ಕೊಡಗು: ಜಿಲ್ಲೆಯ ದುಬಾರೆ ಆನೆ ಶಿಬಿರದಲ್ಲಿ ನಡೆದ ಸಾಕಾನೆಗಳ ನಡುವಿನ ಭೀಕರ ಕಾದಾಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ 'ಮಾರ್ತಾಂಡ' (Elephant Marthanda) (35 ವರ್ಷ) ಆನೆಯು ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಮೃತಪಟ್ಟಿದೆ. ಮೇ 18 ರ ಸೋಮವಾರ ಮಧ್ಯಾಹ್ನ ಕಾವೇರಿ ನದಿಯಲ್ಲಿ ಆನೆಗಳಿಗೆ ಸ್ನಾನ ಮಾಡಿಸುತ್ತಿದ್ದ ವೇಳೆ ಸೌಮ್ಯ ಸ್ವಭಾವದ 'ಮಾರ್ತಾಂಡ' ಆನೆ ಮೇಲೆ, ದಸರಾ ಆನೆ 'ಕಂಜನ್' (28 ವರ್ಷ) ಭೀಕರವಾಗಿ ದಾಳಿ ನಡೆಸಿತ್ತು. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಮಾರ್ತಾಂಡ ಕೊನೆಯುಸಿರೆಳೆದಿದೆ ಎಂದು ತಿಳಿದುಬಂದಿದೆ.
ಆನೆಗಳ ಕಾದಾಟದ ವೇಳೆ ಆನೆಯಡಿ ಸಿಲುಕಿ ತಮಿಳುನಾಡು ಮೂಲದ ಮಹಿಳೆ ಕೂಡ ಮೃತಪಟ್ಟಿದ್ದರು. ಈ ವೇಳೆ ಕಂಜನ್ ಆನೆಯು ತನ್ನ ಚೂಪಾದ ದಂತಗಳಿಂದ ಮಾರ್ತಾಂಡನ ಹೊಟ್ಟೆ, ಕಿವಿಯ ಹಿಂಭಾಗ ಹಾಗೂ ಕಾಲುಗಳಿಗೆ ತಿವಿದು ಗಂಭೀರ ಗಾಯಗೊಳಿಸಿತ್ತು. ದಾಳಿಯ ರಭಸಕ್ಕೆ ಮಾರ್ತಾಂಡ ನದಿಯಲ್ಲೇ ಕುಸಿದು ಬಿದ್ದಿದ್ದ.
ಘಟನೆ ನಡೆದ ತಕ್ಷಣ ಅರಣ್ಯ ಇಲಾಖೆಯ ಪಶುವೈದ್ಯರಾದ ಡಾ. ಮುಜೀಬ್ ನೇತೃತ್ವದ ವೈದ್ಯಕೀಯ ತಂಡ ಇಡೀ ರಾತ್ರಿ ಮಾರ್ತಾಂಡನಿಗೆ ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಲು ಹರಸಾಹಸ ಪಟ್ಟಿತ್ತು. ಆದರೆ, ಗಂಭೀರ ಗಾಯಗಳಾಗಿ ರಕ್ತಸ್ರಾವ ನಿಲ್ಲದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಮಾರ್ತಾಂಡ ಮಂಗಳವಾರ ಬೆಳಗ್ಗೆ ಸಾವನ್ನಪ್ಪಿದ್ದಾನೆ. ಮಾರ್ತಾಂಡನ ಅಗಲಿಕೆಯಿಂದ ಮಾವುತರು ಮತ್ತು ಶಿಬಿರದ ಸಿಬ್ಬಂದಿ ಕಣ್ಣೀರಿಟ್ಟಿದ್ದಾರೆ.
ಕಾಳಗದ ವೇಳೆ ಆನೆಯಡಿ ಸಿಲುಕಿ ಮೃತಪಟ್ಟ ಮಹಿಳೆ
ಎರಡು ಆನೆಗಳ ಕಾಳಗದ ವೇಳೆ ಸಿಲುಕಿ ಮಹಿಳೆ ಮೃತಪಟ್ಟ ಘಟನೆ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ನಡೆದಿತ್ತು. ಚೆನ್ನೈ ಮೂಲದ ಪಲ್ಲಾವರಂನ ನಿವಾಸಿ ಜುನೆಸ್ಸಿ (33) ಮೃತ ದುರ್ದೈವಿ. ಘಟನೆಯಲ್ಲಿ ಪತಿ ಜೋಯಲ್‌ಗೂ ಗಾಯಗಳಾಗಿವೆ.
