ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Karnataka Weather: ರಾಜ್ಯದಲ್ಲಿ ಮಾ. 25ರವರೆಗೆ ಅಕಾಲಿಕ ಬೇಸಿಗೆ ಮಳೆ: ಹವಾಮಾನ ಇಲಾಖೆ

ಕಳೆದ ಎರಡು ದಿನಗಳಿಂದ ರಾಜ್ಯದ ನಾನಾ ಕಡೆ ಮಳೆಯಾಗುತ್ತಿದೆ. ರಾಜ್ಯದಲ್ಲಿ ಮಳೆಯ ಅಬ್ಬರ ಇನ್ನೂ ಮುಗಿದಿಲ್ಲ. ಹವಾಮಾನ ಇಲಾಖೆಯ ವರದಿಯಂತೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರ್ಚ್ 25ರವರೆಗೆ ಗುಡುಗು, ಸಿಡಿಲು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಸಾಂದರ್ಭಿಕ ಚಿತ್ರ

ಬೆಂಗಳೂರು, ಮಾ.19: ರಾಜ್ಯದಾದ್ಯಂತ ಅಕಾಲಿಕ ಬೇಸಿಗೆ ಮಳೆ ಅಬ್ಬರಿಸುತ್ತಿದ್ದು, ಬುಧವಾರ ಬೆಂಗಳೂರು (bengaluru) ಸೇರಿದಂತೆ ಸುಮಾರು 15 ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಆಲಿಕಲ್ಲು ಮಳೆಯಾಗಿದೆ. ರಾಯಚೂರಿನಲ್ಲಿ ಸಿಡಿಲು ಬಡಿದು ಒಬ್ಬ ಯುವಕ ಬಲಿಯಾಗಿದ್ದರೆ, ರಾಜ್ಯದ ಹಲವೆಡೆ ಬೆಳೆ ಹಾಗೂ ಆಸ್ತಿಪಾಸ್ತಿಗೆ ಅಪಾರ ಹಾನಿಯಾಗಿದೆ.

ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಸಾಲಗುಂದ ಗ್ರಾಮದಲ್ಲಿ ಮಳೆ ಸುರಿಯುತ್ತಿದ್ದ ವೇಳೆ ಸಿಡಿಲು ಬಡಿದು ಮಂಜುನಾಥ ಕರಿಯಪ್ಪ (21) ಎಂಬ ಕುರಿಗಾಹಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಲದಲ್ಲಿ ಕುರಿ ಮೇಯಿಸುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಅಪಾರ ಬೆಳೆ ಹಾನಿ

ಆಲಿಕಲ್ಲು ಮಳೆಯಿಂದಾಗಿ ರೈತರು ಕಣ್ಣೀರು ಹಾಕುವಂತಾಗಿದೆ. ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಸನಿಹದ ಕಡಬಗೆರೆಯಲ್ಲಿ ಬೃಹತ್ ಗಾತ್ರದ ಆಲಿಕಲ್ಲುಗಳು ಬಿದ್ದಿವೆ. ಕಾಫಿ, ಬಾಳೆ ಮತ್ತು ಅಡಿಕೆ ತೋಟಗಳು ನಾಶವಾಗಿವೆ. ಖಾಂಡ್ಯದಲ್ಲಿ ಒಂದೇ ದಿನ 2.50 ಇಂಚು ಮಳೆ ದಾಖಲಾಗಿದೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರದಲ್ಲಿ ಗಾಳಿ ಮಳೆಗೆ 39 ಕುರಿಗಳು ಮೃತಪಟ್ಟಿವೆ. ಗುಂಡ್ಲುಪೇಟೆ, ಚಾಮರಾಜನಗರ ಭಾಗಗಳಲ್ಲಿ ಕಲ್ಲಂಗಡಿ, ಟೊಮ್ಯಾಟೊ ಹಾಗೂ ಬಾಳೆ ಬೆಳೆಗಳಿಗೆ ತೀವ್ರ ಹಾನಿಯಾಗಿದೆ.

ಬೇಸಿಗೆಯ ಈ ಸಮಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಆಲಿಕಲ್ಲು ಮಳೆ ಬೀಳುತ್ತಿರುವುದು ಹವಾಮಾನ ವೈಪರೀತ್ಯದ ಸ್ಪಷ್ಟ ಮುನ್ಸೂಚನೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಬಂಗಾಳ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವುದರಿಂದ ಈ ಬದಲಾವಣೆ ಕಂಡುಬಂದಿದೆ.

ಮಾ. 25ರವರೆಗೆ ಮಳೆ ಸಾಧ್ಯತೆ

ರಾಜ್ಯದಲ್ಲಿ ಮಳೆಯ ಅಬ್ಬರ ಇನ್ನೂ ಮುಗಿದಿಲ್ಲ. ಹವಾಮಾನ ಇಲಾಖೆಯ ವರದಿಯಂತೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಮಾರ್ಚ್ 25ರವರೆಗೆ ಗುಡುಗು, ಸಿಡಿಲು ಸಹಿತ ಮಳೆ ಮುಂದುವರಿಯುವ ಸಾಧ್ಯತೆಯಿದೆ.

ಹರೀಶ್‌ ಕೇರ

View all posts by this author