಿಢೀರ್ ಮುಂದೂಡಿಕೆ: ಮಾರ್ಚ್‌ 30ರ ಬದಲು ಹೊಸ ದಿನಾಂಕ ನಿಗದಿ

SSLC Examination: ಮಾರ್ಚ್‌ 30ರಂದು ನಡೆಯಬೇಕಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಹಾವೀರ ಜಯಂತಿ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಅದರ ಬದಲು ಮಾರ್ಚ್‌ 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ತಿಳಿಸಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ. 26: ಕರ್ನಾಟಕದಾದ್ಯಂತ ಮಾರ್ಚ್​ 18ರಂದು ಎಸ್​​ಎಸ್​ಎಲ್​ಸಿ ಪರೀಕ್ಷೆ (SSLC Examination) ಆರಂಭವಾಗಿದೆ. ಈಗಾಗಲೇ 3 ಪರೀಕ್ಷೆ ಯಶಸ್ವಿಯಾಗಿ ನಡೆದಿವೆ. ಇದೀಗ ಮಾರ್ಚ್‌ 30ರಂದು ನಡೆಯಬೇಕಿದ್ದ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮುಂದೂಡಲಾಗಿದೆ. ಮಹಾವೀರ ಜಯಂತಿ (Mahavir Jayanti 2026) ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಅದರ ಬದಲು ಮಾರ್ಚ್‌ 31ರಂದು ಪರೀಕ್ಷೆ ನಡೆಯಲಿದೆ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

2025 ನವೆಂಬರ್​​ 4ರಂದು ಪ್ರಕಟಿಸಿದ 2026ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ-1ರ ಅಂತಿಮ ವೇಳಾಪಟ್ಟಿಯಲ್ಲಿ ತೃತೀಯ ಭಾಷೆ ಹಿಂದಿ ಪರೀಕ್ಷೆಯನ್ನು ಮಾರ್ಚ್​ 30ರಂದು ನಿಗದಿಪಡಿಸಲಾಗಿತ್ತು. ಇದೀಗ ಈ ಪರೀಕ್ಷೆಯ ದಿನಾಂಕ ಬದಲಾಗಿದ್ದು, ಉಳಿದೆಲ್ಲ ಪರೀಕ್ಷೆಗಳು ಯಥಾಪ್ರಕಾರ ನಡೆಯಲಿದೆ.

ಕಾರಣವೇನು?

ಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್‌ 30 ಸಾರ್ವತ್ರಿಕ ರಜಾ ದಿನ. ಹೀಗಾಗಿ ಮಾರ್ಚ್​ 30ರ ಬದಲು ಮರುದಿನ ಪರೀಕ್ಷೆ ನಡೆಸಲು ತೀರ್ಮಾನಿಸಲಾಗಿದೆ. ಈ ಹಿಂದೆ ಮಹಾವೀರ ಜಯಂತಿಯ ಸಾರ್ವತ್ರಿಕ ರಜೆಯನ್ನು ಮಾರ್ಚ್‌ 31ಕ್ಕೆ ಘೋಷಿಸಲಾಗಿತ್ತು. ಇದೀಗ ರಜೆಯನ್ನು ಮಾರ್ಚ್‌ 30ಕ್ಕೆ ಬದಲಾಯಿಸಿರುವುದರಿಂದ ಪರೀಕ್ಷೆಯ ದಿನಾಂಕವೂ ಬದಲಾಗಿದೆ. ʼʼಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್​ 30ರಂದು ನಿಗದಿಪಡಿಸಲಾಗಿದ್ದ ತೃತೀಯ ಭಾಷೆಯ ಪರೀಕ್ಷೆಯನ್ನು ಮಾರ್ಚ್​ 31ರಂದು ಈಗಾಗಲೇ ನಿಗದಿಪಡಿಸಿರುವ ಅವಧಿಯಲ್ಲಿ ನಡೆಸಲಾಗುವುದು. ಉಳಿದ ವಿಷಯದ ಪರೀಕ್ಷೆಗಳು ವೇಳಾಪಟ್ಟಿಯಂತೆ ಯಥಾವತ್ತಾಗಿ ನಡೆಯಲಿವೆʼʼ ಎಂದು ಕರ್ನಾಟಕ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಸುತ್ತೋಲೆಯಲ್ಲಿ ತಿಳಿಸಿದೆ.

ಪಾಲಕರಿಗೆ ಗುಡ್‌ನ್ಯೂಸ್‌; 1ನೇ ತರಗತಿ ದಾಖಲಾತಿ ವಯೋಮಿತಿಯಲ್ಲಿ 60 ದಿನಗಳ ಸಡಿಲಿಕೆ

2,871 ಪರೀಕ್ಷಾ ಕೇಂದ್ರಗಳು

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಒಟ್ಟು ವಿದ್ಯಾರ್ಥಿಗಳು 9,02,889 ಹೆಸರು ನೋಂದಾಯಿಸಿದ್ದಾರೆ. ಈ ಪೈಕಿ ಹೊಸಬರು-8,12,855, ಪುನರಾವರ್ತಿತರು-62,845 ಮತ್ತು ಖಾಸಗಿ ಅಭ್ಯರ್ಥಿಗಳು-27,189. ಒಟ್ಟು 2,871 ಪರೀಕ್ಷಾ ಕೇಂದ್ರಗಳಿವೆ. ಬೆಳಗ್ಗೆ 10ರಿಂದ ಮಧ್ಯಾಹ್ನ 1:15 ಗಂಟೆವರೆಗೆ ಪರೀಕ್ಷೆಗಳು ನಡೆಯುತ್ತಿವೆ.

ಯಾವೆಲ್ಲ ಪರೀಕ್ಷೆ?

ಮಾರ್ಚ್ 18: ಪ್ರಥಮ ಭಾಷೆ (ಕನ್ನಡ, ಇಂಗ್ಲಿಷ್‌, ಹಿಂದಿ ಇತ್ಯಾದಿ), ಮಾರ್ಚ್ 23: ವಿಜ್ಞಾನ, ಮಾರ್ಚ್ 25: ದ್ವಿತೀಯ ಭಾಷೆ (ಇಂಗ್ಲಿಷ್‌, ಕನ್ನಡ) ಪರೀಕ್ಷೆ ನಡೆದಿದೆ. ಮಾರ್ಚ್ 28: ಗಣಿತ, ಮಾರ್ಚ್ 31: ತೃತೀಯ ಭಾಷೆ (ಹಿಂದಿ) ಮತ್ತು ಏಪ್ರಿಲ್ 2: ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author