ಕೊಡಗು, ಅ.09: ಮಡಿಕೇರಿ ತಾಲೂಕಿನ ಕಾಟಿಕೇರಿ ಗ್ರಾಮದ ವಸತಿ ಶಾಲೆಯಲ್ಲಿ (Kodagu school Tragedy) ಗುರುವಾರ ಬೆಳಗ್ಗೆ ನಡೆದ ನಡೆದ ಅಗ್ನಿ ದುರಂತದಲ್ಲಿ ಪುಷ್ಪಕ್ ಎಂಬ ಬಾಲಕ ಮೃತಪಟ್ಟಿದ್ದ. ಇನ್ನು ಅವಘಡದಲ್ಲಿ 51 ಮಕ್ಕಳು ಅಪಾಯದಿಂದ ಪಾರಾಗಿದ್ದರು. ಇದಕ್ಕೆ ಕಾರಣ ಇಬ್ಬರು ಬಾಲಕರು ತೋರಿದ ಧೈರ್ಯ, ಸಾಹಸವಾಗಿದೆ. ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರಿಬ್ಬರ ಸಮಯಪ್ರಜ್ಞೆಯಿಂದ 51 ಮಕ್ಕಳ ಜೀವ ಉಳಿದಿದೆ. ಹೀಗಾಗಿ ಇವರ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.
ಇಂದು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಶಾಲಾ ಕಟ್ಟಡದಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ನಡೆದ ಅಗ್ನಿ ಅವಘಡದಲ್ಲಿ ಭಾಗಮಂಡಲ ಸಮೀಪದ ಚೆಟ್ಟಿ ಮಾನಿ ಗ್ರಾಮದ ಪುಷ್ಪಕ್ ಎಂಬ ಬಾಲಕ ಮೃತಪಟ್ಟಿದ್ದ.

ಘಟನೆ ಸಂದರ್ಭದಲ್ಲಿ ಇಬ್ಬರು ಮಕ್ಕಳು ಸಾಹಸ ಪ್ರದರ್ಶಿಸಿ ಉಳಿದ ಮಕ್ಕಳನ್ನು ರಕ್ಷಿಸಿದ್ದಾರೆ. ಬಬಿನ್ ಮತ್ತು ಯಶ್ವಿನ್ ಎಂಬ ಬಾಲಕರು ಬೆಂಕಿ ಹೊಗೆಯಿಂದ ಎಚ್ಚೆತ್ತಿದ್ದಾರೆ. ತಕ್ಷಣವೇ ಕಿರುಚಾಡಿ ಎಲ್ಲಾ ಮಕ್ಕಳನ್ನು ಎಬ್ಬಿಸಿ ಬಾಗಿಲಿನತ್ತ ಓಡಿಸಿದ್ದಾರೆ. ಆದರೆ ಬಾಗಿಲು ತೆರೆದುಕೊಂಡಿಲ್ಲ. ಕಿಟಕಿಯ ಗಾಜನ್ನು ಪ್ಲಾಸ್ಕ್ನಿಂದ ಒಡೆಯಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಹಾಗಾಗಿ ತಕ್ಷಣವೇ ಮತ್ತೊಂದು ಕೋಣೆಗೆ ಓಡಿ ಅಲ್ಲಿ ಕಿಟಗಿ ಬಾಗಿಲು ತೆರೆದು ಉಳಿದ ಮಕ್ಕಳನ್ನು ಹೊರಕ್ಕೆ ಕಳುಹಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬಾಲಕ ಪುಷ್ಪಕ್ ಮಾತ್ರ ಹೊರ ಬರಲಾರದೆ ಮೃತಪಟ್ಟಿದ್ದಾನೆ. ಸದ್ಯ ಬಾಲಕರ ಸಮಯಪ್ರಜ್ಞೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಈ ಸುದ್ದಿಯನ್ನೂ ಓದಿ | Fire Tragedy: ವಸತಿ ಶಾಲೆಯಲ್ಲಿ ಬೆಂಕಿ ಅನಾಹುತ, 2ನೇ ತರಗತಿ ವಿದ್ಯಾರ್ಥಿ ಸಜೀವ ದಹನ
ಮಗ ಪುಷ್ಪಕ್ ನನ್ನು ಕಳೆದುಕೊಂಡ ತಾಯಿ ತ್ರಿವೇಣಿ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ದೆಹಲಿ ಮೂಲದ ಇಂಡಸ್ ಕ್ವಾಲಿಟಿ ಎಜಕೇಷನ್ ಸಂಸ್ಥೆ ನಡೆಸುತ್ತಿರುವ ಖಾಸಗಿ ವಸತಿ ಶಾಲೆಯಲ್ಲಿ ಅಗ್ನಿ ದುರಂತ ಸಂಭವಿಸಿದೆ. ಹಳೆಯ ಮನೆಯೊಂದರಲ್ಲಿ ಈ ಶಾಲೆ ನಡೆಸಲಾಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವ ಭರವಸೆಯನ್ನು ಜಿಲ್ಲಾಡಳಿತ ನೀಡಿದೆ.