ವಕ್ಫ್​ ತಿದ್ದುಪಡಿ ಮಸೂದೆ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪ್ರಾಥಮಿಕ ಶಾಲೆ ಶಿಕ್ಷಕರನ್ನು 1ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ: ಕಾನೂನು ಇಲಾಖೆ

2016ಕ್ಕೂ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು 2017ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ 1ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸಿ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ ಎಂದು ಸಂಘದ ಅಧ್ಯಕ್ಷ ಕೆ. ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ.

ಪ್ರಾ.ಶಾ. ಶಿಕ್ಷಕರನ್ನು 1ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸುವುದು ಸರಿಯಲ್ಲ

ಸಾಂದರ್ಭಿಕ ಚಿತ್ರ.

Profile Siddalinga Swamy Apr 15, 2025 12:06 AM

ಬೆಂಗಳೂರು: 2016ಕ್ಕೂ ಪೂರ್ವದಲ್ಲಿ ನೇಮಕಗೊಂಡ ಪ್ರಾಥಮಿಕ ಶಾಲಾ ಶಿಕ್ಷಕರನ್ನು 2017ರ ವೃಂದ ಮತ್ತು ನೇಮಕಾತಿ ನಿಯಮಗಳಂತೆ 1ರಿಂದ 5ನೇ ವರ್ಗಕ್ಕೆ ಸೀಮಿತಗೊಳಿಸಿ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ ಎಂದು ಸರ್ಕಾರದ ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ ಎಂದು ಸಂಘದ ಅಧ್ಯಕ್ಷ ಕೆ. ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ ತಿಳಿಸಿದ್ದಾರೆ. ಕಾನೂನು ಇಲಾಖೆಯ ಈ ಅಭಿಪ್ರಾಯ ಕಳೆದ ಏಳು ವರ್ಷಗಳಿಂದ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ನಡೆಸುತಿದ್ದ ಹೋರಾಟಕ್ಕೆ ಶಕ್ತಿ ನೀಡಿದೆ ಎಂದು ಅವರು ತಿಳಿಸಿದ್ದಾರೆ.

ಯಾವುದೇ ನಿಯಮಗಳು ಜಾರಿಗೆ ಬಂದ ದಿನಾಂಕದಿಂದ ಅನ್ವಯವಾಗಲಿದ್ದು, ಅದರನ್ವಯ ಪ್ರಸ್ತುತ ಪ್ರಕರಣದಲ್ಲಿ 2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಗೊಂಡ ಶಿಕ್ಷಕರುಗಳಿಗೆ ಪೂರ್ವಾನ್ವಯಗೊಳಿಸುವುದು ಸರಿಯಾದ ಕ್ರಮವಲ್ಲ, ಪ್ರತಿಯೊಬ್ಬ ನೌಕರನಿಗೂ ಸದರಿ ನೌಕರನು ನೇಮಕಗೊಂಡ ಸಮಯದಲ್ಲಿ ಜಾರಿಯಲ್ಲಿದ್ದ ನಿಯಮಗಳನ್ನು ಅನ್ವಯಿಸಬೇಕಾಗಿರುತ್ತದೆ ಎಂದು ಕಾನೂನು ಇಲಾಖೆ ಅಭಿಪ್ರಾಯಪಟ್ಟಿದೆ ಎಂದರು.

2017ರ ನೇಮಕಾತಿ ನಿಯಮಾವಳಿಯಂತೆ ಎಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರನ್ನು 1 ರಿಂದ 5 ನೇ ವರ್ಗಕ್ಕೆ ಸೀಮಿತಗೊಳಿಸಿ ಸರ್ಕಾರ ಆದೇಶಿಸಿತ್ತು. ಇದರಿಂದ ಮುಖ್ಯ ಶಿಕ್ಷಕರ ಹುದ್ದೆ, ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯ ಪದೋನ್ನತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರು ವಂಚಿತಗೊಂಡು ಯಾವುದೇ ಪದೋನ್ನತಿಯಿಲ್ಲದೇ ರಾಜ್ಯದ ಸಹಸ್ರಾರು ಶಿಕ್ಷಕರು ನಿವೃತ್ತಿ ಹೊಂದಿದ್ದರು.

ಇದನ್ನು ಖಂಡಿಸಿ ಶಿಕ್ಷಕರ ಸಂಘ ಕಪ್ಪು ಬಟ್ಟೆ ಧರಿಸಿ, ತರಗತಿ ಬಹಿಷ್ಕಾರ ಮಾಡಿ, ಸರ್ಕಾರಕ್ಕೆ ಸಲ್ಲಿಸಬೇಕಾದ ಸಾಟ್ಸ್ ಮತ್ತಿತರ ಮಾಹಿತಿ ತುಂಬದೆ ಹಂತ ಹಂತವಾಗಿ ಪ್ರತಿಭಟನೆ ನಡೆಸುತ್ತಿತ್ತು. ನಿರಂತರ ಹೋರಾಟಕ್ಕೂ ಸರ್ಕಾರ ಸ್ಪಂದಿಸದೇ ಇರುವಾಗ, ಕಳೆದ ಆ. 12ರಂದು ಅಂತಿಮ ಹಂತದ ಹೋರಾಟಕ್ಕೆ ಸಂಘ ಕರೆ ಕೊಟ್ಟಿತ್ತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಆ ದಿನ ನಡೆದ ಹೋರಾಟದಲ್ಲಿ 75 ಸಾವಿರಕ್ಕೂ ಅಧಿಕ ಶಿಕ್ಷಕರು ಭಾಗವಹಿಸಿದ್ದರು. ಹೋರಾಟದ ತೀವ್ರತೆ ಅರಿತು ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಶಿಕ್ಷಕರ ಸಂಘದ ಅಧ್ಯಕ್ಷ ನಾಗೇಶ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಗಲಿ, ವಿಧಾನಪರಿಷತ್ ಸದಸ್ಯರಾದ ಪುಟ್ಟಣ್ಣ, ರಾಮೋಜಿಗೌಡರು, ಶಿಕ್ಷಣ ತಜ್ಞ ಡಾ.ವಿ.ಪಿ. ನಿರಂಜನಾರಾಧ್ಯ, ಸಾಹಿತಿ ಬರಗೂರು ರಾಮಚಂದ್ರಪ್ಪ, ಅಖಿಲ ಭಾರತ ಶಿಕ್ಷಕರ ಫೆಡರೇಷನ್ ಅಧ್ಯಕ್ಷ ಬಸವರಾಜ ಗುರಿಕಾರ ಅವರನ್ನು ಸಿಎಂ, ಗೃಹ ಕಚೇರಿಗೆ ಕರೆದು ಸಭೆ ನಡೆಸಿದರು.

ತುಮಕೂರಿನಲ್ಲಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಫೋನ್ ಕರೆ ಮಾಡಿ ಹೋರಾಟ ಸ್ಥಳಕ್ಕೆ ಹೋಗಿ ಹೋರಾಟಗಾರರ ಬೇಡಿಕೆ ಆಲಿಸಿ, ಅಧಿಕಾರಿಗಳ ಸಭೆ ನಡೆಸಲು ಸೂಚಿಸಿದರು. ಹೋರಾಟ ಸ್ಥಳಕ್ಕೆ ಬಂದು ಶಿಕ್ಷಣ ಸಚಿವರು ನಾನಾ ಇಲಾಖೆಯ ಅಧಿಕಾರಿಗಳ ಜತೆ ಚರ್ಚಿಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು.

2024 ರ ಸೆ. 4ರಂದು ಶಿಕ್ಷಕರ ದಿನಾಚರಣೆಯ ಮುನ್ನಾ ದಿನ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಶಿಕ್ಷಣ ಇಲಾಖೆಯ ಅಧಿಕಾರಿಗಳು, ಶಿಕ್ಷಕ ಸಂಘಟನೆ ಹಾಗೂ ವಿಧಾನ ಪರಿಷತ್ ಸದಸ್ಯರ ಜತೆ ಸುಮಾರು ಎರಡೂವರೆ ಗಂಟೆಗಳ ಕಾಲ ಸಭೆ ನಡೆಸಿ, ಹೊಸ ವೃಂದ ನೇಮಕಾತಿ ನಿಯಮಾವಳಿಗಳು 2016ಕ್ಕೂ ಪೂರ್ವದಲ್ಲಿ ನೇಮಕಗೊಂಡ ಶಿಕ್ಷಕರಿಗೆ ಅನ್ವಯಿಸುವುದು ತಪ್ಪು ಎಂದು ಅಭಿಪ್ರಾಯಪಟ್ಟಿದ್ದರು. ಸೆ.5 ಶಿಕ್ಷಕರ ದಿನಾಚರಣೆಯಲ್ಲಿಯೂ ಈ ಅನ್ಯಾಯ ಸರಿಪಡಿಸುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಭರವಸೆ ನೀಡಿದ್ದರು. ಅದಕ್ಕಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿತ್ತು. ಆ ಸಮಿತಿಯ ಮುಂದೆ ಎರಡೂ ಬಾರಿ ಶಿಕ್ಷಕ ಸಂಘಟನೆ, ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಆದ ಅನ್ಯಾಯವನ್ನು ಪ್ರತಿಪಾದಿಸಿತ್ತು. ಈ ಬಗ್ಗೆ ಕಾನೂನು ಇಲಾಖೆ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಆರ್ಥಿಕ ಇಲಾಖೆಗೆ ಅಭಿಪ್ರಾಯ ಕೋರಿ ಬರೆದಿದ್ದರು. ಈಗ ಕಾನೂನು ಇಲಾಖೆ ನೀಡಿದ ಅಭಿಪ್ರಾಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರಂತರ ಹೋರಾಟಕ್ಕೆ ಶಕ್ತಿ ತುಂಬಿದೆ ಎಂದು ತಿಳಿಸಿದರು.‌

ಈ ಸುದ್ದಿಯನ್ನೂ ಓದಿ | BMRCL Recruitment 2025: ನಮ್ಮ ಮೆಟ್ರೋದಲ್ಲಿದೆ ಉದ್ಯೋಗಾವಕಾಶ; ಅಪ್ಲೈ ಮಾಡುವ ವಿಧಾನ ಇಲ್ಲಿದೆ

ಶೀಘ್ರವೇ ಸರ್ಕಾರ 2017ಕ್ಕಿಂತ ಮೊದಲು ನೇಮಕಾತಿ ಸಂದರ್ಭದಲ್ಲಿದ್ದ ನಿಯಮಗಳಂತೆ ಬಡ್ತಿ ನೀಡಬೇಕು, ಪದವಿ ಪಡೆದ 58,000 ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಒಂದು ವೇತನ ಬಡ್ತಿ ನೀಡಿ, ಉನ್ನತ ವ್ಯಾಸಂಗ ಪಡೆದವರಿಗೆ ನ್ಯಾಯ ದೊರಕಿಸಬೇಕೆಂದು ಸಂಘ ಮನವಿ ಮಾಡಿದೆ.