ಬೆಂಗಳೂರು, ಡಿ. 13: ರಾಜ್ಯಾದ್ಯಂತ ಮಳೆ ಅಬ್ಬರ ಕಡಿಮೆಯಾಗಿದ್ದು, ಚಳಿಯ ವಾತಾವರಣ ಮೂಡಿದೆ. ಎಲ್ಲೆಡೆ ಮಂಜಿನ ಪರದೆ ಆವರಿಸಿದ್ದು, ಜನರು ಚಳಿಗೆ ಗಡಗಡ ನಡುಗುತ್ತಿದ್ದಾರೆ. ಮುಂದಿನ ಕೆಲವು ದಿನಗಳವರೆಗೆ ಇದೇ ರೀತಿಯ ವಾತಾವರಣ ಮುಂದುವರಿಯಲಿದೆ. ಶನಿವಾರ (ಡಿಸೆಂಬರ್ 13) ಬೆಳಗಾವಿ, ಬಾಗಲಕೋಟೆ, ಬೀದರ್, ವಿಜಯಪುರ, ಕಲಬುರಗಿ, ರಾಯಚೂರು ಮತ್ತು ಯಾದಗಿರಿ ಸೇರಿ 7 ಜಿಲ್ಲೆಗಳಲ್ಲಿ ಶೀತ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ (Karnataka Weather). ಇನ್ನು ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಕನಿಷ್ಠ ಉಷ್ಣಾಂಶದಲ್ಲಿ ಹೆಚ್ಚಿನ ಬದಲಾವಣೆ ಕಂಡುಬರುವುದಿಲ್ಲ.
ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಲಲ್ಲಿ ಮುಂದಿನ 24 ಗಂಟೆಗಳಲ್ಲಿ ಸ್ಪಷ್ಟ ಆಕಾಶ ಕಂಡು ಬರಲಿದೆ. ಇನ್ನು ಕೆಲವು ಪ್ರದೇಶಗಳಲ್ಲಿ ಬೆಳಗಿನ ಜಾವ ದಟ್ಟ ಮಂಜು/ಮಂಜು ಕವಿದಿರುವ ವಾತಾವರಣ ಕಂಡುಬರಲಿದೆ. ಕನಿಷ್ಠ ಮತ್ತು ಗರಿಷ್ಠ ತಾಪಮಾನ ಕ್ರಮವಾಗಿ 15 ಡಿಗ್ರಿ ಸೆಲ್ಶಿಯಸ್ ಹಾಗೂ 28 ಡಿಗ್ರಿ ಸೆಲ್ಶಿಯಸ್ ಇರಲಿದೆ.
ವಿವಿಧ ಕಡೆಗಳಲ್ಲಿ ವಾತಾವರಣ ಹೇಗಿರಲಿದೆ?
ಬೆಳಗಾವಿ, ಬಾಗಲಕೋಟೆ, ರಾಯಚೂರು, ವಿಜಯಪುರ, ಯಾದಗಿರಿ, ಕಲಬುರಗಿ, ಬೀದರ್ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದ್ದು, ವಾತಾವರಣ ತೀವ್ರ ಚಳಿಯಿಂದ ಕೂಡಿರಲಿದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.
ಇನ್ನು ಡಿಸೆಂಬರ್ 17ರವರೆಗೆ ಕರಾವಳಿ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಎಲ್ಲ ಜಿಲ್ಲೆಗಳಲ್ಲಿ ಚಳಿಯ ಜತೆಗೆ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ. ಎಲ್ಲೂ ಮಳೆ ಸುರಿಯುವ ಸಾಧ್ಯತೆ ಇಲ್ಲ. ಹೀಗಾಗಿ ಮೀನುಗಾರರಿಗೆ ಯಾವುದೇ ಎಚ್ಚರಿಕೆ ನೀಡಲಾಗಿಲ್ಲ.
ಇನ್ನು ಉತ್ತರ ಕರ್ನಾಟಕದಲ್ಲಿ ತೀವ್ರ ಶೀತ ಗಾಳಿ ಬೀಸುವ ಸಾಧ್ಯತೆ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ರಾಜ್ಯದ ಸಮತಟ್ಟಾದ ಪ್ರದೇಶಗಲ್ಲಿ ಬೀದರ್‌ನಲ್ಲಿ ಶುಕ್ರವಾರ ಮುಂಜಾನೆ ಅತಿ ಕನಿಷ್ಠ ತಾಪಮಾನ 9 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ.
ಈ ಚಳಿಗಾಲದಲ್ಲಿ ಬೆಂಗಳೂರು ಗಡಗಡ! 10 ವರ್ಷದ ನಂತರ ಕನಿಷ್ಠ ತಾಪಮಾನ!
ವಿಪರೀತ ಚಳಿಗೆ ಏನು ಕಾರಣ?
ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುಂದಿನ ಕೆಲವು ದಿನಗಳಲ್ಲಿ ಉತ್ತರ ಮತ್ತು ಮಧ್ಯ ಭಾರತದಲ್ಲಿ ಶೀತಗಾಳಿ ಬೀಸುವ ಮುನ್ಸೂಚನೆ ನೀಡಿದೆ. ಕಳೆದ ವಾರದಿಂದ ಸುಮಾರು 16 ಡಿಗ್ರಿ ಸೆಲ್ಶಿಯಸ್‌ನಲ್ಲಿದ್ದ ಬೆಂಗಳೂರಿನಲ್ಲಿ ಮುಂದಿನ ವಾರದ ವೇಳೆಗೆ ಕನಿಷ್ಠ ತಾಪಮಾನ ಸುಮಾರು 12 ಡಿಗ್ರಿ ಸೆಲ್ಶಿಯಸ್‌ಗೆ ಇಳಿಯಬಹುದು ಎಂದು ಅದು ಹೇಳಿದೆ. ಕಡಿಮೆ ತೇವಾಂಶದಿಂದಾಗಿ, ರಾತ್ರಿ ತಂಪಾಗುವಿಕೆ ಮತ್ತು ಹಗಲು ತಾಪದ ದರಗಳು ಎರಡೂ ವೇಗವಾಗಿರುತ್ತವೆ ಎಂದು ತಜ್ಞರು ವಿವರಿಸಿದ್ದಾರೆ.
ಮುನ್ನೆಚ್ಚರಿಕೆ
ಮುನ್ನೆಚ್ಚರಿಕೆ ಕ್ರಮವಾಗಿ ಹವಾಮಾನ ಇಲಾಖೆ ಒಂದಷ್ಟು ಸಲಹೆ ನೀಡಿದೆ. ದೇಹದಲ್ಲಿನ ಶಾಖದ ನಷ್ಟದಿಂದಾಗಿ ನಡುಕ, ಮಾತನಾಡಲು ತೊಂದರೆ, ನಿದ್ರಾಹೀನತೆ, ಸ್ನಾಯುಗಳಲ್ಲಿ ಬಿಗಿತ, ಉಸಿರಾಟದ ತೊಂದರೆ/ ಪ್ರಜ್ಞಾಹೀನ ಸ್ಥಿತಿ ಉಂಟಾಗಬಹುದು. ಇದು ತುಂಬಾ ಗಂಭೀರ ಸ್ಥಿತಿಯಾಗಿದ್ದು, ಇಂತಹ ಸಂದರ್ಭದಲ್ಲಿ ತಕ್ಷಣ ವೈದ್ಯಕೀಯ ಸಹಾಯವನ್ನು ಪಡೆಯಿರಿ ಎಂದು ಹೇಳಿದೆ.