ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Malur Vote Recount: ಬಿಗಿ ಭದ್ರತೆಯಲ್ಲಿ ಮಾಲೂರು ಕ್ಷೇತ್ರದ ಮರು ಮತ ಎಣಿಕೆ; ಮಾಧ್ಯಮಗಳಿಗೆ ನಿರ್ಬಂಧ

Malur assembly election results: 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ 248 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ವಿರುದ್ಧ ಗೆದ್ದಿದ್ದರು. ಆದರೇ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಮರು ಮತ ಎಣಿಕೆ ನಡೆಯುತ್ತಿದೆ.

ಕೋಲಾರ, ನ.11: ಮಾಲೂರು ವಿಧಾನಸಭಾ ಕ್ಷೇತ್ರದ ಮರು ಮತ ಎಣಿಕೆ ಕಾರ್ಯ ಬಿಗಿ ಭದ್ರತೆಯಲ್ಲಿ ನಡೆಯುತ್ತಿದ್ದು, ಮಾಧ್ಯಮಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮರು ಮತ ಎಣಿಕೆ ನಡೆಸಿ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದ ಬಳಿಕ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಕೂಡ ಬಿರುಸುಗೊಂಡಿದ್ದವು. ಮರು ಮತ ಎಣಿಕೆ ಹಿನ್ನೆಲೆಯಲ್ಲಿ ಹಾಲಿ ಶಾಸಕ ಕಾಂಗ್ರೆಸ್‌ನ ಕೆ.ವೈ.ನಂಜೇಗೌಡ ಹಾಗೂ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಎಸ್.ಮಂಜುನಾಥಗೌಡ ನಡುವಿನ ಮಾತಿನ ಸಮರ ತಾರಕಕ್ಕೇರಿತ್ತು. ಇದರಿಂದ ಫಲಿತಾಂಶದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.

ಅಧಿಕೃವಾಗಿ ಫಲಿತಾಂಶವನ್ನು ಚುನಾವಣಾಧಿಕಾರಿಯೂ ಪ್ರಕಟಿಸುವಂತಿಲ್ಲ. ಆದರೆ, ಮತ ಎಣಿಕೆ ಕೇಂದ್ರದಲ್ಲಿರುವ ಅಭ್ಯರ್ಥಿಗಳ ಪರ ಏಜೆಂಟರ ಮೂಲಕ ಫಲಿತಾಂಶ ಸಾಧ್ಯತೆ ಏನಾಗಿರಲಿದೆ ಎಂದು ಗೊತ್ತಾಗುವ ಸಂಭವವಿದೆ.

ಕೋಲಾರ ಸಮೀಪದ ಟಮಕದಲ್ಲಿರುವ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಮರು ಮತ ಎಣಿಕೆ ನಡೆಯುತ್ತಿದೆ. ಮತ ಎಣಿಕೆ ಕೇಂದ್ರದ ಸುತ್ತ 1 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಹೇರಲಾಗಿದೆ. ಮಂಗಳವಾರ ಬೆಳಗ್ಗೆ 8 ಗಂಟೆಗೆ ಎಣಿಕೆ ಆರಂಭಗೊಂಡಿದೆ. ಮತ ಎಣಿಕೆ ಪ್ರಕ್ರಿಯೆಯ ಎಲ್ಲ ಮಜಲುಗಳನ್ನು ವಿಡಿಯೋ ಚಿತ್ರೀಕರಿಸಲಾಗುತ್ತಿದೆ. ಹಾಲಿ ಶಾಸಕ ಕೆ.ವೈ.ನಂಜೇಗೌಡ, ಪರಾಜಿತ ಅಭ್ಯರ್ಥಿ ಮಂಜುನಾಥ್‌ ಗೌಡ ಮತ ಎಣಿಕೆ ಕೇಂದ್ರದ ಬಳಿ ಇದ್ದಾರೆ.

ಇದಕ್ಕೂ ಮೊದಲು ಸೋಮವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿನ ಸ್ಟ್ರಾಂಗ್ ರೂಂನಲ್ಲಿದ್ದ ಇವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ, ಸ್ವತಂತ್ರ ಅಭ್ಯರ್ಥಿ ಹೂಡಿ ವಿಜಯಕುಮಾರ್, ಕಾಂಗ್ರೆಸ್ ಶಾಸಕ ನಂಜೇಗೌಡರ ಪರವಾಗಿ ಹಾಜರಾಗಿದ್ದ ಪುತ್ರ ಸುನೀಲ್‌ನಂಜೇಗೌಡ ಸಮ್ಮುಖದಲ್ಲಿ ಮತ ಎಣಿಕೆ ಕೇಂದ್ರವಾಗಿರುವ ತೋಟಗಾರಿಕಾ ಕಾಲೇಜಿಗೆ ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಸ್ಥಳಾಂತರಿಸಲಾಗಿತ್ತು. ಇದಕ್ಕಾಗಿ ಕೆಲ ಕಾಲ ಚೆನ್ನೈ-ಬೆಂಗಳೂರು ಹೆದ್ದಾರಿಯನ್ನು ಬಂದ್ ಮಾಡಿದ್ದರಿಂದಾಗಿ ಎರಡೂ ಕಡೆ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.

