ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹೋರಾಟಕ್ಕೆ ಸಂದ ಜಯ; ಕನ್ನಡಿಗರಿಗೆ ಮಲಯಾಳಂ ಕಡ್ಡಾಯ ಅಲ್ಲ ಎಂದ ಕೇರಳ ಸಿಎಂ ಪಿಣರಾಯಿ ವಿಜಯನ್‌

Malayalam Language Bill: ಕೇರಳ ಸರಕಾರ ಜಾರಿಗೊಳಿಸಲು ಮುಂದಾಗಿರುವ 'ಮಲಯಾಳಂ ಭಾಷಾ ವಿಧೇಯಕ 2025'ಕ್ಕೆ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕನ್ನಡಿಗರಿಗೆ ಮಲಯಾಳಂ ಕಡ್ಡಾಯ ಅಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಸ್ಪಷ್ಟಪಡಿಸಿದ್ದಾರೆ. ಭಾಷಾ ಅಲ್ಪ ಸಂಖ್ಯಾತರ ಹಕ್ಕು ರಕ್ಷಿಸಲಾಗುತ್ತದೆ ಎಂದಿದ್ದಾರೆ.

ಸಿದ್ದರಾಮಯ್ಯ ಮತ್ತು ಪಿಣರಾಯಿ ವಿಜಯನ್‌ (ಸಂಗ್ರಹ ಚಿತ್ರ).

ತಿರುವನಂತಪುರಂ, ಜ. 10: ಕೇರಳ ಸರಕಾರ ಜಾರಿಗೊಳಿಸಲು ಮುಂದಾಗಿರುವ 'ಮಲಯಾಳಂ ಭಾಷಾ ವಿಧೇಯಕ 2025'ಕ್ಕೆ (Malayalam Language Bill 2025) ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಕನ್ನಡಿಗರಿಗೆ ಮಲಯಾಳಂ ಕಡ್ಡಾಯ ಅಲ್ಲ ಎಂದು ಅಲ್ಲಿನ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ (Pinarayi Vijayan) ಸ್ಪಷ್ಟಪಡಿಸಿದ್ದಾರೆ. ಕೇರಳ ಇತ್ತೀಚೆಗೆ ಅಂಗೀಕರಿಸಿದ ವಿಧೇಯಕದಲ್ಲಿ ಕನ್ನಡ ಮಾಧ್ಯಮ ಶಾಲೆ ಸೇರಿದಂತೆ ಎಲ್ಲ ಸರಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ಮಲಯಾಳಂ ಅನ್ನು ಪ್ರಥಮ ಭಾಷೆಯಾಗಿ ಕಡ್ಡಾಯಗೊಳಿಸಬೇಕು ಎನ್ನುವ ಅಂಶವಿದೆ.

ಇದರಿಂದ ಕಾಸರಗೋಡಿನಲ್ಲಿರುವ ಕನ್ನಡಿಗರಿಗೆ ತೀವ್ರ ಸಮಸ್ಯೆಯಾಗುತ್ತದೆ. ಮಾತ್ರವಲ್ಲ ಇದು ಸಂವಿಧಾನದ ಆಶಯಕ್ಕೆ ವಿರುದ್ಧವಾದುದು ಎಂದು ಕರ್ನಾಟಕ ಆಕ್ಷೇಪ ವ್ಯಕ್ತಪಡಿಸಿತ್ತು. ಮುಖ್ಯಮಂತ್ರಿ ಪತ್ರ ಬರೆದಿದ್ದರು. ಜತೆಗೆ ಗಡಿನಾಡಿನಲ್ಲಿರುವ ಕನ್ನಡಿಗರು ಕೇರಳ ಸರ್ಕಾರಕ್ಕೆ ತಮ್ಮ ಆತಂಕ ಮನವರಿಕೆ ಮಾಡಿದ್ದರು. ಇದೀಗ ಪಿಣರಾಯಿ ವಿಜಯನ್‌ ಸ್ಪಷ್ಟನೆ ನೀಡಿದ್ದು, ಕನ್ನಡಿಗರಿಗೆ ಮಲಯಾಳಂ ಕಲಿಕೆ ಕಡ್ಡಾಯವಲ್ಲ ಎಂದಿದ್ದಾರೆ.

ಪಿಣರಾಯಿ ವಿಜಯನ್‌ ಅವರ ಎಕ್ಸ್‌ ಪೋಸ್ಟ್‌:



ಮುಖ್ಯಮಂತ್ರಿ ಸಿದ್ದರಾಮಯ್ಯ ಬರೆದ ಪತ್ರಕ್ಕೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್‌, ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸುವುದಾಗಿ ಭರವಸೆ ನೀಡಿದ್ದಾರೆ. ʼʼಮಸೂದೆಯಲ್ಲಿ ಭಾಷಾ ಅಲ್ಪಸಂಖ್ಯಾತರ ಹಕ್ಕುಗಳನ್ನು ರಕ್ಷಿಸಲು ಒತ್ತು ನೀಡಲಾಗಿದೆ. ಕನ್ನಡ, ತಮಿಳು ಮಾತನಾಡುವ ಭಾಷಾ ಅಲ್ಪಸಂಖ್ಯಾತರ ಹಕ್ಕು ರಕ್ಷಣೆಗಾಗಿ ಈ ಮಸೂದೆಯನ್ನು ತರಲಾಗಿದೆ. ಹಕ್ಕು ರಕ್ಷಣೆಗೆ ಮಸೂದೆಯ ಸೆಕ್ಷನ್ 7ರಲ್ಲಿ ರಕ್ಷಣಾತ್ಮಕ ನಿಯಮ ಅಳವಡಿಸಲಾಗಿದೆ. ಸಚಿವಾಲಯ, ಇಲಾಖೆ ಮುಖ್ಯಸ್ಥರ ಜತೆ ಪತ್ರ ವ್ಯವಹಾರವನ್ನು ಕೂಡ ತಮ್ಮ ಭಾಷೆಯಲ್ಲೇ ನಡೆಸಬಹುದುʼʼ ಎಂದು ತಿಳಿಸಿದ್ದಾರೆ.

