ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಬರೋಬ್ಬರಿ 19 ವರ್ಷ: ಅಭಿವೃದ್ದಿಯಲ್ಲಿ ತಂದಿಲ್ಲ ಸಂಪೂರ್ಣ ಹರ್ಷ

ನಗರ ಹೊರವಲಯ ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಲ್ಲಿ ಬೆಂಗಳೂರಿನ ವಿಧಾನಸೌಧದಂತೆ ಕಂಗೊಳಿ ಸುತ್ತಾ ಕರ್ನಾಟಕಕ್ಕೆ ಮಾದರಿಯಾದ ಜಿಲ್ಲಾಡಳಿತ ಸೌಧವನ್ನು ಹೊಂದಿರುವ ಜಿಲ್ಲೆಯು ಅಭಿವೃದ್ಧಿ ಯಲ್ಲಿ ಮೂಡಿಸಿರುವ ಗರಿಗಳು ನೂರಾರಿದ್ದರೂ, ಪರಿಪೂರ್ಣವಾಗಿ ಗರಿ ಬಿಚ್ಚಿ ನರ್ತಿಸಲು ಸಾಧ್ಯವಾಗಿಲ್ಲ ಎಂಬ ಕೊರಗಿದೆ. ಅಭಿವೃದ್ಧಿಯಲ್ಲಿ ರಾಮನಗರಕ್ಕೆ ಹೋಲಿಸಿದರೆ ಚಿಕ್ಕಬಳ್ಳಾಪುರ ತುಂಬಾ ಹಿಂದಿದೆ ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯವಾಗಿದೆ.

ಗರಿ ಬಿಚ್ಚಿ ನಲಿಯಬೇಕಿದೆ ಮತ್ತಷ್ಟು ಸಾವಿರ ಕಣ್ಣುಗಳು

ಜಿಲ್ಲಾಡಳಿತ ಭವನದ ಚಿತ್ರ...

Ashok Nayak Ashok Nayak Aug 22, 2025 8:18 PM

ಮುನಿರಾಜು ಎಂ ಅರಿಕೆರೆ

ಚಿಕ್ಕಬಳ್ಳಾಪುರ : ೨೦೦೭ ಆಗಸ್ಟ್ ೨೩ ರಂದು ಕೋಲಾರ ಉಪ ವಿಭಾಗದದಿಂದ ಬೇರ್ಪಟ್ಟು ಸ್ವತಂತ್ರ ಜಿಲ್ಲೆಯಾದ ಚಿಕ್ಕಬಳ್ಳಾಪುರವ ೨೦೨೫ರ ಆಗಸ್ಟ್ ೨೩ರ ಶುಕ್ರವಾರಕ್ಕೆ ಸರಿಯಾಗಿ ೧೯ರ ಹರೆಯವೆಂಬ ಪ್ರಬುದ್ಧ ಜೀವನಕ್ಕೆ ಕಾಲಿಟ್ಟಿರುವುದು ನಾಗರೀಕರ ಹರ್ಷಕ್ಕೆ ಕಾರಣವಾಗಿದೆ.

೧೯ ವಸಂತಗಳ ಏಳುಬೀಳುಗಳ ನಡುವೆ ಸ್ವತಂತ್ರ ಮೆಡಿಕಲ್ ಕಾಲೇಜು, ಜಿಲ್ಲಾ ಕೇಂದ್ರ ಗ್ರಂಥಾ ಲಯ, ಕೇಂದ್ರ ಬಸ್‌ನಿಲ್ದಾಣ, ಜಿಲ್ಲಾ ಕನ್ನಡಭವನ, ಚಿಮುಲ್ ಸ್ಥಾಪನೆ,ನೂತನ ಸರಕಾರಿ ಇಂಜನಿಯರಿಂಗ್ ಕಾಲೇಜನ್ನು ತನ್ನ ಒಡಲಲ್ಲಿ ಕಾಪಿಟ್ಟುಕೊಂಡಿರುವ ಜಿಲ್ಲೆಯು ಬೆಂಗಳೂರಿಗೆ ಕೇವಲ ೬೩ಕಿ.ಮಿ.ದೂರದಲ್ಲಿದೆ.

