ಕೋಲಾರ: ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ಗಣೇಶ ದೇವಸ್ಥಾನಕ್ಕೆ (Kurudumale Ganesha Temple) ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ಪೂಜೆ ಬಳಿಕ ಮಾತನಾಡಿ ಮಾಜಿ ಸಿಎಂ, ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಯಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿರುವುದಾಗಿ ತಿಳಿಸಿದರು.
ಬರದ ಬಗ್ಗೆ ಸರ್ಕಾರಕ್ಕೆ ಚಿಂತೆ ಇಲ್ಲ
ಬರದ ಕುರಿತು ರಾಜ್ಯ ಸರ್ಕಾರಕ್ಕೆ ಯಾವುದೇ ಚಿಂತೆ ಇಲ್ಲ. ರಾಜ್ಯದಲ್ಲಿ ಮಳೆ ಇಲ್ಲ, ಬೆಳೆ ಇಲ್ಲ, ಕೆರೆ ಕಟ್ಟೆ, ಜಲಾಶಯಗಳಲ್ಲಿ ನೀರಿಲ್ಲ. ಇದರಿಂದ ರಾಜ್ಯದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಉತ್ತಮ ಮಳೆ, ಬೆಳೆಯಾಗಲೆಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ತಿಳಿಸಿದರು.

ಬರದ ಕುರಿತು ಇವತ್ತು ಸಿಎಂ ಸಭೆ ಕರೆದಿದ್ದಾರೆ. ರೈತರ ಕಣ್ಣೀರು ಒರೆಸುವ, ನೆಮ್ಮದಿಯಾಗಿ ಬದಕುವ ವ್ಯವಸ್ಥೆ ಈ ಸರ್ಕಾರ ಮಾಡಿಲ್ಲ. ಕುಡಿಯುವ ನೀರಿಗೆ ಹಾಹಾಕಾರ ಆರಂಭವಾಗಿದೆ, ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ವಿರೋಧ ಪಕ್ಷವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ. ರಾಜ್ಯದ ಉದ್ದಗಲಕ್ಕೂ ಹೋರಾಟ ಮಾಡಲಾಗುತ್ತಿದೆ ಎಂದು ನುಡಿದರು.

ಬಿಡದಿ ಟೌನ್ ಶಿಪ್ ಕುರಿತು ಮಾತನಾಡಿ, ವಿಜಯೇಂದ್ರ ಪಾದಯಾತ್ರೆ ಮಾಡಲಿದ್ದಾರೆ. ರಾಜ್ಯದಲ್ಲೂ ಸಹ ಇವತ್ತು ಆಡಳಿತದ ಬಗ್ಗೆ ಬೇಸತ್ತಿದ್ದಾರೆ. ಇವತ್ತಿನ ಆಡಳಿತ ಬದಲಾವಣೆಗೆ ಹಾತೊರೆಯುತ್ತಿದ್ದಾರೆ. ವಿಜಯೇಂದ್ರ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡಿ, ಅಧಿಕಾರಕ್ಕೆ ತರಲು ಮುಂದಾಗಿದ್ದಾರೆ. ಗಣೇಶನ ಆಶೀರ್ವಾದದಿಂದ ಜನರಿಗೆ ಒಳ್ಳೆಯದು ಮಾಡಲೆಂದು ಪ್ರಾರ್ಥನೆ ಮಾಡಿದ್ದೇನೆ ಎಂದು ಹೇಳಿದರು.