ಕೋಲಾರ, ಜೂ.13: ದೇಶವನ್ನು ಅತೀ ದೀರ್ಘಕಾಲ ಆಳಿದ ಪ್ರಧಾನಿಗಳ ವಿಷಯದಲ್ಲಿ ಕಾಂಗ್ರೆಸ್‍ನವರಿಗೆ ಸ್ಪಷ್ಟತೆ ಇಲ್ಲ. ಪ್ರಧಾನಿ ಮೋದಿ ಅವರು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ಚುನಾವಣೆಯಲ್ಲಿ ಸತತವಾಗಿ ಸ್ಪರ್ಧೆ ಮಾಡಿ ಗೆಲುವು ಸಾಧಿಸಿ ದೀರ್ಘಕಾಲ ಆಳಿದ ದಾಖಲೆ ಹೊಂದಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಾಂಗ್ರೆಸ್‍ನವರು ಗೌರವಿಸುವುದನ್ನು ಕಲಿಯಬೇಕು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ.
ಕೋಲಾರದಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅಥವಾ ಮನಮೋಹನ್ ಸಿಂಗ್ ಅವರಿಗಿಂತ ಹೆಚ್ಚು ದಿನ ಮೋದಿ ಅವರು ಆಡಳಿತ ನಡೆಸಿದ ದಾಖಲೆ ಹೊಂದಿದ್ದಾರೆ. ಇದನ್ನು ತಿಳಿಯದೇ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಸೇರಿದಂತೆ ಹಲವರು ಟೀಕೆ ಮಾಡುತ್ತಿದ್ದಾರೆ. ಈ ವಿಷಯದಲ್ಲಿ ಕಾಂಗ್ರೆಸ್‍ನವರು ಅವಿವೇಕತನ ಪ್ರದರ್ಶನ ಮಾಡಬೇಡಿ ಎಂದರು.
ನೆಹರು ಅವರು ಮೊದಲ ಪ್ರಧಾನಿ ನಿಜ. ಆದರೆ ಅವರು ಪ್ರಧಾನಿ ಆದಾಗ ಪ್ರಜಾಪ್ರಭುತ್ವ ಇರಲಿಲ್ಲ. ಸಂವಿಧಾನ ಇರಲಿಲ್ಲ. ಅಲ್ಲದೇ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರಲಿಲ್ಲ. ಅವರನ್ನು ಬ್ರಿಟಿಷ್ ಸರ್ಕಾರ ನೇಮಕ ಮಾಡಿತ್ತು. ಅವರ ಆಯ್ಕೆಗೆ ಒಮ್ಮತದ ತೀರ್ಮಾನ ಇರಲಿಲ್ಲ. ಕೆಲವರ ಆಶೀರ್ವಾದದಿಂದ, ಬ್ರಿಟಿಷರ ಪ್ರೀತಿಯಿಂದ ನೆಹರು ಪ್ರಧಾನಿ ಆದರು. ಅದು ಕಾಂಗ್ರೆಸ್ ಸರ್ಕಾರ ಸಹ ಆಗಿರಲಿಲ್ಲ. ಸ್ವಾತಂತ್ರ್ಯ ಹೋರಾಟ ಮಾಡಿದ ಮುತ್ಸದ್ದಿಗಳ ತಾತ್ಕಾಲಿಕ ವ್ಯವಸ್ಥೆ ಆಗಿತ್ತು. ಆದರೆ ಇದನ್ನೆಲ್ಲ ತಿಳಿಯದೇ ಕಾಂಗ್ರೆಸ್‍ನವರು ಆಡಳಿತ ದಾಖಲೆ ಸಂಬಂಧ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