ನಗರ ಹೊರವಲಯ ಶಿಡ್ಲಘಟ್ಟ ಚಿಂತಾಮಣಿ ರಸ್ತೆಯಲ್ಲಿ ಬೆಂಗಳೂರಿನ ವಿಧಾನಸೌಧದಂತೆ ಕಂಗೊಳಿಸುತ್ತಾ ಕರ್ನಾಟಕಕ್ಕೆ ಮಾದರಿಯಾದ ಜಿಲ್ಲಾಡಳಿತ ಸೌಧವನ್ನು ಹೊಂದಿರುವ ಜಿಲ್ಲೆಯು ಅಭಿವೃದ್ಧಿಯಲ್ಲಿ ಮೂಡಿಸಿರುವ ಗರಿಗಳು ನೂರಾರಿದ್ದರೂ,ಪರಿಪೂರ್ಣವಾಗಿ ಗರಿಬಿಚ್ಚಿ ನರ್ತಿಸಲು ಸಾಧ್ಯವಾಗಿಲ್ಲ ಎಂಬ ಕೊರಗಿದೆ. ಅಭಿವೃದ್ಧಿಯಲ್ಲಿ ರಾಮನಗರಕ್ಕೆ ಹೋಲಿಸಿದರೆ ಚಿಕ್ಕಬಳ್ಳಾಪುರ ತುಂಬಾ ಹಿಂದಿದೆ ಎಂಬುದು ಸೂರ್ಯನ ಬೆಳಕಿನಷ್ಟೇ ಸತ್ಯವಾಗಿದೆ.

ಇದನ್ನೂ ಓದಿ: Chikkaballapur News: ಈ ಮಕ್ಕಳನ್ನು ದುಡಿಮೆಗೆ ಹಚ್ಚದೆ ಶಿಕ್ಷಣ ಕೊಡಿಸಿ ಬಾಳು ಬೆಳಗಿ: ನ್ಯಾ.ಬಿ.ಶಿಲ್ಪ

ಜಿಲ್ಲೆಯ ಹಿಂದಿನ ಕಹಾನಿ !!!
ಪ್ರತ್ಯೇಕ ಜಿಲ್ಲೆಯ ಕೂಗು ಜೆ.ಹೆಚ್.ಪಟೇಲರು ಮುಖ್ಯಮಂತ್ರಿಗಳಾಗಿದ್ದ ಕಾಲದಲ್ಲಿಯೇ ಕೇಳಿ ಬಂದಿತ್ತು.ದೇವಸ್ಥಾನ ಹೊಸಹಳ್ಳಿ ರಾಮಣ್ಣ,ಲಾಯರ್ ತಮ್ಮೇಗೌಡ, ಚದಲಪುರ ಮುನಿ ನಾರಾಯಣಪ್ಪ, ಲಕ್ಷ್ಮೀನಾರಾಯಣಗುಪ್ತ, ರಾಮರಾವ್ ಅಗಲಗುರ್ಕಿ ರಮೇಶ್ ಅವರ ತಂಡಕ್ಕೆ ಇನ್ಸ್‌ಪೆಕ್ಟರ್ ಬಲರಾಮೇಗೌಡರು ಬಲತುಂಬಿದ ಪರಿಣಾಮ ಪ್ರತ್ಯೇಕ ಜಿಲ್ಲಾ ಹೋರಾಟ ಪ್ರಾರಂಭವಾಯಿತು.

ಅಂದಿನ ಕಾಲದಲ್ಲಿಯೇ ೫೦ ಸಾವಿರ ಹಣವನ್ನು ರಾಮಣ್ಣ ಈ ಹೋರಾಟಕ್ಕೆ ನೀಡಿದ್ದರು ಎಂಬುಬು ಬಹಳಷ್ಟು ಜನರಿಗೆ ತಿಳಿಯದ ಸಂಗತಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಯಲುವಹಳ್ಳಿ ರಮೇಶ್ ಅವರ ತಂಡ ಈ ಕೂಗಿಗೆ ಬಲತುಂಬಿದರು.ಹೀಗೆ ಸಾಗಿದ ಪ್ರತ್ಯೇಕ ಜಿಲ್ಲೆಯ ಹೋರಾಟವು ೨೦೦೭ರಲ್ಲಿ ಸಮ್ಮಿಶ್ರ ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ರಾಜಕೀಯ ಕಾರಣಕ್ಕಾಗಿ ರಾಮನಗರವನ್ನು ಪ್ರತ್ಯೇಕ ಜಿಲ್ಲೆಯಾಗಿಸಿದರು. ಒಂದೇ ಜಿಲ್ಲೆ ಮಾಡಿದರೆ ರಾಜಕೀಯ ಎಂದು ವಿರೋಧ ಪಕ್ಷಗಳ ಆಡಿಕೊಳ್ಳುತ್ತಾರೆ ಎಂದು ಭಾವಿಸಿ ಅದರೊಟ್ಟಿಗೆ ಚಿಕ್ಕಬಳ್ಳಾಪುರವನ್ನೂ ಕೋಲಾರದಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯಾಗಿಸಿದರು. ಹೀಗಾಗಿ ಜೆಡಿಎಸ್‌ನವರು ಇಂದಿಗೂ ಕೂಡ ನಮ್ಮ ಕುಮಾರಣ್ಣ ಅವಧಿಯಲ್ಲಿ ಜಿಲ್ಲೆಯಾಯಿತು ಎಂದು ಇಂದಿಗೂ ಕೂಡ ಆಗಸ್ಟ್ ತಿಂಗಳಲ್ಲಿ ವಿಜಯೋತ್ಸವ ಆಚರಿಸುತ್ತಾ ಬಂದಿದ್ದಾರೆ.

ಇಷ್ಟಾದರೂ ಆಗಲಿ???

ಜಿಲ್ಲೆಯಾಗಿ ೧೯ವರ್ಷ ಕಳೆದರೂ ಜಿಲ್ಲಾ ಕೇಂದ್ರದಲ್ಲಿ ಇನ್ನೂ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳು ಸಾಕಷ್ಟಿವೆ. ಜಿಲ್ಲಾ ಗ್ರಾಮೀಣ ಸಹಕಾರಿ ಕೇಂದ್ರ ಬ್ಯಾಂಕ್ (ಡಿಸಿಸಿ), ಪ್ರತ್ಯೇಕವಾಗಿಲ್ಲಿ ಜಿಲ್ಲಾ ನೆಹರೂ ಯುವ ಕೇಂದ್ರ, ಜಿಲ್ಲಾ ಅಂಬೇಡ್ಕರ್ ಭವನ, ಬಾಬು ಜಗಜೀವನ್‌ರಾಮ್ ಭವನ, ವಾಲ್ಮೀಕಿ ಭವನ,ನಿರ್ಮಾಣವಾಗಿಲ್ಲ.ಜಿಲ್ಲಾ ಕೇಂದ್ರದಲ್ಲಿ ಸುಸಜ್ಜಿತವಾದ ಕ್ರೀಡಾಂಗಣ ನಿರ್ಮಾಣ ವಾಗಲಿ, ಸುಂದರವಾದ ನಗರ ನಿರ್ಮಾಣವಾಗಲಿ, ಭವ್ಯವಾದ ನಗರಸಭೆ ಕಟ್ಟಡವಾಗಲಿ, ಮಾದರಿಯಾದ ಉಧ್ಯಾನವನವಾಗಲಿ,ಅತ್ಯಾಧುನಿಕವಾದ ವಾಹನಚಾಲನಾ ತರಬೇತಿ ಕೇಂದ್ರ ವಾಗಲಿ ಇಲ್ಲ. ಉದ್ಯೋಗಿಗಳು ತಮ್ಮ ಬಿಡುವಿನ ವೇಳೆಯನ್ನು ಕಳೆಯಲು ನೆರವಾಗುವ ಕನಿಷ್ಠ ಸಿಟಿಜನ್ ಕ್ಲಬ್ ಕೂಡ ನಿರ್ಮಿಸಲಾಗಲಿಲ್ಲ.

ಅಭಿವೃದ್ದಿಗೆ ಏನೆಲ್ಲಾ ಅವಕಾಶವಿತ್ತು??

ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವು ಬೆಂಗಳೂರಿನ ಉಪನಗರವಾಗುತ್ತದೆ, ಸಿಂಗಾಪುರವಾಗಿ ಬೆಳಗಲಿದೆ ಎಂದು ನಾಗರೀಕರ ಕಿವಿಗೆ ದಾಸವಾಳದ ಹೂವಿಟ್ಟು ಮರಳು ಮಾಡಿ ಮತ ಪಡೆದು ಜನಪ್ರತಿನಿಧಿ ಗಳಾಗಿ ತಮ್ಮ ಬೇಳೆ ಬೇಯಿಸಿಕೊಂಡ ರಾಜಕಾರಣಿಗಳು, ಜಿಲ್ಲೆಯು ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ್ದರೂ ಟೂರಿಸಂ ಬೆಳವಣಿಗೆಗೆ ಮುನ್ನುಡಿ ಬರೆಯಲಿಲ್ಲ.

ಕೃಷಿ ಆಧಾರಿತ ಕೈಗಾರಿಕೆ
ತೋಟಗಾರಿಕೆ ಮತ್ತು ಕೃಷಿಯಲ್ಲಿ ನವೀನ ತಂತ್ರಜ್ಞಾನ ಬಳಸಿಕೊಂಡು ಸ್ವಾವಲಂಬನೆ ಸಾಧಿಸಿರುವ ಇಲ್ಲಿನ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಅಗ್ರಿಟೂರಿಸಂ ಬೆಳೆಸಲು ಕೂಡ ಮುಂದಾಗಬಹುದಿತ್ತು. ದ್ರಾಕ್ಷಿ, ಟೊಮೆಟೋ, ಆಲೂಗಡ್ಡೆ ರೈತರಿಗೆ ನೆರವಾಗುವಂತೆ ಮಾರುಕಟ್ಟೆ ಸ್ಥಾಪನೆ ಮಾಡಲು ಮುಂದಾಗಬಹುದಿತ್ತು.ಕೆರೆಗಳ ಪುನಶ್ಚೇತನಗೊಳಿಸಿ ಬೋಟಿಂಗ್ ಟೂರಿಸಂ ಬೆಳಸಲು ವಿಫುಲ ಅವಕಾಶ ಹೀಗೆ ಮಾಡಿದರೆ ಮಾಡುವಷ್ಟು ಇವೆ.ಆದರೆ ಮಾಡುವವರು ಯಾರು ಎಂಬುದೇ ಜನತೆಯ ಮುಂದಿರುವ ಯಕ್ಷ ಪ್ರಶ್ನೆಯಾಗಿದೆ.

ಶಾಶ್ವತ ನೀರಾವರಿ ಬರಲೇ ಇಲ್ಲ!!
ಶತಮಾನದಷ್ಟು ಹಳೆಯ ಬೇಡಿಕೆ ಜಿಲ್ಲೆಯ ಜನತೆಗೆ ಶುದ್ಧನೀರೊದಗಿಸುವ ಶಾಶ್ವತ ನೀರಾವರಿ ಯೋಜನೆ ಈವರೆಗೆ ಸಾಧ್ಯವಾಗಿಲ್ಲ,ದಶಕಗಳಿಂದ ಎತ್ತಿನಹೊಳೆಯ ಬಾಲವನ್ನು ತೋರಿಸುತ್ತಲೇ ಅದರ ಮೇಲೆ ಕೋಟಿಗಳ ಬಾಜಿ ನಡೆಸಿದ್ದಾರೆ. ದಶಕಗಳಿಂದ ಈ ವರ್ಷ ಬರಲಿದೆ, ಬರುವ ವರ್ಷ ಬರಲಿದೆ ಎನ್ನುತ್ತಾ ಆಕಾಶದೀಪ ತೋರುತ್ತಿದ್ದಾರೆ. ಈ ಕೂಗಿನ ಬಲ ಹಿಂಗಿಸುವ ನೆಪದಲ್ಲಿ ಘೋಷಣೆಯಾದ ಹೆಚ್‌ಎನ್ ವ್ಯಾಲಿ ಯೋಜನೆಯಡಿ ಬೆಂಗಳೂರಿನ ತ್ಯಾಜ್ಯ ನೀರನ್ನು ಎರಡು ಹಂತದಲ್ಲಿ ಸಂಸ್ಕರಿಸಿ ಜಿಲ್ಲೆಯ ಕೆರೆಗಳಿಗೆ ಹರಿಸಲು ಸಾವಿರಾರು ಕೋಟಿಗಳನ್ನು ಇದಕ್ಕೆ ಸುರಿಯು ತ್ತಾ ಅದನ್ನೂ ಕೂಡ ಪೂರ್ಣಪ್ರಮಾಣದಲ್ಲಿ ಮಾಡುವಲ್ಲಿ ಸೋತು ಸುಣ್ಣವಾಗಿ, ಜನ ಮತ್ತು ಜಾನುವಾರುಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.ರಾಜಕೀಯದ ಕೆಸರನ್ನು ಮೈಮೇಲೆ ಚೆಲ್ಲಿಕೊಳ್ಳುತ್ತಾ ನಿಮ್ಮದು ತಪ್ಪು ಎಂದು ಇವರು ನಿಮ್ಮದೇ ತಪ್ಪು ಎಂದು ಅವರು ದೂರುತ್ತಾ ಸಾಗಿದ್ದಾರೆ.

ರೈಲ್ವೇ ಯೋಜನೆ
ಗೌರಿಬಿದನೂರು ಪುಟ್ಟಪರ್ತಿ, ತಿರುಪತಿ ರೈಲ್ವೇ ಯೋಜನೆಗಳಿಗೆ ಈ ೧೯ ವರ್ಷಗಳಲ್ಲಿ ಚಾಲನೆ ನೀಡಿ ಜಿಲ್ಲೆಯನ್ನು ಭಾರತದೊಂದಿಗೆ ಜೋಡಿಸುವ ಮಹತ್ಕಾರ್ಯಕ್ಕೆ ಇಲ್ಲಿನ ಜನಪ್ರತಿನಿಧಿಗಳು ಮುಂದಾ ಗದಿರುವುದು ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಗೆ ಆದ ಹಿನ್ನಡೆಯೆಂದೇ ಹೇಳಬೇಕು. ರೈಲ್ವೇ ಸಂಪರ್ಕದಿಂದ ಏನೆಲ್ಲಾ ಅಭಿವೃದ್ಧಿ ಆಗಲಿದೆ ಎಂಬುದಕ್ಕೆ ಪಕ್ಕದ ಜಿಲ್ಲೆ ತುಮಕೂರು, ಗ್ರಾಮಾಂತರದ ದೊಡ್ಡಬಳ್ಳಾಪುರಗಳೇ ಸಾಕ್ಷಿ.ಸಂಸದ ಸುಧಾಕರ್ ಅವಧಿಯಲ್ಲಿ ಜಿಲ್ಲೆಯನ್ನು ಭಾರತದೊಂದಿಗೆ ಜೋಡಿಸುವ ಕೆಲಸ ಆಗುವುದೇ ಕಾದು ನೋಡಬೇಕಿದೆ.

ಒಟ್ಟಾರೆ ಜನಪ್ರತಿನಿಧಿಗಳೊಟ್ಟಿಗೆ ಜಿಲ್ಲಾಧಿಕಾರಿಗಳು ಅಭಿವೃದ್ದಿಗೆ ಕೈಜೋಡಿಸಬೇಕು. ಜಿಲ್ಲಾಡಳಿತ ಭವನದಲ್ಲಿನ ಜಿಲ್ಲಾಧಿಕಾರಿಗಳ ಕಛೇರಿ ಸೇರಿದಂತೆ ೩೪ ಇಲಾಖೆಗಳಿವೆ.ಇಲ್ಲಿನ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಕಾರಿ ಕೆಲಸ ದೇವರ ಕೆಲಸ ಎಂಬ ಉಕ್ತಿಯನ್ನು ಮನದಲ್ಲಿ ಪಠಿಸುತ್ತಾ ಇನ್ನಷ್ಟು ಸಕ್ರಿಯವಾಗಿ ಕಾರ್ಯತತ್ಪರಾಗಿದ್ದೇ ಆದಲ್ಲಿ ಗ್ರೇಟರ್ ಬೆಂಗಳೂರು ಸ್ಥಾನಮಾನ ಪಡೆಯವ ಅರ್ಹತೆ ಯುಳ್ಳ ನಗರರವಾಗಿ ಮುಂದಿನ ದಿನಗಳಲ್ಲಿ ಕರ್ನಾಟದ ಭೂಪಟದಲ್ಲಿ ಮೆರೆಯುವುದರಲ್ಲಿ ಅನುಮಾನವೇ ಇಲ್ಲ.  

ಹೀಗೆ ಪ್ರತ್ಯೇಕ ಜಿಲ್ಲೆಯಾಗಿ ಹತ್ತಿರತ್ತಿರ ಎರಡು ದಶಕಗಳ ಈ ಸುಧೀರ್ಘ ಕಾಲಾವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಆಗಿದ್ದರೂ ಪರಿಪೂರ್ಣ ಜಿಲ್ಲೆಯಾಗಲು ಇನ್ನೂ ಹೆಣಗಾಡುತ್ತಿರುವುದು ನೋಡಿದರೆ ಜನಪ್ರತಿನಿಧಿಗಳ ರಾಜಕೀಯ ಇಚ್ಚಾಶಕ್ತಿ ಎದ್ದು ಕಾಣುತ್ತಿದೆ.ಮುಂದಿನ ದಿನಗಳಲ್ಲಾದರೂ ಜಿಲ್ಲೆಯ ಸಮಗ್ರ ಅಭಿವೃದ್ದಿಗೆ ಎಲ್ಲಾ ಜನಪ್ರತಿನಿಧಿಗಳು ಒಂದಾಗಿ ರೂಪುರೇಶೆ ಸಿದ್ದಪಡಿಸುವರೋ ಎಂಬುದನ್ನು ಕಾದು ನೋಡಬೇಕಿದೆ.

*

ಚಿಕ್ಕಬಳ್ಳಾಪುರ ಜಿಲ್ಲೆಯು ಇಂದಿಗೆ ೧೯ ವರ್ಷ ಪೂರೈಸಿರುವ ಈ ಸಂದರ್ಭದಲ್ಲಿ ಜಿಲ್ಲೆ ಸಾಕಷ್ಟು ಅಭಿವೃದ್ದಿಯನ್ನು ಕಂಡಿದೆ. ಕೃಷಿ, ಶಿಕ್ಷಣ, ಪ್ರವಾಸೋಧ್ಯಮ, ನಗರಗಳ ಬೆಳವಣಿಯಲ್ಲಿ ಈ ರೀತಿ ಯಲ್ಲಿ ಸಾಕಷ್ಟು ಅಭಿವೃದ್ದಿಯನ್ನು ಕಂಡಿದೆ. ಇಂತಹ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ ಎಲ್ಲಾ ಜನಪ್ರತಿನಿಧಿಗಳಿಗೆ, ಕೃಷಿಕರಿಗೆ, ರೈತರಿಗೆ, ವಾಣಿಜ್ಯೋದ್ಯಮಿಗಳಿಗೆ, ಶಿಕ್ಷಣ ಪ್ರೇಮಿಗಳಿಗೆ, ಸಾರ್ವ ಜನಿಕರು ಇವರೆಲ್ಲರ ಶ್ರಮದಿಂದ ಜಿಲ್ಲೆ ಬೆಳವಣಿಗೆ ಕಾಣಲಿಕ್ಕೆ ಆಗಿದೆ. ಇನ್ನಷ್ಟು ಆಶಾ ದಾಯಕವಾದ ಪ್ರಗತಿ ಮುಂದಿನ ದಿನಗಳಲ್ಲಿ ಆಗಲಿ ಎಂದು ಶುಭ ಹಾರೈಸುತ್ತೇನೆ.
ಪಿ.ಎನ್.ರವೀಂದ್ರ. ಜಿಲ್ಲಾಧಿಕಾರಿಗಳು ಚಿಕ್ಕಬಳ್ಳಾಪುರ.

ಜಿಲ್ಲೆಯು ೧೯ ವರ್ಷಗಳಲ್ಲಿ ಸಾಕಷ್ಟು ಅಭಿವೃದ್ದಿ ಕಂಡಿದೆ.ಆದರೂ ಆಗಬೇಕಿರುವ ಕೆಲಸಗಳು ಇನ್ನೂ ಸಾಕಷ್ಟಿವೆ.ಮೆಡಿಕಲ್ ಕಾಲೇಜು ಬಂದಿರುವುದು ಸಂತೋಷ. ಆದರೆ ಮೆಡಿಕಲ್ ಕಾಲೇಜಿ ನಲ್ಲಿ ಆಸ್ಪತ್ರೆಯನ್ನು ಕೂಡಲೇ ಪ್ರಾರಂಭಿಸಬೇಕು. ಗ್ರೇಟರ್ ಬೆಂಗಳೂರು ಮಾಡಲು ಉತ್ತೇಜಿಸುವ ರೀತಿಯಲ್ಲಿ ಜಿಲ್ಲಾ ಕೇಂದ್ರದ ಅಭಿವೃದ್ದಿ ಆಗಬೇಕಿದೆ.ಕೇಂದ್ರ ಬಸ್‌ನಿಲ್ದಾಣದ ಹೊರೆಯನ್ನು ತಪ್ಪಿಸಲು ಜನಪ್ರತಿನಿಧಿಗಳು ಯೋಜಿಸಬೇಕು.ಬೆಂಗಳೂರು ಉತ್ತರ ವಿಶ್ವವಿದ್ಯಾಲಯನ್ನು ಕೂಡಲೇ ಅಮರಾವತಿಯಲ್ಲಿ ಪ್ರಾರಂಭಿಸನೇಕು. ಮಂಚೇನಹಳ್ಳಿ ಚೇಳೂರು ನೂತನ ತಾಲೂಕುಗಳು ಸ್ವತಂತ್ರವಾಗಿ ಕಾರ್ಯರಂಭ ಮಾಡಿ ಜನರ ಕಷ್ಟಕ್ಕೆ ನೆರವಾಗಲು ಬೇಕಾದ ವ್ಯವಸ್ಥೆಯನ್ನು ರಾಜ್ಯ ಸರಕಾರ ಒದಗಿಸಬೇಕು.ಹೀಗೆ ಅಭಿವೃದ್ದಿಯ ವಿಚಾರದಲ್ಲಿ ರಾಜಕೀಯ ಮಾಡದೆ ಜಿಲ್ಲೆಯ ಸರ್ವಾಂಗೀಣ ಪ್ರಗತಿಗೆ ಪ್ರತಿಯೊಬ್ಬರೂ ಶ್ರಮಿಸಬೇಕು.ಇದರೊಟ್ಟಿಗೆ ನಾವೂ ಇರುತ್ತೇವೆ.
ಸಂದೀಪ್.ಬಿ.ರೆಡ್ಡಿ ಭಗತ್‌ಸಿಂಗ್ ಚಾರಿಟೇಬಲ್ ಟ್ರಸ್ಟ್ ಚಿಕ್ಕಬಳ್ಳಾಪುರ.