ಮಲಯಾಳಂ ಭಾಷಾ ಮಸೂದೆಗೆ ನಮ್ಮ ವಿರೋಧವಿದೆ: ಪಿಣರಾಯಿ ವಿಜಯನ್‌ಗೆ ಸಿದ್ದರಾಮಯ್ಯ ಪತ್ರ

ʼʼಮಸೂದೆಯ 7ನೇ ಸೆಕ್ಷನ್‌ ಭಾಷಾ ಅಲ್ಪಸಂಖ್ಯಾತರ, ವಿಶೇಷವಾಗಿ ಕಾಸರಗೋಡಿನಲ್ಲಿರುವ ಕನ್ನಡ ಮಾತನಾಡುವವರ ಮತ್ತು ಇಡುಕ್ಕಿಯಲ್ಲಿರುವ ತಮಿಳು ಮಾತನಾಡುವ ಸಮುದಾಯದ ಹಕ್ಕುಗಳನ್ನು ನಿರ್ದಿಷ್ಟವಾಗಿ ರಕ್ಷಿಸುತ್ತದೆʼʼ ಎಂದು ವಿವರಿಸಿದ್ದಾರೆ. ʼʼಮಲಯಾಳಂ ಹೊರತುಪಡಿಸಿ ಬೇರೆ ಮಾತೃ ಭಾಷೆಯನ್ನು ಹೊಂದಿರುವ ವಿದ್ಯಾರ್ಥಿಗಳು ಮಲಯಾಳಂ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಒತ್ತಡ ಹೇರುವುದಿಲ್ಲ. ಅವರು ತಮ್ಮಚ್ಛೆಯ ಭಾಷೆಗಳನ್ನು ಆಯ್ಕೆ ಮಾಡಬಹುದುʼʼ ಎಂದು ವಿಜಯನ್ ಹೇಳಿದ್ದಾರೆ.

ಪತ್ರ ಬರೆದಿದ್ದ ಸಿದ್ದರಾಮಯ್ಯ

ಕೇರಳ ಸರಕಾರ ʼಮಲಯಾಳಂ ಭಾಷಾ ವಿಧೇಯಕ 2025' ಜಾರಿಗೊಳಿಸಲು ಮುಂದಾಗಿದ್ದಂತೆ ಸಿದ್ದರಾಮಯ್ಯ ಕನ್ನಡಿಗರ ರಕ್ಷಣೆಗೆ ಧಾವಿಸಿ ತಮ್ಮ ಕಳವಳವನ್ನು ವ್ಯಕ್ತಪಡಿಸಿ ಕೇರಳ ಮುಖ್ಯಮಂತ್ರಿ ಪತ್ರ ಬರೆದಿದ್ದರು. ʼʼಕೇರಳ ಸರಕಾರದ ಈ ನಡೆಯಿಂದ ಕಾಸರಗೋಡು ಭಾಗದ ಕನ್ನಡಿಗರಿಗೆ ಸಮಸ್ಯೆಯಾಗುತ್ತದೆ. ಇದರೊಂದಿಗೆ ಈ ನಡೆ ಸಂವಿಧಾನ ವಿರೋಧಿ. ಆದ್ದರಿಂದ ಕೂಡಲೇ ಈ ವಿಧೇಯಕ ಹಿಂಪಡೆಯಬೇಕುʼʼ ಎಂದು ಆಗ್ರಹಿಸಿದ್ದರು.

ʼʼಕಾಸರಗೋಡಿನಲ್ಲಿ, ವಿಶೇಷವಾಗಿ ಗಡಿ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಜನರು ಕನ್ನಡದಲ್ಲಿ ಶಿಕ್ಷಣವನ್ನು ಅವಲಂಬಿಸಿದ್ದಾರೆ. ಇವರು ಕನ್ನಡ ಭಾಷಾ ಶಿಕ್ಷಣವನ್ನು ಕಲಿಯಲು ಬಯಸುತ್ತಾರೆ ಎಂಬುದು ವಾಸ್ತವಾಂಶ. ಅವರ ಈ ಆದ್ಯತೆಯು ದಶಕಗಳ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸಂವಹನದ ಮೂಲಕ ಸ್ವಾಭಾವಿಕವಾಗಿ ವಿಕಸನಗೊಂಡಿದೆ. ಈ ಸತ್ಯವನ್ನು ಗೌರವಿಸುವುದು ಮಲಯಾಳಂ ಅನ್ನು ದುರ್ಬಲಗೊಳಿಸುವುದಿಲ್ಲ; ಬದಲಿಗೆ ಭಾರತದ ಬಹುತ್ವದ ಬೇರನ್ನು ಬಲಪಡಿಸುತ್ತದೆʼʼ ಎಂದಿದ್ದರು.