ಪ್ರವಾಸಿ ತಾಣ ಕೊಡಗಿನ ಹೆಸರುವಾಸಿ ದುಬಾರೆಯಲ್ಲಿ ಸಾಕಾನೆ ಮಾರ್ತಾಂಡನಿಗೆ ನದಿಯಲ್ಲಿ ಸ್ನಾನ ಮಾಡಿಸುತ್ತಿದ್ದ ದೃಶ್ಯವನ್ನು ಪ್ರವಾಸಿಗರು ವೀಕ್ಷಿಸುತ್ತಿದ್ದರು. ಈ ಸಂದರ್ಭ ಮದವೇರಿದ ಮತ್ತೊಂದು ಸಾಕಾನೆ ಕಂಜನ್ ಏಕಾಏಕಿ ಮಕ್ನಾ ಆನೆ ಮೇಲೆ ದಾಳಿ ಮಾಡಿತ್ತು. ಈ ವೇಳೆ ಮಹಿಳೆ ಜುನೆಸ್ಸಿ ಆನೆಯಡಿ ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡಿದ್ದರು. ಗಾಯಾಳು ಜುನೆಸ್ಸಿ ಅವರನ್ನು ಕುಶಾಲನಗರದ ಆಸ್ಪತ್ರೆಗೆ ದಾಖಲಿಸಲಾಯಿತ್ತಾದರೂ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು. ಗಾಯಗೊಂಡ ಪತಿ ಜೋಯಲ್ ಗೆ ಚಿಕಿತ್ಸೆ ನೀಡಲಾಗಿದೆ. ಪತಿಯ ಕೈಯಲ್ಲಿದ್ದ ಪುತ್ರಿ ಅಪಾಯದಿಂದ ಪಾರಾಗಿದ್ದಾಳೆ.
ದಸರಾದಲ್ಲಿ ಕಂಜನ್ ಆನೆ ಬಳಸದಂತೆ ಅರಣ್ಯ ಸಚಿವರ ಸೂಚನೆ
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರು, ಇನ್ನುಮುಂದೆ ಮೈಸೂರು ದಸರಾ ಮಹೋತ್ಸವದಲ್ಲಿ ಕಂಜನ್ ಆನೆಯನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಆನೆಯ ವರ್ತನೆಯಲ್ಲಿ ಕಂಡುಬಂದ ಆಕ್ರಮಣಕಾರಿ ಪ್ರವೃತ್ತಿ ಮತ್ತು ಅದರಿಂದ ಸಂಭವಿಸಿದ ಸಾವು-ನೋವುಗಳನ್ನು ಗಮನದಲ್ಲಿಟ್ಟುಕೊಂಡು ಸಚಿವರು ಈ ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ.
Dubare Elephant Camp: ಕೊಡಗಿನ ದುಬಾರೆಯಲ್ಲಿ ಘೋರ ಘಟನೆ; ಸಾಕಾನೆಗಳ ಕಾದಾಟದ ವೇಳೆ ಸಿಲುಕಿ ಮಹಿಳೆ ಸಾವು!
ಕಳೆದ ಮೂರು ವರ್ಷಗಳಿಂದ ಕಂಜನ್ ಆನೆಯು ಮೈಸೂರು ದಸರಾ ಮಹೋತ್ಸವದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿತ್ತು. ತನ್ನ ಶಾಂತ ಸ್ವಭಾವ ಹಾಗೂ ಗಾಂಭೀರ್ಯದಿಂದ ದಸರಾ ಗಜಪಡೆಯಲ್ಲಿ ಗುರುತಿಸಿಕೊಂಡಿದ್ದ ಕಂಜನ್, ಜನಮನ ಸೆಳೆದಿತ್ತು. ಆದರೆ ದುಬಾರೆ ಶಿಬಿರದಲ್ಲಿ ನಡೆದ ಈ ರಕ್ತಸಿಕ್ತ ಕಾದಾಟದ ನಂತರ, ಸಾರ್ವಜನಿಕ ಸುರಕ್ಷತೆಯ ದೃಷ್ಟಿಯಿಂದ ಹಾಗೂ ಮುಂಜಾಗ್ರತಾ ಕ್ರಮವಾಗಿ ಕಂಜನ್‌ನನ್ನು ದಸರಾ ಉತ್ಸವದಿಂದ ದೂರವಿಡಲು ಸರ್ಕಾರ ನಿರ್ಧರಿಸಿದೆ.