ಕೋಲಾರ, ಅ.29: ದೆಹಲಿಯಲ್ಲಿ ನಡೆಯುತ್ತಿರುವ ಮುಖ್ಯ ಚುನಾವಣಾ ಆಯುಕ್ತರ ವಿರುದ್ಧದ ಪ್ರತಿಭಟನೆ ಮತ್ತು ದೇಶದಲ್ಲಿ ನಡೆಯುತ್ತಿರುವ ಸಿಜೆಪಿ ಹೋರಾಟ ಕಾಂಗ್ರೆಸ್ ಕುತಂತ್ರದ ಭಾಗವಾಗಿದ್ದು ಜೆನ್‌ಜಿಗಳಿಗೆ ಜಾಗೃತಿ ಮೂಡಿಸುತ್ತಿದ್ದೇವೆ ಎಂಬ ಸೋಗಿನಲ್ಲಿ ಪ್ರಧಾನಿ ಮೋದಿ ಅವರ ಮೇಲೆ ಎತ್ತಿಕಟ್ಟಲಾಗುತ್ತಿದೆ ಎಂದು ಮಾಜಿ ಸಂಸದ ಪ್ರತಾಪಸಿಂಹ (Pratap Simha) ಆರೋಪಿಸಿದರು. ಇಲ್ಲಿನ ಕನ್ನಡ ಭವನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಕೇಂದ್ರ ಸಚಿವರ ನಿರ್ಲಕ್ಷ್ಯ ಮತ್ತು ಕೈವಾಡ ಇಲ್ಲವಾದರೂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿದ್ದಾರೆ. ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯಲ್ಲಿ ಯಾವುದೇ ಲೋಪವಿಲ್ಲದಿದ್ದರೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಎಂದು ಹೋರಾಟ ಮಾಡುವುದು ಸರಿಯಲ್ಲ. ಇದರ ಹಿಂದೆ ಕಾಂಗ್ರೆಸ್ ಕೈವಾಡ ಎದ್ದು ಕಾಣುತ್ತಿದೆ. ಕಾಂಗ್ರೆಸ್ ಮತ್ತು ಸಿಜೆಪಿ ಒಂದೇ ಎಂಬ ಸಚಿವ ಪ್ರಿಯಾಂಕ್‌ಖರ್ಗೆ ಅವರ ಹೇಳಿಕೆ ಇದನ್ನು ಸಾರ್ವಜನಿಕವಾಗಿ ಪುಷ್ಟೀಕರಿಸಿದೆ ಎಂದು ಆರೋಪಿಸಿದರು.
21 ವರ್ಷದಿಂದ ಎಸ್‌ಐಆರ್ ನಡೆಯದ ಕಾರಣ ಮೃತಪಟ್ಟ, ವಲಸೆ ಹೋದ ಮತ್ತು ಹಲವಾರು ಕಡೆ ಮತದಾನದ ಹಕ್ಕು ಹೊಂದಿದ್ದ ವ್ಯಕ್ತಿಗಳ ಮಾಹಿತಿ ಇರಲಿಲ್ಲ. ಎಸ್‌ಐಆರ್‌ನಿಂದ ಎಲ್ಲವೂ ಶುದ್ಧೀಕರಣವಾಗಿದ್ದು ಯಾರದ್ದಾದರೂ ಹೆಸರು ತಪ್ಪಿ ಹೋಗಿದ್ದರೆ ಮತಗಟ್ಟೆ ಮಟ್ಟದ ಅಧಿಕಾರಿಗೆ ದೂರು ನೀಡಬಹುದು. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಿಂದ ಇಳಿದು ಎನ್‌ಡಿಎ ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ ಎಂದು ಮಾಜಿ ಸಂಸದ ಪ್ರತಾಪ್‌ಸಿಂಹ ವಿಶ್ವಾಸ ವ್ಯಕ್ತಪಡಿಸಿದರು.
ಜನರ ವಿಶ್ವಾಸವನ್ನು ಕಾಂಗ್ರೆಸ್ ಸರ್ಕಾರ ಕಳೆದುಕೊಂಡಿದ್ದು ಬ್ಯಾಲೆಟ್ ಪೇಪರ್ ಮೂಲಕ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಂದೂ ಸ್ಥಾನ ಉಳಿಸಿಕೊಳ್ಳಲು ಆಗಿಲ್ಲ. 4 ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಜಯಗಳಿಸಿದ್ದು ಇದು ಮುಂದಿನ ಎಲ್ಲ ಎಲೆಕ್ಷನ್‌ಗಳಿಗೆ ದಿಕ್ಸೂಚಿ ಆಗಿದೆ ಎಂದು ಹೇಳಿದರು.
ಮಾತು ಜಾಸ್ತಿ, ಕೆಲಸ ನಾಸ್ತಿ; ಪ್ರಿಯಾಂಕ್ ಖರ್ಗೆ ನಿಂದಕ ಮಂತ್ರಿ ಎಂದ ಎಚ್‌ಡಿಕೆ
ಈ ಸಂದರ್ಭದಲ್ಲಿ ಮಾಜಿ ಸಚಿವ ವರ್ತೂರ್ ಪ್ರಕಾಶ್, ಮಾಜಿ ಸಂಸದ ಮುನಿಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ, ಮಾಜಿ ಶಾಸಕ ಸಂಪಂಗಿ , ವೆಂಕಟಮುನಿಯಪ್ಪ, ರಾಜ್ಯ ಬಿಜೆಪಿ ಮುಖಂಡ ಗೋಪಾಲಯ್ಯ, ಮುಖಂಡರಾದ ರಾಜೇಶ್‌ಸಿಂಗ್, ಕೆಂಬೋಡಿ ನಾರಾಯಣಸ್ವಾಮಿ ಇದ್ದರು.