ಕೊಡಗು: ಕಾಡಿನೊಳಗೆ ಅಕ್ರಮವಾಗಿ ನಿರ್ಮಿಸಿದ ಚರ್ಚ್ ಉದ್ಘಾಟನೆಗೆ ತಮಿಳುನಾಡಿನಿಂದ ಆಗಮಿಸಿದ್ದ 40ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಕೊಡಗಿನಲ್ಲಿ (Kodagu) ನಡೆದಿದೆ. ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೇರೂರಿನ ಗಿರಿಜನರು ಕಾಡಿನಲ್ಲಿ ಅಕ್ರಮವಾಗಿ ಚರ್ಚ್ (church) ನಿರ್ಮಿಸಿದ್ದು, ಶನಿವಾರ ಉದ್ಘಾಟನೆ ಕಾರ್ಯಕ್ರಮ ಹಿನ್ನೆಲೆ ತಮಿಳುನಾಡಿನಿಂದ ಜನರನ್ನು ಕರೆಸಲಾಗಿತ್ತು. ಈ ವೇಳೆ ಸ್ಥಳೀಯರು ಕಾರ್ಯಕ್ರಮವನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕುಶಾಲನಗರ ವೃತ್ತ ನಿರೀಕ್ಷಕ ಪ್ರದೀಪ್, ಸುಂಟಿಕೊಪ್ಪ ಪೊಲೀಸ್ ಠಾಣಾಧಿಕಾರಿಗಳಾದ ಮೋಹನ್‌ರಾಜ್, ರಾಮಚಂದ್ರ, ನಾಕೂರು ಶಿರಂಗಾಲ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶ್ರೀಕಾಂತ್, ಪಿಡಿಒ ಆಸ್ಮಾ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಮೂಲಕ ಯಾವುದೇ ಅನುಮತಿ ಪಡೆಯದೇ ಕಟ್ಟಡ ನಿರ್ಮಿಸಿರುವುದಾಗಿ ತಿಳಿದುಬಂದಿದೆ. ಈ ವೇಳೆ ಸ್ಥಳೀಯರು ಹಾಗೂ ಹಾಡಿ ನಿವಾಸಿಗಳ ನಡುವೆ ವಾಗ್ವಾದ ನಡೆದಿದ್ದು, ತಮ್ಮಿಷ್ಟದಂತೆ ತಾವು ಪ್ರಾರ್ಥನೆಯಲ್ಲಿ ತೊಡಗಿರುವುದಾಗಿ ಹಾಡಿ ನಿವಾಸಿಗಳು ವಾದಿಸಿದ್ದಾರೆ.
ಬಳಿಕ ಪೊಲೀಸರು ತಮಿಳುನಾಡು ಮೂಲದ 40ಕ್ಕೂ ಹೆಚ್ಚು ಜನರನ್ನು ವಾಹನ ಸಮೇತವಾಗಿ ವಶಕ್ಕೆ ಪಡೆದು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಈ ಕುರಿತು ಮಾತನಾಡಿರುವ ಬಿಜೆಪಿ ಮುಖಂಡ ಹೇರೂರು ಚಂದ್ರಶೇಖರ್, ಹೇರೂರು ಗಿರಿಜನ ಕಾಡಿನಲ್ಲಿ ಮತಾಂತರ ಚಟುವಟಿಕೆ ನಡೆಸುತ್ತಿದ್ದಾರೆ. ಮತಾಂತರಗೊಂಡ ಆದಿವಾಸಿಗಳು ಸಮಾಜ ಕಲ್ಯಾಣ ಇಲಾಖೆ ಜಾಗದಲ್ಲಿ ಅನಧಿಕೃತವಾಗಿ ಚರ್ಚ್ ನಿರ್ಮಿಸಿ ಪ್ರಾರ್ಥನೆಗೆ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದರ ಉದ್ಘಾಟನೆಗೆ ತಮಿಳುನಾಡಿನಿಂದ ಜನ ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಹಾಗಾಗಿ ಅಕ್ರಮ ಮತಾಂತರ ಪ್ರಕ್ರಿಯೆಗಳಿಗೆ ಕಡಿವಾಣ ಹಾಕಬೇಕಿದೆ ಎಂದು ಒತ್ತಾಯಿಸಿದ್ದಾರೆ.
ಬಕ್ರೀದ್ ಹಬ್ಬದ ಹಿನ್ನೆಲೆ ಅನಧಿಕೃತ ಕುರಿ ಮತ್ತು ಮೇಕೆ ಮಾರುಕಟ್ಟೆ ಶೆಡ್ ತೆರವು
ಮಂಗಳೂರಿನಲ್ಲಿ ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿ
ಮಂಗಳೂರು: ಏಕಾಏಕಿ ಲಿಫ್ಟ್ ಕುಸಿದು ಇನ್‌ಸ್ಟಾ ಮಾರ್ಟ್ ಉದ್ಯೋಗಿ ಮೃತಪಟ್ಟಿರುವ ಘಟನೆ ಮಂಗಳೂರಿನ ಕುಂಟಿಕಾನ ಎಂಬಲ್ಲಿ ನಡೆದಿದೆ. ಬೆಳ್ತಂಗಡಿ ಬೆಳಲು ನಿವಾಸಿ ನೌಫಾಲ್ (28) ಮೃತರು. ಇನ್‌ಸ್ಟಾ ಮಾರ್ಟ್ ಸಪ್ಲೈ ಪಾಯಿಂಟ್‌ನಲ್ಲಿ ದಿನಸಿ ವಸ್ತುಗಳನ್ನು ಲಿಫ್ಟ್‌ನಲ್ಲಿ ಸಾಗಿಸುತ್ತಿದ್ದರು. ಈ ವೇಳೆ ದುರ್ಘಟನೆಯಾಗಿದೆ. ದುರಂತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕದ್ರಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.