ಇಂದಿರಾ ಗಾಂಧಿ ಅವರು ದೀರ್ಘಕಾಲ ಆಡಳಿತ ನಡೆಸಿದರು. ಆದರೆ ಅವರು ತಮ್ಮ ಆಡಳಿತದ ಅವಧಿಯಲ್ಲಿ ಎರೂಡೂವರೆ ವರ್ಷ ಸಂವಿಧಾನ ತಿರುಚಿ, ದ್ರೋಹ ಮಾಡಿ. ತುರ್ತು ಪರಿಸ್ಥಿತಿ ಹೇರಿ, ವಿರೋಧಪಕ್ಷದ ನಾಯಕರನ್ನು ಜೈಲಿನಲ್ಲಿಟ್ಟು ಅಧಿಕಾರ ಮಾಡಿದ್ದರು. ಅದು ಪ್ರಜಾಪ್ರಭುತ್ವ ಅಲ್ಲ. ಆದ್ದರಿಂದ ಅವರ ಆಡಳಿತವನ್ನು ಲೆಕ್ಕಕ್ಕೆ ತೆಗೆದುಕೊಳ್ಳಲು ಬರಲ್ಲ. ದೇಶಕ್ಕೆ ಕಳಂಕ ತರುವ ಕೆಲಸ ಮಾಡಿದ್ದು ನೆಹರು ಮತ್ತು ಇಂದಿರಾ ಗಾಂಧಿ ಎಂದು ಟೀಕಿಸಿದರು. ನರೇಂದ್ರ ಮೋದಿ ಅವರು ಸಂವಿಧಾನನಾತ್ಮಕವಾಗಿ ಚುನಾವಣೆಯಲ್ಲಿ ಗೆದ್ದು ಅತ್ಯಂತ ಹೆಚ್ಚು ದಿನ ಆಳಿದ್ದಾರೆ. ಇದನ್ನು ಪ್ರಶ್ನೆ ಮಾಡಲು ಕಾಂಗ್ರೆಸ್‍ನವರಿಗೆ ನೈತಿಕತೆ ಇಲ್ಲ ಎಂದು ಹೇಳಿದರು.
ಯುದ್ಧದಿಂದಾಗಿ ಗ್ಯಾಸ್ ಸಮಸ್ಯೆ
ವಿಶ್ವಮಟ್ಟದಲ್ಲಿ ಯುದ್ಧದಿಂದಾಗಿ ಅಡುಗೆ ಅನಿಲ ಸಮಸ್ಯೆ ಆಗುತ್ತಿದೆ. ಮನಮೋಹನ್ ಸಿಂಗ್ ಅವರ ಅಧಿಕಾರದಲ್ಲಿ ಆರು ಸಿಲಿಂಡರ್ ಮಾತ್ರ ಕೊಡಲು ತೀರ್ಮಾನ ಆಗಿತ್ತು. ಅದನ್ನು ಅವರದೇ ಪಕ್ಷದ ರಾಹುಲ್ ಗಾಂಧಿ ಸಹಿಸಿಕೊಳ್ಳಲು ಆಗದೆ ಸರ್ಕಾರದ ಆದೇಶ ಪ್ರತಿ ಹರಿದು ಬಿಸಾಕಿದ್ದರು. ಯುದ್ಧದ ವಾತಾವರಣ ತಿಳಿಯಾದ ನಂತರ ಅಡುಗೆ ಅನಿಲ ಸಮಸ್ಯೆ ಬಗೆಹರಿಯಲಿದೆ ಎಂದರು.
ಆಗಿನ ಕಾಂಗ್ರೆಸ್ ಆಡಳಿತಕ್ಕೂ ಪ್ರಧಾನಿ ಮೋದಿ ಅವರ ಆಡಳಿತಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಆಗಿನ ಸಂಕಷ್ಟಗಳು ಈಗ ನಿವಾರಣೆ ಆಗ್ತಾ ಇದೆ. ಮೋದಿ ಅವರದು ಭ್ರಷ್ಟಾಚಾರ ರಹಿತ ಆಡಳಿತ. ಅವರ ನಾಯಕತ್ವವನ್ನು ಇಡೀ ದೇಶದ ಜನರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್‍ನ ಇಂದಿರಾ, ಮನಮೋಹನ್ ಸಿಂಗ್ ಅವರ ಆಡಳಿತದ ಅವಧಿಯಲ್ಲಿ ಲಕ್ಷಾಂತರ ಕೋಟಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದರು.
