ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Kolar News: ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಗೆ ಭರ್ಜರಿ ಗೆಲುವು, ಕಾಂಗ್ರೆಸ್‌ ಶೂನ್ಯ ಸಾಧನೆ

Kolar News: ಅರಹಳ್ಳಿ ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಎಲ್ಲ 12 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು ಕಾಂಗ್ರೆಸ್ ಖಾತೆಯನ್ನೂ ತೆರೆಯದೆ ಹೀನಾಯ ಸೋಲನ್ನು ಕಂಡಿದೆ. ಈ ಕುರಿತ ವಿವರ ಇಲ್ಲಿದೆ.

ಅರಹಳ್ಳಿ ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಗೆಲುವು.

ಕೋಲಾರ, ಮಾ.28: ಅರಹಳ್ಳಿ ಸೊಸೈಟಿ ನಿರ್ದೇಶಕರ ಚುನಾವಣೆಯಲ್ಲಿ (Arahalli Society election) ಬಿಜೆಪಿ-ಜೆಡಿಎಸ್ ಮೈತ್ರಿ ಕೂಟ ಎಲ್ಲ 12 ಸ್ಥಾನಗಳನ್ನು ಗೆಲ್ಲುವ ಮೂಲಕ ದಾಖಲೆ ನಿರ್ಮಾಣ ಮಾಡಿದ್ದು, ಕಾಂಗ್ರೆಸ್ ಖಾತೆಯನ್ನೂ ತೆರೆಯದೆ ಹೀನಾಯ ಸೋಲನ್ನು ಕಂಡಿದೆ. ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡು ಗೆಲುವಿನ ಉಮೇದಿಯಲ್ಲಿದ್ದ ಕೋಲಾರ (Kolar News) ಶಾಸಕ ಕೊತ್ತೂರು ಮಂಜುನಾಥ್ ಮತ್ತು ಎಂಎಲ್‌ಸಿ ಅನಿಲ್ ಕುಮಾರ್ ಅವರ ತಂಡಕ್ಕೆ ಭಾರೀ ಹಿನ್ನಡೆ ಆಗಿದೆ.

ಮೈತ್ರಿಕೂಟದ ಟಿ. ರಾಮಾಂಜನೇಯ (135) ಮತ, ಬಿ. ಈರಪ್ಪ (129), ಪಿ. ನೂರುಲ್ಲಾ (129), ಕೆ.ವಿ. ಅಶೋಕ್ ಕುಮಾರ್(127), ಎಂ. ಶ್ರೀನಿವಾಸಯ್ಯ (127), ವಿ.ಕೃಷ್ಣಪ್ಪ (111), ಎಚ್.ಆರ್. ಸಂಪತ್‌ ಕುಮಾರ್(124), ಎಂ. ವೆಂಕಟೇಶಪ್ಪ (141), ಡಿ.ಎನ್.ಲಕ್ಷ್ಮಿಪತಿ (136), ನೀಲಮ್ಮ (130), ಎನ್. ಉಮಾದೇವಿ (126) ಹಾಗೂ ಆರ್. ಮಂಜುನಾಥ್ 190 ಮತಗಳನ್ನು ಗಳಿಸುವ ಮೂಲಕ ಜಯಭೇರಿ ಬಾರಿಸಿದರು.

ಕಾಂಗ್ರೆಸ್‌ನ ಹಾಗೂ ಇತರೆ ಮೂಲದಿಂದ ಸ್ಪರ್ಧೆ ಮಾಡಿದ್ದ ಅರುಣೇಶ್‌ ಬಾಬು (5), ಜಿ. ಗಿರೀಶ್ ಬಾಬು (55), ಆರ್.ಸಿ. ಮಹೇಶ್ (60), ಮುನಿಸ್ವಾಮಿ ರೆಡ್ಡಿ (80), ಎನ್.ರಾಮಕೃಷ್ಣಪ್ಪ (5), ಲಿಂಗೇಗೌಡ (77), ವಿ. ಹರೀಶ್ (59), ಎಂ.ಜಯರಾಂ (88), ಕೆ.ವಿ. ಶ್ರೀನಿವಾಸ ಯಾದವ್ (3), ಟಿ. ಕರುಣಾಕರ್ (78), ಎಸ್. ದೇವರಾಜ್ (75), ನಾರಾಯಣಸ್ವಾಮಿ (78), ಲಕ್ಷ್ಮಿದೇವಮ್ಮ(68), ವೆಂಕಟಲಕ್ಷ್ಮಮ್ಮ (61), ಡಿ.ಆರ್. ಚಂದ್ರಶೇಖರ್ (3) ಮತ್ತು ವಿ. ಶ್ರೀನಿವಾಸ್ 101 ಮತಗಳನ್ನು ಪಡೆಯುವ ಮೂಲಕ ಸೋಲನುಭವಿಸಿದರು.