ವಿಧಾನಪರಿಷತ್‌ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಡಿಸಿ ಡಾ.ರವಿ ಅವರನ್ನು ಭೇಟಿ ಮಾಡಿ ಇವಿಎಂ ಮತ ಎಣಿಕೆ ಜತೆಗೆ ಎಲ್ಲ ವಿವಿ ಪ್ಯಾಟ್‌ಗಳನ್ನೂ ಎಣಿಕೆ ಮಾಡುವ ಮೂಲಕ ಎರಡನ್ನೂ ತಾಳೆ ನೋಡಬೇಕು. ಕೇವಲ 5 ವಿವಿ ಪ್ಯಾಟ್ ಮತ ಎಣಿಕೆ ಸರಿಯಲ್ಲ, ಯಾವುದೇ ಕಾರಣಕ್ಕೂ ಮತ ಎಣಿಕೆ ಪ್ರಕ್ರಿಯೆ ಮೇಲೆ ಸರ್ಕಾರದ ಪ್ರವೇಶ ಅಥವಾ ಒತ್ತಡ ಹೇರಬಾರದು ಎಂದು ಲಿಖಿತ ಮನವಿ ಸಲ್ಲಿಸಿದ್ದರು.

ತೋಟಗಾರಿಕಾ ಕಾಲೇಜಿನಲ್ಲಿ ಮತ ಎಣಿಕೆಗೆ 14 ಟೇಬಲ್ ವ್ಯವಸ್ಥೆ ಮಾಡಲಾಗಿದ್ದು, 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದೆ. ಮೊದಲು ಅಂಚೆ ಮತಪತ್ರ, ನಂತರ ಸೇವಾ ಮತಪತ್ರದ ಎಣಿಕೆ ನಡೆಯಲಿದೆ. ರಿಟರ್ನಿಂಗ್ ಅಧಿಕಾರಿಯಾಗಿ ಕೋಲಾರ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಕಾರ್ಯ ನಿರ್ವಹಿಸುತ್ತಿದ್ದು, ಮತ ಎಣಿಕೆ ನಂತರ ಫಲಿತಾಂಶವನ್ನು ಪ್ರಕಟಣೆ ಮಾಡುವುದಿಲ್ಲ. ಮುಚ್ಚಿದ ಲಕೋಟೆಯಲ್ಲಿ ಫಲಿತಾಂಶದ ವಿವರಗಳನ್ನಿಟ್ಟು ರಿಟರ್ನಿಂಗ್ ಅಧಿಕಾರಿ ಖುದ್ದಾಗಿ ದೆಹಲಿಗೆ ತೆರಳಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರಿಗೆ ಸಲ್ಲಿಸಲಿದ್ದಾರೆಂದು ಡಿಸಿ ಡಾ.ರವಿ ತಿಳಿಸಿದ್ದಾರೆ.

248 ಮತಗಳ ಅಂತರದಿಂದ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ

2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ 248 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ವಿರುದ್ಧ ಗೆದ್ದಿದ್ದರು. ಆದರೇ, ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಮಂಜುನಾಥ್ ಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಹೈಕೋರ್ಟ್ ಮರು ಮತ ಎಣಿಕೆಗೆ ಆದೇಶ ನೀಡಿತ್ತು.

ಈ ಸುದ್ದಿಯನ್ನೂ ಓದಿ | Pralhad Joshi: ರಾಹುಲ್‌ ಗಾಂಧಿ ಮಾಲರು ವಿಧಾನಸಭಾ ಕ್ಷೇತ್ರದ ಬಗ್ಗೆ ಏಕೆ ಮಾತನಾಡಲ್ಲ? ಜೋಶಿ ಪ್ರಶ್ನೆ

ಹೈಕೋರ್ಟ್ ಆದೇಶವನ್ನು ಹಾಲಿ ಶಾಸಕ ಕೆ.ವೈ.ನಂಜೇಗೌಡ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಸುಪ್ರೀಂಕೋರ್ಟ್, ಶಾಸಕ ಸ್ಥಾನದಿಂದ ನಂಜೇಗೌಡರ ಆಯ್ಕೆ ಅಸಿಂಧುಗೊಳಿಸಿದ್ದ ಹೈಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ನೀಡಿತ್ತು. ಆದರೆ, ಸುಪ್ರೀಂಕೋರ್ಟ್ ಕೂಡ ಮತಗಳ ಮರು ಎಣಿಕೆ ನಡೆಯಬೇಕೆಂದು ಆದೇಶ ನೀಡಿತ್ತು.