ಅಧಿಕಾರದ ಕಪ್ಪು ದಿನಗಳು
ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಅನೇಕ ಕೊರತೆಗಳಿದ್ದವು. ಜನರಿಗೆ ರಾಜಕೀಯ ಎಂದರೆ ಏನೂ ಎಂಬುದು ತಿಳಿಯುತ್ತಿರಲಿಲ್ಲ. 2000 ರದವರೆಗೆ ಅಧಿಕಾರದ ಕಪ್ಪು ದಿನಗಳಾಗಿದ್ದವು. ಇಂದು ಜನರಲ್ಲಿ ರಾಜಕೀಯ, ಸಾಮಾಜಿಕ ಪ್ರಜ್ಞೆ ಹೆಚ್ಚಿದೆ. ಮೋದಿ ಅವರು ಪಾರದರ್ಶಕ ಆಡಳಿತ ನೀಡುತ್ತಿದ್ದಾರೆ. ಈಗ ದೇಶದಲ್ಲಿ ನಡೆಯುವ ಎಲ್ಲ ವ್ಯವಹಾರ ಎಲ್ಲರಿಗೂ ತಿಳಿಯುತ್ತೆ. ಆದರೆ ಭ್ರಷ್ಟಾಚಾರ ಮತ್ತು ದೋಚುವ ವ್ಯವಸ್ಥೆಗೆ ಕಾಂಗ್ರೆಸ್ ಕಾರಣವಾಗಿತ್ತು. ಭ್ರಷ್ಟಾಚಾರ ಕೊಟ್ಟಿದ್ದೇ ಕಾಂಗ್ರೆಸ್. ಆರ್ಥಿಕತೆಯಲ್ಲಿ 11ನೇ ಸ್ಥಾನದಲ್ಲಿದ್ದ ದೇಶ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದೆ. ಮೋದಿ ಅವರ ಆಡಳಿತದಲ್ಲಿ ರಸ್ತೆ, ರೈಲ್ವೆ ಸುಧಾರಣೆ ಆಗಿದೆ ಎಂದರು.
ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಅನುದಾನ ತೆಲಂಗಾಣಕ್ಕೆ ಸಾಗಿಸಿದ ಕಾಂಗ್ರೆಸ್; ಏನಿದು ಗಂಭೀರ ಆರೋಪ?
ಇನ್ನೂ ಎರಡು ಅವಧಿಗೆ ಮೋದಿ ಅವರೇ ಪ್ರಧಾನಿ
ಇನ್ನೂ ಎರಡು ಅವಧಿಗೆ ಮೋದಿ ಅವರೇ ಪ್ರಧಾನಿ ಆಗಿ ಮುಂದುವರಿಯಲಿದ್ದಾರೆ. ಅವರಿಗೆ ಶಕ್ತಿ ಕೊಡಲಿ ಎಂದು ನಾವೆಲ್ಲ ಪ್ರಾರ್ಥನೆ ಮಾಡುತ್ತಿದ್ದೇವೆ. 2047ಕ್ಕೆ ಭಾರತ ವಿಶ್ವದ ನಂಬರ್ ಒನ್ ಆರ್ಥಿಕತೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕಾಂಗ್ರೆಸ್ ದೇಶದಲ್ಲಿ ಮಾಡಿದ್ದ ತಪ್ಪುಗಳನ್ನು ಸರಿಪಡಿಸಲು ಇಷ್ಟು ಅವಧಿ ಹಿಡಿಯಿತು. ಬಿಜೆಪಿ ಆಗಲೂ ಅಧಿಕಾರದಲ್ಲಿ ಇದ್ದಿದ್ದರೆ ಅಭಿವೃದ್ಧಿಯ ವೇಗವೂ ಇನ್ನೂ ಹೆಚ್ಚಿರುತಿತ್ತು. ದೇಶದ ಅಭಿವೃದ್ಧಿಯನ್ನು ಹಳ್ಳಕ್ಕೆ ಕಾಂಗ್ರೆಸ್ ಹಾಕಿತ್ತು, ಅದನ್ನು ಮೇಲೆ ತರಲು ಬಿಜೆಪಿಗೆ ಇಷ್ಟು ವರ್ಷವಾಯಿತು ಎಂದು ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.