ಮಡಿಕೇರಿ, ಏ.23: ಕೊಡಗು (Coorg) ಜಿಲ್ಲೆಯ ಪೊನ್ನಂಪೇಟೆ (Ponnampete) ತಾಲೂಕಿನ ಕುಟ್ಟ ಗ್ರಾಮದಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ (Physical Abuse) ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪ್ರವಾಸೋದ್ಯಮ ಇಲಾಖೆ, ಆರೋಪಿತ ಹೋಂಸ್ಟೇಯ (Home stay) ಪರವಾನಗಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಈಗಾಗಲೇ ವೃಜೇಶ್ ಕುಮಾರ್ ಹಾಗೂ ಮಾಲೀಕ ವಿಶಾಲ್‌ನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆ ವಾಷಿಂಗ್ಟನ್ ಮೂಲದ ಮಹಿಳೆಯೊಬ್ಬರು ಪ್ರವಾಸಕ್ಕಾಗಿ ಕುಟ್ಟ ಗ್ರಾಮದ ‘ದೇವಿ ವಿಲ್ಲಾ’ ಹೋಂಸ್ಟೇಗೆ ಬಂದಿದ್ದರು. ಈ ವೇಳೆ ಹೋಂಸ್ಟೇಯ ಕುಕ್ ಆಗಿ ಕೆಲಸ ಮಾಡುತ್ತಿದ್ದ ಜಾರ್ಖಂಡ್ ಮೂಲದ ವೃಜೇಶ್ ಕುಮಾರ್ ಎಂಬಾತ ಮಹಿಳೆಯ ಪಾನೀಯಕ್ಕೆ ಮಾದಕ ದ್ರವ್ಯ ಬೆರೆಸಿ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ. ಘಟನೆ ನಡೆದ ಬಳಿಕ ಮಹಿಳೆ ಸಹಾಯಕ್ಕಾಗಿ ಯತ್ನಿಸಿದಾಗ, ಹೋಂಸ್ಟೇ ಮಾಲೀಕ ವಿಶಾಲ್ ಸುಮಾರು ಮೂರು ದಿನಗಳ ಕಾಲ ವೈಫೈ ಸಂಪರ್ಕ ಕಡಿತಗೊಳಿಸಿ, ಮಹಿಳೆಗೆ ಹೊರಗಿನ ಜಗತ್ತಿನೊಂದಿಗೆ ಸಂಪರ್ಕ ಸಾಧಿಸಲು ಬಿಡದೆ ಪ್ರಕರಣ ಮುಚ್ಚಿಹಾಕಲು ಯತ್ನಿಸಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿತ್ತು.
ಘಟನೆಯ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಪ್ರವಾಸೋದ್ಯಮ ಇಲಾಖೆಯು, ಪ್ರವಾಸಿಗರ ಸುರಕ್ಷತೆಯಲ್ಲಿ ವಿಫಲವಾದ ಮತ್ತು ಅಕ್ರಮ ಎಸಗಿದ ಹಿನ್ನೆಲೆಯಲ್ಲಿ 2024ರ ಜನವರಿಯಲ್ಲಷ್ಟೇ ಪರವಾನಗಿ ಪಡೆದಿದ್ದ ಈ ಹೋಂಸ್ಟೇಯನ್ನು ಬಂದ್ ಮಾಡಿದೆ. ಜಿಲ್ಲೆಯ ಎಲ್ಲಾ ಹೋಂಸ್ಟೇಗಳು ಕಡ್ಡಾಯವಾಗಿ ಪ್ರವಾಸಿಗರ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ಕಚೇರಿಯಲ್ಲಿ ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ಆರೋಪ: ಟೀಂ ಲೀಡ್ ಸೇರಿ 6 ಜನ ಟೆಕ್ಕಿಗಳ ಬಂಧನ
ಕಳೆದ ವರ್ಷ ಹಂಪಿಯ ಸಮೀಪ ರೆಸಾರ್ಟ್ ಒಂದಕ್ಕೆ ಬಂದಿದ್ದ ಇಸ್ರೇಲ್‌ನ ಮಹಿಳೆ ಹಾಗೂ ಸ್ಥಳೀಯ ಮಹಿಳೆಯೊಬ್ಬರ ಮೇಲೆ ಸ್ಥಳೀಯ ದುಷ್ಕರ್ಮಿಗಳ ಗುಂಪೊಂದು ಅತ್ಯಾಚಾರವೆಸಗಿತ್ತು. ಅವರ ಜೊತೆಗಿದ್ದ ಒಬ್ಬ ಪುರುಷನನ್ನು ಕಾಲುವೆಗೆ ತಳ್ಳಿ ಕೊಂದುಹಾಕಿದ್ದರು. ಈ ಘಟನೆಯಲ್ಲಿ ಮೂವರು ಪಾತಕಿಗಳಿಗೆ ಗಲ್ಲು ಶಿಕ್ಷೆ ಘೋಷಣೆಯಾಗಿದೆ. ಇದಾದ ಬಳಿಕ ಹೋಂಸ್ಟೇಗಳು ಹಾಗೂ ರೆಸಾರ್ಟ್‌ಗಳ ಕಾರ್ಯಾಚರಣೆಯ ಬಗ್ಗೆ ಸರಕಾರ ಹೆಚ್ಚಿನ ನಿಗಾ ವಹಿಸಿದೆ.