ಕೋಲಾರ: ಜಿಲ್ಲೆಯ ಕೆಜಿಎಫ್ ತಾಲೂಕಿನ ಸುಂದರಪಾಳ್ಯ ಬಳಿಯ ಬೆಂಗಳೂರು-ಚೆನ್ನೈ ಎಕ್ಸ್ಪ್ರೆಸ್ವೇಗೆ ಹೊಂದಿಕೊಂಡಿರುವ ಸರ್ವಿಸ್ ರಸ್ತೆಯಲ್ಲಿ ಮಹಿಳೆಯ ಶವವನ್ನು ಪಾರ್ಸೆಲ್ ರೀತಿ ಮೂಟೆ ಕಟ್ಟಿ ದುಷ್ಕರ್ಮಿಗಳು ಎಸೆದು ಹೋಗಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಅದರಲ್ಲಿ 35 ವರ್ಷ ವಯಸ್ಸಿನ ಮಹಿಳೆಯ ಶವ (woman found dead) ಪತ್ತೆಯಾಗಿದೆ.
ರಸ್ತೆ ಬದಿ ಮೂಟೆ ಕಂಡ ಸ್ಥಳೀಯರು ಹತ್ತಿರ ಹೋಗಿ ನೋಡಿದಾಗ ವಾಸನೆ ಬಂದಿದೆ. ತಕ್ಷಣ ಬೇತಮಂಗಲ ಪೊಲೀಸರಿಗೆ ಜನ ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಕುಳಿತ ಸ್ಥಿತಿಯಲ್ಲಿ ಆಕೆಯ ಶವವನ್ನು ಕೈಕಾಲು ಕಟ್ಟಿ ಗೋಣಿ ಚೀಲದಲ್ಲಿ ಹಾಕಿ, ಪಾರ್ಸೆಲ್ ಪ್ಲಾಸ್ಟರ್ ಸುತ್ತಿ ಬಿಸಾಡಲಾಗಿದೆ. ಕಾರಿನಲ್ಲಿ ಶವ ಬಿಸಾಡಿ ಹೋಗಿರುವ ಚಲನ ವಲನಗಳು ಹೆದ್ದಾರಿ ಟೋಲ್ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸದ್ಯ ಶವದ ಗುರುತು ಪತ್ತೆಯಾಗಿಲ್ಲ. ಶವವನ್ನು ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ.
ಸುಂದರಪಾಳ್ಯ, ಆಂಧ್ರ ಮತ್ತು ತಮಿಳುನಾಡಿನ ಗಡಿ ಪ್ರದೇಶವಾಗಿದ್ದು ಅಲ್ಲಿಂದ ಯಾರಾದರೂ ಶವವನ್ನು ತಂದು ಬಿಸಾಡಿ ಹೋಗಿರುವ ಸಾಧ್ಯತೆ ಇದೆ. ಗಡಿ ಭಾಗದ ಪೊಲೀಸರಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಅಲ್ಲದೇ ಆರೋಪಿಗಳ ಪತ್ತೆಗಾಗಿ ಎರಡು ವಿಶೇಷ ತಂಡಗಳನ್ನು ರಚನೆ ಮಾಡಲಾಗಿದೆ. ಸ್ಥಳಕ್ಕೆ ಕೆಜಿಎಫ್ ಎ.ಶಿವಾಂಶು ರಜಪೂತ್ ಹಾಗೂ ಡಿವೈಎಸ್ಪಿ ಲಕ್ಷ್ಮಯ್ಯ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸೋಕೋ ತಂಡ, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಮಾಹಿತಿ ಕಲೆ ಹಾಕುತ್ತಿದ್ದಾರೆ.