ಕೋಲಾರ, ಮಾ.3: ಮನುಷ್ಯನ ಶ್ರೇಷ್ಠತೆಯ ವ್ಯಸನಕ್ಕೆ ತಮ್ಮ ಅನುಭಾವದ ಮೂಲಕ ಮದ್ದು ಅರೆದವರು ಕೈವಾರ ತಾತಯ್ಯ ಅವರು, ಅಧ್ಯಾತ್ಮ ಅಂದರೆ ಚರ್ಮಶುದ್ಧಿ ಅಲ್ಲ, ಅಂತರಂಗದ ಶುದ್ಧಿ ಎಂದು ಬದುಕಿ ತೋರಿಸಿದವರು ಎಂದು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್ (KV Prabhakar) ಅಭಿಪ್ರಾಯಪಟ್ಟರು. ಕೈವಾರ ತಾತಯ್ಯ ಅವರ 300ನೇ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಜಾತಿ, ಧರ್ಮ, ಲಿಂಗ, ಹಣ, ಅಂತಸ್ತು ಎಲ್ಲದರ ಶ್ರೇಷ್ಠತೆಯ ವ್ಯಸನವನ್ನು ನಿವಾಳಿಸಿದ ಕೈವಾರದ ಶ್ರೀ ಯೋಗಿ ನಾರೇಯಣ ಯತೀಂದ್ರರು "ತಾತಯ್ಯ" ಅಂತಲೇ ಜನಮಾನಸದಲ್ಲಿ ನೆಲೆಯಾಗಿದ್ದಾರೆ. ಅಧ್ಯಾತ್ಮ ಎಂದರೆ ಬಹಳ ಕಠಿಣ, ಎಲ್ಲರ ಪಾಲಿನ ಪ್ರಸಾದ ಅಲ್ಲ ಎನ್ನುವ ಶ್ರೇಷ್ಠತೆಯನ್ನು ಅಳಿಸಿ, ಕಠಿಣವಾದ ಆಧ್ಯಾತ್ಮದ ಸಾರವನ್ನು ಸರಳ ಭಾಷೆಯಲ್ಲಿ ಸಮಾಜದ ಕಟ್ಟ ಕಡೆಯವರಿಗೂ ತಲುಪಿಸಿದ ಸಂತ ಶ್ರೇಷ್ಠರು ತಾತಯ್ಯ ಎಂದು ಹೇಳಿದರು.
ಕರ್ನಾಟಕದ ಶ್ರೇಷ್ಠ ಸಂತರು, ದಾರ್ಶನಿಕರು ಮತ್ತು ಸಮಾಜ ಸುಧಾರಕರಲ್ಲಿ ಒಬ್ಬರಾದ ತಾತಯ್ಯ ತೆಲುಗು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ತಮ್ಮ ಅನುಭಾವವನ್ನೇ ತತ್ವಪದಗಳನ್ನಾಗಿ ರಚಿಸಿ ಹಾಡಿದರು. ಜನಸಾಮಾನ್ಯರಿಗೆ ಅಧ್ಯಾತ್ಮದ ದಾರಿಯನ್ನು ತೋರಿಸಿದ ಸೂಫಿಗಳು, ಸಂತರ ಪರಂಪರೆಯನ್ನು ಮುಂದುವರಿಸಿದರು. ಅಧ್ಯಾತ್ಮ ಅಂದರೆ ಚರ್ಮ ಶುದ್ಧಿಯ ಸಂಪ್ರದಾಯವಲ್ಲ, ಅಂತರಂಗ ಶುದ್ಧಿಯ ಹಾದಿ ಎನ್ನುವುದನ್ನು ಬದುಕಿ ತೋರಿಸಿದರು ಎಂದು ತಿಳಿಸಿದರು.
