ಬೆಂಗಳೂರು, ಮಾರ್ಚ್ 10: ನಗರದಲ್ಲಿ ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ (LPG Cylinder Shortage) ಕೊರತೆ ಎದುರಾಗಿರುವ ಹಿನ್ನೆಲೆಯಲ್ಲಿ ಹೋಟೆಲ್ ಉದ್ಯಮದಲ್ಲಿ ಆತಂಕ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ನಗರದ ಹಲವು ಹೋಟೆಲ್‌ಗಳು ಮುಚ್ಚುವ (hotel bandh) ಸಾಧ್ಯತೆ ಹೆಚ್ಚಿದ್ದು, ಈ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಲು ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಮನವಿ ಸಲ್ಲಿಸಿದೆ. ಈ ಕುರಿತು ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tjaswi Surya) ಮತ್ತು ಕೇಂದ್ರ ರಾಜ್ಯ ಖಾತೆ ಸಚಿವೆ ಶೋಭಾ ಕರಂದ್ಲಾಜೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರಾದ ಹರ್ದೀಪ್ ಸಿಂಗ್ ಪುರಿಗೆ ಪ್ರತ್ಯೇಕವಾಗಿ ಪತ್ರ ಬರೆದಿದ್ದಾರೆ.
ಹೋಟೆಲ್ ಹಾಗೂ ಆತಿಥ್ಯ ಕ್ಷೇತ್ರಕ್ಕೆ ನಿರಂತರ ಎಲ್‌ಪಿಜಿ ಪೂರೈಕೆ ಖಚಿತಪಡಿಸುವಂತೆ ಮನವಿ ಮಾಡಿ ಟ್ವೀಟ್ ಮಾಡಿರುವ ಸಂಸದ ಸೂರ್ಯ, ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರವು ದಿನನಿತ್ಯದ ಅಡುಗೆ ಕಾರ್ಯಗಳಿಗೆ ಬಹುಪಾಲು ವಾಣಿಜ್ಯ ಎಲ್‌ಪಿಜಿ ಮೇಲೆಯೇ ಅವಲಂಬಿತವಾಗಿದೆ. ಪಿಎನ್‌ಜಿ ಸಂಪರ್ಕ ಅಥವಾ ವಿದ್ಯುತ್ ಆಧಾರಿತ ಅಡುಗೆ ವ್ಯವಸ್ಥೆಗಳು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದ ಕಾರಣ ಎಲ್‌ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಉಂಟಾದರೆ ಹೋಟೆಲ್ ಉದ್ಯಮ, ಉದ್ಯೋಗ ಹಾಗೂ ಗ್ರಾಹಕರ ಸೇವೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಚಿವೆ ಶೋಭಾ ಕರಂದ್ಲಾಜೆ ಕೂಡ ಈ ವಿಷಯವನ್ನು ಸಚಿವ ಹರಿದೀಪ್ ಸಿಂಗ್ ಪುರಿ ಅವರ ಗಮನಕ್ಕೆ ತಂದಿದ್ದಾರೆ. ಬೆಂಗಳೂರಿನ ಹೋಟೆಲ್ ಅಸೋಸಿಯೇಷನ್ ಎದುರಿಸುತ್ತಿರುವ ಸಮಸ್ಯೆಯ ಕುರಿತು ಅವರು ಪತ್ರ ಬರೆದು ಮನವಿ ಮಾಡಿದ್ದಾರೆ. ಅಸೋಸಿಯೇಷನ್ ನೀಡಿದ ಮನವಿ ಪತ್ರವನ್ನೂ ಸಚಿವರಿಗೆ ರವಾನಿಸಿದ್ದಾರೆ.
Hotels bandh: ರಾಜಧಾನಿಯಲ್ಲಿ ಬೆಳಗ್ಗೆ ತೆರೆದ ಹೋಟೆಲ್‌ಗಳು, ಮಧ್ಯಾಹ್ನದ ಹೊತ್ತಿಗೆ ಗ್ಯಾಸ್ ಖಾಲಿ!
ಇಂದು (ಮಾರ್ಚ್ 10) ಸಚಿವ ಹರಿದೀಪ್ ಸಿಂಗ್ ಪುರಿ ಅವರನ್ನು ನೇರವಾಗಿ ಭೇಟಿ ಮಾಡಿ ಸಮಸ್ಯೆಗೆ ಪರಿಹಾರ ಮಾರ್ಗಗಳ ಕುರಿತು ಚರ್ಚೆ ನಡೆಸುವುದಾಗಿ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಹೋಟೆಲ್ ಉದ್ಯಮಕ್ಕೆ ಯಾವುದೇ ವ್ಯತ್ಯಯವಾಗದಂತೆ ಎಲ್‌ಪಿಜಿ ಪೂರೈಕೆ ಮುಂದುವರಿಯಬೇಕು ಎಂಬುದು ಉದ್ಯಮಿಗಳ ಒತ್ತಾಯವಾಗಿದೆ.