ಗಂಗಾವತಿ: ಬಳ್ಳಾರಿ ಜಿಲ್ಲೆಯಲ್ಲಿ ರಾಜಕೀಯದ ಮೂಲಕ ಒಂದು ಕಾಲದಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದ ಬಿಜೆಪಿಯ ರೆಡ್ಡಿ-ರಾಮುಲು ಜೋಡಿ (BJP Karnataka) ಇತ್ತೀಚೆಗೆ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ದೂರವಾಗಿದ್ದರು. ಇದೀಗ ಈ ಇಬ್ಬರು ನಾಯಕರು, ಮುನಿಸು ಮರೆತು ಒಂದಾಗಿದ್ದಾರೆ. ತಾಲೂಕಿನ ಮರಳಿ ಗ್ರಾಮದ ಸಮೀಪದಲ್ಲಿ ಭಾನುವಾರ ನಡೆದ ಬಿಜೆಪಿ ಪಕ್ಷದ ಅವಲೋಕನಾ ಸಭೆಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಇಬ್ಬರು ನಾಯಕರು, 'ನಾವಿಬ್ಬರೂ ಒಂದೇ' ಎನ್ನುವ ಸಂದೇಶ ಸಾರಿದ್ದಾರೆ.
ನರೇಂದ್ರ ಮೋದಿ ಅವರು ಪ್ರಧಾನಿಯಾಗಿ 11 ವರ್ಷಗಳಾಗಿದ್ದರಿಂದ ಅವರ ಸಾಧನೆ ತಿಳಿಸಲು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಸಭೆ ನಡೆಯಿತು. ವಿಜಯೇಂದ್ರ ಅವರಿಬ್ಬರ ಕೈಗಳನ್ನೂ ಎತ್ತಿ ಹಿಡಿದು ಮುನಿಸು ಮರೆಯುವಂತೆ ಮಾಡಿದರು. ರೆಡ್ಡಿ ಮತ್ತು ಶ್ರೀರಾಮುಲು ಅಕ್ಕಪಕ್ಕದಲ್ಲಿಯೇ ಕುಳಿತರು.
ಸಂಡೂರು ಉಪಚುನಾವಣೆಯ ಫಲಿತಾಂಶದ ಬಳಿಕ ಪರಸ್ಪರ ಟೀಕೆ, ಪ್ರತಿ ಟೀಕೆಗಳಲ್ಲಿ ತೊಡಗಿ ಮುನಿಸಿಕೊಂಡಿದ್ದ ಬಿಜೆಪಿ ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಬಿ. ಶ್ರೀರಾಮುಲು ಅವರು ಒಂದೇ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ, ಒಗ್ಗಟ್ಟಿನ ಸಂದೇಶ ಸಂದೇಶ ಸಾರಿದ್ದಾರೆ.
ಈ ವೇಳೆ ಜನಾರ್ದನ ರೆಡ್ಡಿ ಮಾತನಾಡಿ, ನಮ್ಮ ನಡುವೆ ಮಧ್ಯಸ್ಥಿಕೆ ಮಾಡಲು ಯಾರಾದರೂ ಮುಂದಾದರೆ ಅವರಂಥ ಮೂರ್ಖರು ಯಾರೂ ಇಲ್ಲ. ನಮಗೆ ಸಂಧಾನದ ಅಗತ್ಯವಿಲ್ಲ. ನಮ್ಮದು ಸ್ನೇಹದ ಜಗಳ. ಇದರ ಲಾಭ ಪಡೆಯಲು ಪ್ರಯತ್ನಿಸಿದವರಿಗೆ ಏನೂ ಸಿಗುವುದಿಲ್ಲ ಎಂದರು.
ಈ ಸುದ್ದಿಯನ್ನೂ ಓದಿ | Bengaluru North District: 2027ಕ್ಕೆ ಬೆಂಗಳೂರು ಉತ್ತರಕ್ಕೆ ಎತ್ತಿನಹೊಳೆ ನೀರು, ಮೆಟ್ರೋ ಮಂಜೂರು: ಡಿಕೆಶಿ
ಶ್ರೀರಾಮುಲು ಮಾತನಾಡಿ, ಪಕ್ಷದ ವಿಚಾರ ಬಂದಾಗ ನಾವು ಮಾದರಿಯಾಗಬೇಕು. ಕಾಂಗ್ರೆಸ್ಸಿಗರ ರೀತಿಯಲ್ಲಿ ಹರಕೆಯ ಕುರಿ ಆಗಬಾರದು. ಪಕ್ಷ ಸಂಘಟನೆಗಾಗಿ ಎಲ್ಲರೂ ಒಂದಾಗಿ ಕೆಲಸ ಮಾಡುತ್ತೇವೆ. ಜನಾರ್ದನ ರೆಡ್ಡಿ ಜೊತೆ ಯಾವುದೇ ಮುನಿಸು ಇಲ್ಲ ಎಂದು ಹೇಳಿದರು.

ಪಕ್ಷದ ಎಲ್ಲ ನಾಯಕರನ್ನು ಒಂದುಗೂಡಿಸಬೇಕಿದೆ
ನಮ್ಮ ನಡುವೆ ಯಾವುದೇ ವೈಮನಸ್ಸಿಲ್ಲ, ಅವರು ಅದೊಂದು ದಿನ ನನ್ನ ವಿರುದ್ಧ ಮಾತನಾಡಿದ್ದರು ಮತ್ತು ನಾನೂ ಮಾತಾಡಿದ್ದೆ, ಅಷ್ಟೇ. ಅದಾದ ಮೇಲೆ ಅವರು ನನ್ನ ವಿರುದ್ಧ ಮಾತಾಡಿಲ್ಲ, ನಾನು ಅವರ ಬಗ್ಗೆ ದೂಷಣೆ ಮಾಡಿಲ್ಲ. ನಮ್ಮ ನಡುವೆ ಯಾವುದೇ ಗೊಂದಲ ಇಲ್ಲ, ಕೇವಲ ನಾವಿಬ್ಬರು ಮಾತ್ರ ಒಂದಾಗೋದು ಅಲ್ಲ, ಪಕ್ಷದ ಎಲ್ಲ ನಾಯಕರನ್ನು ಒಂದುಗೂಡಿಸಬೇಕಿದೆ, ನಮ್ಮಲ್ಲಿ ಪಕ್ಷದ ಸಂಘಟನೆ ಮುಖ್ಯವೇ ಹೊರತು ವೈಯಕ್ತಿಕ ಸಂಬಂಧಗಳಲ್ಲ ಎಂದು ಶ್ರೀರಾಮುಲು ಇತ್ತೀಚೆಗೆ ಹೇಳಿದ್ದರು, ಇದರ ಬೆನ್ನಲ್ಲೇ ಇಬ್ಬರು ನಾಯಕರೂ ಮುನಿಸು ಮರೆತು ಒಂದಾಗಿದ್ದಾರೆ.