ಜೆಡಿಎಸ್‌ ಮುಖಂಡ ಸಿಎಂಆರ್ ಶ್ರೀನಾಥ್ ಮಾತನಾಡಿ, ಇದು ರೈತರ ಗೆಲುವಾಗಿದ್ದು ಮುಂದಿನ ಗ್ರಾಮ ಪಂಚಾಯತಿ, ತಾಲೂಕು-ಜಿಲ್ಲಾ ಪಂಚಾಯ್ತಿ ಹಾಗೂ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಆಗಿದೆ. ಕಾರ್ಯಕರ್ತರು ಮುಂದಿನ ಚುನಾವಣೆಗಳಿಗೆ ಇಂದಿನಿಂದಲೇ ಹಳ್ಳಿಗಳಲ್ಲಿ ಸಂಘಟನೆ ಮಾಡುವ ಮೂಲಕ ಎನ್‌ಡಿಎ ಗೆಲುವಿಗೆ ಶ್ರಮಿಸಬೇಕಿದ್ದು, ಟಿಕೇಟ್ ವಿಚಾರದಲ್ಲಿ ಗೊಂದಲ ಮಾಡಿಕೊಳ್ಳದೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕು ಎಂದು ತಿಳಿಸಿದರು.

ಮಾಜಿ ಸಚಿವ ವರ್ತೂರ್ ಪ್ರಕಾಶ್ ಮಾತನಾಡಿ, ಶ್ರೀನಾಥ್ ಮತ್ತು ನಾನು ಒಂದಾದರೆ ಕಾಂಗ್ರೆಸ್‌ಗೆ ಉಳಿಗಾಲವಿಲ್ಲ. ಅವರಿಗೆ ಡಿಪಾಸಿಟ್ ಸಹಾ ಬರಲ್ಲ. ಅರಹಳ್ಳಿ ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮುಖಭಂಗವಾಗಿದೆ ಎಂದು ಟೀಕಿಸಿದರು.

ಕೋಲಾರ ಪಿಡಿಒ ಸಂಘದ ಚುನಾವಣೆ: ಜಿಲ್ಲಾಧ್ಯಕ್ಷ ಮಹೇಶ್ ಕುಮಾರ್, ಉಪಾಧ್ಯಕ್ಷೆ ಮಂಗಳಾಂಬ

ಬಿಜೆಪಿ ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಮಾತನಾಡಿ, ಕೋಲಾರ ಕ್ಷೇತ್ರದಲ್ಲಿ ಅಭಿವೃದ್ಧಿ ಶೂನ್ಯವಾಗಿದ್ದು ಮುಂದಿನ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿಗೆ ಗೆಲುವು ಖಚಿತ. ಜೋಡೆತ್ತುಗಳಾದ ಸಿಎಂಆರ್ ಶ್ರೀನಾಥ್ ಮತ್ತು ವರ್ತೂರ್ ಪ್ರಕಾಶ್ ಶ್ರಮದಿಂದಾಗಿ ಅರಹಳ್ಳಿ ಸೊಸೈಟಿ ಗೆಲುವು ಸಿಕ್ಕಿದ್ದು ಇದನ್ನು ಮತ್ತಷ್ಟು ಬೆಳೆಸಿಕೊಂಡು ಹೋಗಬೇಕಾಗಿದೆ ಎಂದು ತಿಳಿಸಿದರು.