Ganesh Chaturthi 2025: ವಿಜೃಂಭಣೆಯಿಂದ ಗಣೇಶೋತ್ಸವ ಆಚರಿಸಲು ಅನುವು ಮಾಡಿಕೊಡಿ: ಛಲವಾದಿ ನಾರಾಯಣಸ್ವಾಮಿ ಆಗ್ರಹ
Chalavadi Narayanaswamy: ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿರುವ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ.


ಬೆಂಗಳೂರು: ರಾಜ್ಯಕ್ಕೆ ಒಂದೇ ಕಾನೂನು ಇರಬೇಕು. ಗಣೇಶೋತ್ಸವವನ್ನು ವಿಜೃಂಭಣೆಯಿಂದ ಹಿಂದೂಗಳು ಕೊಂಡಾಡುವಂತೆ ಆಚರಿಸಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಶುಕ್ರವಾರ ಮಾಧ್ಯಮಗಳ ಜತೆ ಮಾತನಾಡಿದ ಅವರು, ಬೇರೆ ಬೇರೆಯವರಿಗೆ ಬೇರೆ ಬೇರೆ ರೀತಿ ಮಣೆ ಹಾಕುವುದು, ಹಿಂದೂಗಳನ್ನು ದಮನಿಸುವ ನೀತಿಯನ್ನು ಮಾಡಿದ್ದೇ ಆದರೆ, ಇದರ ಪ್ರತಿಫಲವನ್ನು ನೀವೇ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ಎಲ್ಲ ಕಡೆ ಹಿಂದೂಗಳು ವಿಜೃಂಭಣೆಯಿಂದ ಗಣೇಶೋತ್ಸವವನ್ನು ಆಚರಿಸಲು ಅನುವು ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಗಣಪತಿ ಹಬ್ಬವನ್ನು ಬಹುಕಾಲದಿಂದ, ತಲೆತಲಾಂತರದಿಂದ ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಗುಲ್ಬರ್ಗಾದಲ್ಲಿ ರಿಪಬ್ಲಿಕ್ ಆಫ್ ಗುಲ್ಬರ್ಗಾ ಎಂದು ಕರೆಯುತ್ತಾರೆ. ರಾಜ್ಯದ ಕಾನೂನು, ದೇಶದ ಕಾನೂನು ಅಲ್ಲಿ ನಡೆಯುವುದಿಲ್ಲ. ರಾಜ್ಯಕ್ಕೆ ಒಂದೇ ಕಾನೂನು, ನೀತಿ ಇರಬೇಕು ಎಂದು ಶಾಸಕರು ಪ್ರಸ್ತಾಪಿಸಿದ್ದರು. ಗುಲ್ಬರ್ಗದಲ್ಲಿ ಸದ್ದೇ ಮಾಡದೇ ಗಣಪತಿ ಉತ್ಸವ ಮಾಡಬೇಕೇ? ಕಾಂಗ್ರೆಸ್ಸಿನವರಿಗೆ ಮಾತ್ರ ಮೌನ ಗಣಪತಿ ಬೇಕು ಎಂದು ಟೀಕಿಸಿದರು.
