ಕೊಡಗು: ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರಿನಲ್ಲಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಬೋಟ್ ಮಗುಚಿ (Harangi boating tragedy) ಗುಜರಾತ್ ಮೂಲದ ದಂಪತಿ ಮೃತಪಟ್ಟಿದ್ದು, ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಪ್ರವಾಸಕ್ಕೆ ಬಂದಿದ್ದ ಕುಟುಂಬ ಹಿನ್ನೀರಿನಲ್ಲಿ ಬೋಟ್ನಲ್ಲಿ ವಿಹಾರ ಮಾಡುತ್ತಿದ್ದ ಸಂದರ್ಭದಲ್ಲಿ ದುರಂತ ನಡೆದಿದೆ.
ಗುಜರಾತ್ ಮೂಲದ ದಂಪತಿ ಸೇರಿ ಇಬ್ಬರು ಮಕ್ಕಳು ಪ್ರವಾಸಕ್ಕೆ ಬಂದಿದ್ದರು. ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಹಾರಂಗಿ ಹಿನ್ನೀರಿನಲ್ಲಿ ಬೋಟ್ ವೇಗವಾಗಿ ತಿರುವು ಪಡೆಯುತ್ತಿದ್ದ ಸಂದರ್ಭದಲ್ಲಿ ನಿಯಂತ್ರಣ ತಪ್ಪಿ ಮಗುಚಿದೆ. ಬೋಟ್ನಲ್ಲಿದ್ದ ನಾಲ್ವರು ಪ್ರವಾಸಿಗರು ಲೈಫ್ ಜಾಕೆಟ್ ಧರಿಸಿದ್ದರು. ಆದರೂ ದಂಪತಿ ಬೋಟ್ನ ಅಡಿಯಲ್ಲಿ ಸಿಲುಕಿ ಮೃತಪಟ್ಟಿದ್ದಾರೆ. ಮೃತರ ಹೆಸರು, ಗುರುತು ಪತ್ತೆ ಆಗಿಲ್ಲ.
ಇನ್ನು ಬೋಟ್ ಪಲ್ಟಿಯಾದ ಬಳಿಕ ನೀರಿನಲ್ಲಿ ತೇಲುತ್ತಿದ್ದ ದಂಪತಿಯ ಇಬ್ಬರು ಮಕ್ಕಳನ್ನು ರಕ್ಷಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.