ಮನುಷ್ಯ ನಿರ್ಮಿಸಿದ ಎಲ್ಲವೂ ಕಡೆ ಗಾಲಕ್ಕೆ, ಕೇಡುಗಾಲಕ್ಕೆ ಜಾರುವ ನೈತಿಕ ಅವನತಿಯನ್ನು ತಾತಯ್ಯ 300 ವರ್ಷಗಳ ಹಿಂದೆಯೇ ಹಾಡಿ ಮನುಕುಲವನ್ನು ಎಚ್ಚರಿಸಿದರು. ಈ ಕಾರಣಕ್ಕೇ ತಾತಯ್ಯ ಬರೆದಿರುವ 'ಕಾಲಜ್ಞಾನ' ಇಂದಿಗೂ ಪ್ರಸ್ತುತವಾಗಿದೆ ಎಂದರು. ಮಾನವೀಯತೆ ಮತ್ತು ಭಕ್ತಿಯೇ ಮುಕ್ತಿಗೆ ದಾರಿ ಎಂದು ಬೋಧಿಸಿ, ತಾತಯ್ಯ ಬರೆದ 'ಕಾಲಜ್ಞಾನ' ಕೇವಲ ಭವಿಷ್ಯವಾಣಿಯಲ್ಲ, ಅದು ಆಧ್ಯಾತ್ಮ ಮತ್ತು ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಒಂದು ದರ್ಶನ ಎಂದು ಹೇಳಿದರು.
ಇವತ್ತಿನ ಮನುಷ್ಯನ ನೈತಿಕ ಅವನತಿಯನ್ನು, ನಡವಳಿಕೆ ಹೇಗೆ ಬದಲಾಗುತ್ತದೆ ಎಂಬುದನ್ನು 250 ವರ್ಷಗಳ ಹಿಂದೆಯೇ ವಿವರಿಸಿದ್ದಾರೆ. ಶ್ರೇಷ್ಠತೆಯ ವ್ಯಸನ ಮತ್ತು ದ್ವೇಷ, ಸಣ್ಣತನಗಳಿಂದ ಮನುಷ್ಯ ಧರ್ಮವನ್ನು ಬಿಟ್ಟು ಅಧರ್ಮದ ಹಾದಿ ಹಿಡಿಯುತ್ತಾನೆ. ಸತ್ಯಕ್ಕೆ ಬೆಲೆ ಇಲ್ಲದಂತಾಗುತ್ತದೆ. ತಂದೆ-ತಾಯಿ ಮತ್ತು ಮಕ್ಕಳ ನಡುವಿನ ಗೌರವ ಕಡಿಮೆಯಾಗುತ್ತದೆ. ಗುರು-ಶಿಷ್ಯರ ಸಂಬಂಧ ಕೇವಲ ವ್ಯವಹಾರವಾಗುತ್ತದೆ. ಮನುಷ್ಯ ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಾಗುತ್ತಾನೆ, ಹಸಿವು ಮತ್ತು ಬಡತನ ಹೆಚ್ಚಾದರೂ ಶ್ರೀಮಂತರು ಉದಾರಿಗಳಾಗುವುದಿಲ್ಲ ಎನ್ನುವ ಇವತ್ತಿನ ಸತ್ಯವನ್ನು ಅವತ್ತೇ ದಾಖಲಿಸಿದ್ದಾರೆ ಎಂದರು.
ತಾಯಿ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ: ಕೆ.ವಿ. ಪ್ರಭಾಕರ್
ತಾತಯ್ಯನವರು ವಿಜ್ಞಾನದ ಬೆಳವಣಿಗೆಯನ್ನು "ಕಬ್ಬಿಣದ ಕುದುರೆಗಳು ಓಡುತ್ತವೆ", "ಆಕಾಶದಲ್ಲಿ ಪಕ್ಷಿಗಳಂತೆ ಮನುಷ್ಯ ಹಾರುತ್ತಾನೆ" ಎಂಬ ರೂಪಕಗಳ ಮೂಲಕ ವರ್ಣಿಸಿದ್ದರು. ಇಂದು ನಾವು ಬಳಸುವ ರೈಲು ಮತ್ತು ವಿಮಾನಗಳನ್ನು ಅವರು ಅಂದೇ ಊಹಿಸಿದ್ದರು ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಸದ ಮಲ್ಲೇಶ್, ಎಡಿಜಿಪಿ ದೇವರಾಜ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.