ದಕ್ಷಿಣ ಕನ್ನಡದಲ್ಲೂ ಹಿಂದೂಗಳನ್ನು ತುಳಿಯುವ ಕೆಲಸ
ಬೇರೆಯವರಿಗೆ ಮಣೆ ಹಾಕಿ ಎತ್ತಿ ಕಟ್ಟಬೇಕು; ನೀವು ಓಲೈಕೆ ಮಾಡಬೇಕು. ಹಿಂದೂಗಳನ್ನು ತುಳಿಯುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ದಕ್ಷಣ ಕನ್ನಡದಲ್ಲೂ ಡಿಜೆ ಹಾಕಬಾರದು ಎಂದು ನಿಷೇಧಿಸಿದ್ದಾರೆ ಎಂದು ಆರೋಪಿಸಿದ ಅವರು, ದಕ್ಷಿಣ ಕನ್ನಡದಲ್ಲಿ 1300 ಸೌಂಡ್ ಸಿಸ್ಟಮ್ ನಡೆಸುವವರಿದ್ದಾರೆ. 6 ಸಾವಿರ ಜನ ಕೆಲಸ ಮಾಡುತ್ತಾರೆ. ಆದರೆ, ಪೊಲೀಸರು ಅವರನ್ನು ಕರೆದು ತಾಕೀತು ಮಾಡುವುದು, 8 ಗಂಟೆಗೇ ಮೈಕ್ ಸೆಟ್ ಕಿತ್ತೊಯ್ಯುವ ಕೆಲಸ, ಕೇಸ್ ಹಾಕಿ ಬಂಧಿಸುವ, ಜೈಲಿಗೆ ಕಳಿಸುವ ಕೆಲಸ ಮಾಡುತ್ತಾರೆ ಎಂದು ದೂರಿದರು. ಇದರಿಂದ ಅವರ ಕುಟುಂಬಗಳು ಬೀದಿಪಾಲಾಗುತ್ತವೆ. ಜತೆಗೆ ಇದು ಕಾನೂನು ಮೀರಿದ ಕ್ರಮ ಎಂದು ಆರೋಪಿಸಿದರು.
ಹದಗೆಟ್ಟ ಕಾನೂನು- ಸುವ್ಯವಸ್ಥೆ
ಪ್ರಶ್ನಿಸಿದರೆ, ನಮ್ಮನ್ನು ತೇಜೋವಧೆ ಮಾಡುತ್ತಾರೆ. ನಮ್ಮನ್ನು ಟೀಕಿಸುತ್ತಾರೆಯೇ ಹೊರತು ಉತ್ತರ ಕೊಡುವಲ್ಲಿ ಮುಖ್ಯಮಂತ್ರಿಗಳು ಅಸಮರ್ಥರಾಗಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಇಡೀ ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಹದಗೆಟ್ಟಿದೆ. ಅತ್ಯಾಚಾರಗಳು ನಡೆಯುತ್ತಿವೆ. ಕೊಲೆಗಳೂ ಆಗುತ್ತಿವೆ. ಇವರು ಉತ್ತರ ಕೊಡದೇ ಮಸೂದೆಗಳನ್ನು ಅಂಗೀಕರಿಸಿ, ತೆರಿಗೆ ಹಾಕುವುದು, ಸೆಸ್ ವಿಧಿಸುವುದರಲ್ಲಿ ನಿರತರಾಗಿದ್ದಾರೆ. ಇಷ್ಟು ಮಾಡಿದರೂ ಅಲ್ಲಿ ಹಣವಿಲ್ಲ ಎಂದು ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆರೋಪಿಸಿದರು.
ಈ ಸುದ್ದಿಯನ್ನೂ ಓದಿ | BY Vijayendra: ಧರ್ಮಸ್ಥಳ ವಿಷಯದಲ್ಲಿ ಸಿಎಂ, ಡಿಸಿಎಂಗೆ ಮುಖವಾಡ ಹಾಕಿ ಓಡಾಡುವ ಪರಿಸ್ಥಿತಿ ಬಂದಿದೆ ಎಂದ ವಿಜಯೇಂದ್ರ
ಈ ಸಂದರ್ಭದಲ್ಲಿ ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಎನ್. ರವಿಕುಮಾರ್, ವಿಧಾನ ಪರಿಷತ್ ಸದಸ್ಯರಾದ ಶಶಿಲ್ ನಮೋಶಿ, ಭಾರತಿ ಶೆಟ್ಟಿ, ನವೀನ್ ಕೆ.ಎಸ್., ಡಿ.ಎಸ್. ಅರುಣ್, ಪ್ರದೀಪ್ ಶೆಟ್ಟರ್, ಕೇಶವ ಪ್ರಸಾದ್ ಎಸ್., ಕಿಶೋರ್ ಕುಮಾರ್ ಪುತ್ತೂರು ಪಾಲ್ಗೊಂಡಿದ್ದರು.