ಕೊಡಗು: ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ಮಲ್ಲಳ್ಳಿ ಜಲಪಾತದ (Mallalli Falls) ಬಳಿ ರೀಲ್ಸ್ ಮಾಡಲು ಹೋಗಿ ಅಪಾಯಕ್ಕೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಸ್ಥಳೀಯರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣೆಗೊಳಗಾದ ವಿದ್ಯಾರ್ಥಿಗಳನ್ನು ಆಂಧ್ರಪ್ರದೇಶದ ಗಣೇಶ್ ನಾಯಕ್ (21) ಹಾಗೂ ಸಂತೋಷ್ ಕುಮಾರ್ (23) ಎಂದು ಗುರುತಿಸಲಾಗಿದೆ.
ಸ್ನೇಹಿತರೊಂದಿಗೆ ಸೋಮವಾರ ಜಲಪಾತ ವೀಕ್ಷಣೆಗೆ ಬಂದಿದ್ದ ಇವರು, ಸುರಕ್ಷತಾ ಬೇಲಿಯನ್ನು ಲೆಕ್ಕಿಸದೆ ಹೊಳೆಗೆ ಇಳಿದು ನೀರಿನಲ್ಲಿ ಆಟವಾಡುತ್ತಿದ್ದರು. ನೀರಿನ ಸೆಳೆತಕ್ಕೆ ಸಿಲುಕಿ ಬಂಡೆಯೊಂದನ್ನು ಹಿಡಿದು ಸುಮಾರು ಒಂದು ಗಂಟೆ ಜೀವ ಉಳಿಸಿಕೊಳ್ಳಲು ಪರದಾಡಿದ್ದಾರೆ.
ಯುವಕರು ನೀರಿನಲ್ಲಿ ಆಟವಾಡುತ್ತಿದ್ದಾಗ ಮೇಲ್ಭಾಗದಲ್ಲಿರುವ ಜಲವಿದ್ಯುತ್ ಉತ್ಪಾದನಾ ಘಟಕದಿಂದ ನೀರನ್ನು ಹರಿಸಲಾಗಿದೆ. ನೀರು ಬಿಡುವ ಮೊದಲು ನಿಯಮಾನುಸಾರ ಸೈರನ್ ಮೊಳಗಿಸಲಾಗಿದ್ದರೂ, ವಿದ್ಯಾರ್ಥಿಗಳು ಅದನ್ನು ಗಮನಿಸಿಲ್ಲ ಎನ್ನಲಾಗಿದೆ. ಕೆಲವೇ ಕ್ಷಣಗಳಲ್ಲಿ ನೀರಿನ ಹರಿವು ಏಕಾಏಕಿ ಹೆಚ್ಚಾಗಿ ಇಬ್ಬರೂ ಸೆಳೆತಕ್ಕೆ ಸಿಲುಕಿದರು. ಅಪಾಯವನ್ನು ಅರಿತ ಅವರು ಸಮೀಪದ ಬಂಡೆಯನ್ನು ಹಿಡಿದುಕೊಂಡು ಜೀವ ಉಳಿಸಿಕೊಳ್ಳಲು ಹರಸಾಹಸಪಟ್ಟರು. ನೀರಿನ ಮಟ್ಟ ನಿರಂತರ ಏರಿಕೆಯಾಗುತ್ತಿದ್ದರಿಂದ ಅಲ್ಲಿಂದ ಹೊರಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದರು.
ಸುಮಾರು ಒಂದು ಗಂಟೆಯ ಬಳಿಕ ಸ್ಥಳೀಯರಿಗೆ ವಿಚಾರ ತಿಳಿದಿದ್ದು, ತಕ್ಷಣ ಜಲವಿದ್ಯುತ್ ಘಟಕದ ಅಧಿಕಾರಿಗಳಿಗೆ ಮಾಹಿತಿ ನೀಡಿ ನೀರಿನ ಹರಿವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಮನವಿ ಮಾಡಲಾಗಿದೆ. ಬಳಿಕ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಿ, ಅಪಾಯದ ನಡುವೆ ಸಿಲುಕಿದ್ದ ಇಬ್ಬರು ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಿದ್ದಾರೆ.
ಬಳಿಕ ಇಬ್ಬರು ವಿದ್ಯಾರ್ಥಿಗಳನ್ನು ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರ ಪ್ರಕಾರ ಇಬ್ಬರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಹಾಗೂ ಯಾವುದೇ ಗಂಭೀರ ಗಾಯಗಳಿಲ್ಲ ಎಂದು ತಿಳಿದುಬಂದಿದೆ.
ಮಹಾರಾಷ್ಟ್ರ ಪ್ರವಾಹ; ವೃದ್ಧೆಯನ್ನು ಹೆಗಲ ಮೇಲೆ ಹೊತ್ತು ಸಾಗಿದ ಪೊಲೀಸ್‌ಗೆ ಬಿಗ್ ಸೆಲ್ಯೂಟ್ ಹೊಡೆದ ನೆಟ್ಟಿಗರು
ಪ್ರವಾಸಿಗರಿಗೆ ಎಚ್ಚರಿಕೆ
ಜಲಪಾತ, ನದಿ ಹಾಗೂ ಹೊಳೆ ಪ್ರದೇಶಗಳಲ್ಲಿ ಸುರಕ್ಷತಾ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಅತ್ಯಗತ್ಯ ಸೈರನ್ ಎಚ್ಚರಿಕೆ ಫಲಕಗಳು ಹಾಗೂ ಸುರಕ್ಷತಾ ಬೇಲಿಗಳನ್ನು ನಿರ್ಲಕ್ಷಿಸುವುದು ಜೀವಕ್ಕೆ ಅಪಾಯವನ್ನುಂಟು ಮಾಡಬಹುದು ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ.