ಬೆಂಗಳೂರು, ಡಿ.25: ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ (Zameer Ahmed Khan) ಅವರ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ಅವರಿಗೆ ಲೋಕಾಯುಕ್ತ ಅಧಿಕಾರಿಗಳು (Lokayukta Raid) ಶಾಕ್ ಕೊಟ್ಟಿದ್ದಾರೆ. ಸರ್ಫರಾಜ್ ಖಾನ್‌ರ ಮನೆ, ರೆಸಾರ್ಟ್, ವಾಣಿಜ್ಯ ಕಟ್ಟಡಗಳು ಹಾಗೂ ಎಸ್ಟೇಟ್‌ಗಳೂ ಸೇರಿದಂತೆ 13 ಸ್ಥಳಗಳ ಮೇಲೆ ಬುಧವಾರ ದಾಳಿ ನಡೆಸಿರುವ ಅಧಿಕಾರಿಗಳು ಸುಮಾರು 14.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.
ಸಹಕಾರ ಇಲಾಖೆಯಲ್ಲಿ ಸಹಕಾರ ಸಂಘಗಳ ಲೆಕ್ಕ ಪರಿಶೋಧನಾ ವಿಭಾಗದ ನಿರ್ದೇಶಕರಾಗಿರುವ ಸರ್ಫರಾಜ್ ಖಾನ್ ಅವರು ನಿಯೋಜನೆ ಮೇರೆಗೆ ವಸತಿ ಮತ್ತು ಅಲ್ಪಸಂಖ್ಯಾಂತರ ಕಲ್ಯಾಣ ಇಲಾಖೆಯಲ್ಲಿದ್ದಾರೆ. ಸದ್ಯ ಅವರು ಸಚಿವ ಜಮೀರ್ ಅವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಬೆಂಗಳೂರಿನ ಹಲಸೂರಿನಲ್ಲಿರುವ ಸರ್ಫರಾಜ್ ನಿವಾಸ ಮತ್ತು ಸಂಬಂಧಿಕರ ಮನೆಗಳೂ ಸೇರಿದಂತೆ 5 ಕಡೆ ದಾಳಿ ನಡೆದಿದೆ. ಜತೆಗೆ, ಕೊಡಗು ಜಿಲ್ಲೆಯಲ್ಲಿರುವ ಸರ್ಫರಾಜ್ ಒಡೆತನದ ಕಾಫಿ ಎಸ್ಟೇಟ್‌ಗಳು ಹಾಗೂ ಎಚ್.ಡಿ.ಕೋಟೆಯಲ್ಲಿನ ರೆಸಾರ್ಟ್ ಮೇಲೆ ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದ್ದಾರೆ.
ಸರ್ಫರಾಜ್ ವಿರುದ್ಧ ಬಾಗಲಕೋಟೆಯ ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ದೂರಿನ ಅನ್ವಯ ಬೆಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ದಾಳಿ ವೇಳೆ ಸರ್ಫರಾಜ್ ಮತ್ತು ಅವರ ಕುಟುಂಬದ ಸದಸ್ಯರ ಹೆಸರಿನಲ್ಲಿದ್ದ ಸ್ಥಿರಾಸ್ತಿಗಳ ದಾಖಲೆಗಳು ಸಿಕ್ಕಿವೆ. ಆರೋಪಿತ ಅಧಿಕಾರಿಯು ಬೇನಾಮಿ ಹೆಸರಿನಲ್ಲಿಆಸ್ತಿ ಹೊಂದಿದ್ದಾರೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಸರ್ಫರಾಜ್ ಮತ್ತು ಅವರ ಕುಟುಂಬದ ಸದಸ್ಯರ ಬ್ಯಾಂಕ್ ಖಾತೆಗಳಲ್ಲಿನ ಠೇವಣಿ ಹಣವನ್ನು ಜಪ್ತಿ ಮಾಡಲಾಗಿದೆ. ಸರ್ಫರಾಜ್ ಆಸ್ತಿ ಮೌಲ್ಯವು ಅವರ ಅಧಿಕೃತ ಮೂಲದ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಿದೆ. ಈ ಬಗ್ಗೆ ವಿವರಣೆ ನೀಡುವಂತೆ ಅವರಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್
ತೆರಿಗೆ ವಂಚನೆ ಸಂಬಂಧ ಆದಾಯ ತೆರಿಗೆ ಇಲಾಖೆಯ ದೂರಿನ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಈ ಹಿಂದೆ ಸಚಿವ ಜಮೀರ್ ಮನೆಯಲ್ಲಿ ಶೋಧ ನಡೆಸಿದ್ದರು. ಆಗ ಪತ್ತೆಯಾಗಿದ್ದ ಹಣಕಾಸು ವ್ಯವಹಾರದ ಲೆಕ್ಕಪತ್ರಗಳನ್ನು ಇ.ಡಿ ಅಧಿಕಾರಿಗಳು, ಲೋಕಾಯುಕ್ತ ಪೊಲೀಸರಿಗೆ ಹಸ್ತಾಂತರಿಸಿ ತನಿಖೆ ನಡೆಸುವಂತೆ ಕೋರಿದ್ದರು. ಅದರಂತೆ ತನಿಖೆ ಆರಂಭಿಸಿರುವ ಲೋಕಾಯುಕ್ತ ಅಧಿಕಾರಿಗಳು ಸಚಿವ ಜಮೀರ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಮನೆ ಮತ್ತು ಆಸ್ತಿಗಳ ಮೇಲೆ ದಾಳಿ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಸರ್ಫರಾಜ್ ರಾಜಕೀಯ ಪ್ರಾಬಲ್ಯ ಹೊಂದಿರುವ ವ್ಯಕ್ತಿಯಾಗಿದ್ದು, ಈ ಹಿಂದೆ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅಲ್ಲದೆ, ಸರಕಾರದ ವಿವಿಧ ಇಲಾಖೆಗಳಲ್ಲಿ ಕಾರ್ಯನಿರ್ವಹಿಸಿದ್ದರು.
ಪತ್ತೆಯಾದ ಅಸ್ತಿ ಪಾಸ್ತಿ
ಒಟ್ಟು 14.38 ಕೋಟಿ ರೂ. ಮೌಲ್ಯದ ಅಕ್ರಮ ಆಸ್ತಿ
4 ವಾಸದ ಮನೆಗಳು, 37 ಎಕರೆ ಕೃಷಿ ಜಮೀನು ಸೇರಿದಂತೆ 8.44 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ
5.93 ಕೋಟಿ ರೂ. ಮೌಲ್ಯದ ಚರಾಸ್ತಿ
66,500 ರೂ. ನಗದು
2.99 ಕೋಟಿ ರೂ. ಬೆಲೆ ಬಾಳುವ ಚಿನ್ನಾಭರಣ
1.64 ಕೋಟಿ ರೂ. ಮೌಲ್ಯದ ವಾಹನಗಳು
1.29 ಕೋಟಿ ರೂ. ಬ್ಯಾಂಕ್ ಠೇವಣಿ