ಕೋಲಾರ: ಕ್ಷೇತ್ರ ಪುನರ್ವಿಂಗಡಣೆ ತಿದ್ದುಪಡಿ ಮಸೂದೆಯನ್ನು (Delimitation bill) ನವೆಂಬರ್ 30ರಿಂದ ಆರಂಭವಾಗುವ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಮಂಡಿಸಲು ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ, ಇದಕ್ಕೆ ಕಾಂಗ್ರೆಸ್ ಸೇರಿ ವಿರೋಧ ಪಕ್ಷಗಳಿಂದ ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಈ ನಡುವೆ ಕ್ಷೇತ್ರ ಪುನರ್ವಿಂಗಡಣೆ ತಿದ್ದುಪಡಿ ಮಸೂದೆಯನ್ನು ಕೋಲಾರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರು ಸ್ವಾಗತಿಸಿರುವುದು ಕಂಡುಬಂದಿದೆ.
ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಈ ಕ್ಷೇತ್ರ ಪುನರ್ವಿಂಗಡಣೆ ಮಸೂದೆಯನ್ನು ನಾನು ಸ್ವಾಗತ ಮಾಡುತ್ತೇನೆ. ಇದರಿಂದ ಯಾರಿಗೂ ಲಾಭ ಆಗಲ್ಲ, ಜನಸಂಖ್ಯೆ ಹೆಚ್ಚಾಗಿರುವ ಭಾರತದಂತಹ ದೇಶದಲ್ಲಿ ಆಡಳಿತ ದೃಷ್ಟಿಯಿಂದ, ಕ್ಷೇತ್ರದ ನಿಭಾಯಿಸಲು ಈ ಬಿಲ್ನಿಂದ ಒಳ್ಳೆಯದೇ ಆಗುತ್ತದೆ. ಹೀಗಾಗಿ ಈ ಮಸೂದೆಯನ್ನು ನಾನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.
ಸಿಂಗಾಪುರ, ಇಂಡೋನೇಷ್ಯಾ, ಮಲೇಷ್ಯಾ ಮತ್ತಿತರ ದೇಶಗಳಲ್ಲಿ ಸಂಸದರ ಕ್ಷೇತ್ರದಲ್ಲಿ ಗರಿಷ್ಠ 60 ಸಾವಿರ ಜನಸಂಖ್ಯೆ, ಶಾಸಕರ ಕ್ಷೇತ್ರಕ್ಕೆ 7ರಿಂದ 8 ಸಾವಿರ ಜನಸಂಖ್ಯೆ ಇರುತ್ತದೆ. ಆದರೆಮ ಇಲ್ಲಿ ಮುನಿಸಿಪಾಲಿಟಿ ಮೆಂಬರ್ ವ್ಯಾಪ್ತಿಯಲ್ಲೇ 7-8 ಸಾವಿರ ಜನ ಇರುತ್ತಾರೆ. ಹೀಗಾಗಿ ಪ್ರತಿ ಶಾಸಕರ ವ್ಯಾಪ್ತಿಯಲ್ಲಿ ಒಂದು ಲಕ್ಷದಿಂದ ಒಂದೂವರೆ ಲಕ್ಷ ಮತದಾರರು ಇದ್ದರೆ, ಜನಪ್ರತಿನಿಧಿಗಳಿಗೆ ಜನರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡುವುದು ಹೆಚ್ಚು ಸುಲಭವಾಗುತ್ತದೆ. 800 ಅಲ್ಲ 900 ಲೋಕಸಭಾ ಕ್ಷೇತ್ರ ಮಾಡಿದ್ರೂ ಒಳ್ಳೇದೇ ಆಗುತ್ತೆ, ಇದರಿಂದ ಯಾರಿಗೂ ಲಾಭ ಆಗಲ್ಲ. ಹೊಸ ಜಾಗ ಅಥವಾ ಹೊಸ ಮತದಾರರನ್ನು ಸೇರಿಸಲು ಆಗುತ್ತಾ?, ಇರುವ ಕ್ಷೇತ್ರಗಳನ್ನೇ ವಿಂಗಡಣೆ ಮಾಡುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
Delimitation Bill 2026: ಕ್ಷೇತ್ರ ಮರುವಿಂಗಡಣೆ ಮಸೂದೆಗೆ 3 ವಿರೋಧ ಪಕ್ಷಗಳು ಸೇರಿ ದಕ್ಷಿಣದ 8 ಪಕ್ಷಗಳ ಬೆಂಬಲ!
ತಿರುಪ್ಪರಂಕುಂದ್ರಂ ಬೆಟ್ಟದ ಮೇಲೆ ದೀಪ ಬೆಳಗಿಸಿದ್ದಕ್ಕೆ ಸಂತಸ
ತಮಿಳುನಾಡಿನ ತಿರುಪ್ಪರಂಕುಂದ್ರಂ ಬೆಟ್ಟದ ಕಾರ್ತಿಕ ದೀಪ ವಿವಾದದ ಬಗ್ಗೆಯೂ ಪ್ರತಿಕ್ರಿಯಿಸಿರುವ ಶಾಸಕ ಕೊತ್ತೂರು ಮಂಜುನಾಥ್, ಯಾವುದೇ ಸಮುದಾಯದ ಸಿದ್ಧಾಂತ ಅಥವಾ ಪದ್ಧತಿಯನ್ನು ಹಾಳು ಮಾಡಬಾರದು. ದೀಪ ಬೆಳಗಿಸುವುದನ್ನು ತಡೆಯಲು ಹಲವರು ಪ್ರಯತ್ನ ನಡೆಸಿದರೂ, ಸುಪ್ರೀಂಕೋರ್ಟ್ ದೇಗುಲ ಸಮಿತಿಯನ್ನೇ ಅಮಾನತು ಮಾಡಿತು. ಸಿಆರ್ಪಿಎಫ್ ಪಡೆ ದೀಪ ಬೆಳಗಿಸಲು ಬಂದಾಗ ಜನರು ಬಣ್ಣಬಣ್ಣದ ಹೂಗಳಿಂದ ಹೂಮಳೆ ಸುರಿಸಿ ಭವ್ಯ ಸ್ವಾಗತ ನೀಡಿದರು ಹಾಗೂ ದೀಪ ಬೆಳಗಿದ ಕ್ಷಣ ಕಂಡು ಭಾವುಕರಾದರು. ಒಂದು ಸಮುದಾಯದ ಪದ್ಧತಿ ಹಾಳು ಮಾಡಲು ಯತ್ನಿಸಿದಾಗ ದೇವರ ರೂಪದಲ್ಲಿ ಸುಪ್ರೀಂಕೋರ್ಟ್ ಬಂದು ಅದನ್ನು ತಡೆದಿದೆ ಎಂದಿರುವ ಅವರು, ಕಳೆದ 80 ವರ್ಷಗಳಿಂದ ಬೆಳಗಿಸದ ದೀಪವನ್ನು ಇದೀಗ ಬೆಳಗಿಸಿರುವುದರಿಂದ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ತಿಳಿಸಿದ್ದಾರೆ.