ಕೊಪ್ಪಳ : ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಶಾಕ್ ನೀಡಿದ್ದು, ಕೊಪ್ಪಳ (Koppala news) ನಗರದ 5 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೊಪ್ಪಳ ನಗರಸಭೆ ಕಚೇರಿ ಸಿಬ್ಬಂದಿ ಹಾಗೂ ಗುತ್ತಿಗೆದಾರರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಕೊಪ್ಪಳ ನಗರಸಭೆ ಅಧ್ಯಕ್ಷ ಅಹಮದ್ ಪಟೇಲ್ ಮನೆ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಗಳಿಕೆಗೆ ಮೀರಿದ ಅಕ್ರಮ ಆಸ್ತಿ ಸಂಪಾದಿಸಿದ ಆರೋಪದ ಮೇರೆಗೆ ಈ ದಾಳಿ ನಡೆದಿದೆ. ಈ ಅಧಿಕಾರಿಗಳ ಬಗ್ಗೆ ಹಲವು ದೂರುಗಳು ಲೋಕಾಯುಕ್ತದಲ್ಲಿ ದಾಖಲಾಗಿದ್ದವು. ಮನೆ ಹಾಗೂ ಕಚೇರಿಗಳಿಗೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು ಎಲ್ಲ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ವಾಲ್ಮೀಕಿ ನಿಗಮ ಹಗರಣದಲ್ಲಿ ರಂಗಕ್ಕಿಳಿದ ಸಿಬಿಐ
ಬಳ್ಳಾರಿ : ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿನ ಬಹುಕೋಟಿ ಹಣ ದುರ್ಬಳಕೆ (Valmiki Scam) ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯ (ED) ಬಳಿಕ ಇದೀಗ ಸಿಬಿಐ ಅಖಾಡಕ್ಕೆ ಇಳಿದಿದೆ. ಮಾಜಿ ಸಚಿವ ಬಿ. ನಾಗೇಂದ್ರ (B Nagendra) ಅವರಿಗೆ ಸೇರಿದ ಸ್ಥಳಗಳು ಹಾಗೂ ಇತರೆ 15 ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶದಲ್ಲೂ ಈ ಕಾರ್ಯಾಚರಣೆ ನಡೆದಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಬಳ್ಳಾರಿಯಲ್ಲೂ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದು, ಉದ್ಯಮಿ ‘ಎಗ್’ ಕುಮಾರಸ್ವಾಮಿ ಹಾಗೂ ಆತನ ಪುತ್ರ ಪಾಲಿಕೆಯ ಬಿಜೆಪಿ ಸದಸ್ಯ ಗೋವಿಂದರಾಜು ಮನೆಯ ಮೇಲೆ ಸೋಮವಾರ ದಾಳಿ ನಡೆಸಿ, ದಾಖಲೆ ಪರಿಶೀಲಿಸಿದ್ದಾರೆ. ಗೋವಿಂದರಾಜು ಅವರು ನಾಗೇಂದ್ರ ಅವರ ಆಪ್ತರಾಗಿದ್ದಾರೆ ಎಂಬುದು ಗಮನಾರ್ಹ.
ವಾಲ್ಮೀಕಿ ನಿಗಮ ಹಗರಣದ ಪ್ರಮುಖ ಆರೋಪಿ ನೆಕ್ಕಂಟಿ ನಾಗರಾಜ್-ಗೋವಿಂದರಾಜು ದೊಡ್ಡ ಪ್ರಮಾಣದ ಹಣ ವಹಿವಾಟು ಮಾಡಿರುವ ಹಿನ್ನೆಲೆಯಲ್ಲಿ ಸಿಬಿಐ ತಂಡ ಬಳ್ಳಾರಿಗೆ ಆಗಮಿಸಿ, ಇಲ್ಲಿನ ಗಾಂಧಿನಗರದ 2ನೇ ತಿರುವಿನಲ್ಲಿರುವ ಗೋವಿಂದರಾಜು ಮನೆಗೆ ತೆರಳಿ ಅವರ ವಹಿವಾಟು ಪರಿಶೀಲಿಸಿದೆ ಎಂದು ತಿಳಿದು ಬಂದಿದೆ. ಆದರೆ ನಾಗೇಂದ್ರ ಅವರಿಗೆ ಸೇರಿದ ಯಾವೆಲ್ಲಾ ಸ್ಥಳಗಳಲ್ಲಿ ದಾಳಿ ನಡೆದಿದೆ, ಏನೇನು ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಸಿಬಿಐ ಬಹಿರಂಗಪಡಿಸಿಲ್ಲ.
ಇದನ್ನೂ ಓದಿ: CBI Raid: ವಾಲ್ಮೀಕಿ ನಿಗಮ ಹಗರಣ ತನಿಖೆಗೆ ಸಿಬಿಐ ಎಂಟ್ರಿ; ಬಳ್ಳಾರಿ ಕಾರ್ಪೋರೇಟರ್ ಮನೆ ಮೇಲೆ ದಾಳಿ