Sabarimala Temple: ಬಾಗಿಲು ತೆರೆದ ಶಬರಿಮಲೆ ಶ್ರೀ ಅಯ್ಯಪ್ಪ ಗರ್ಭಗುಡಿ, ಮಂಡಲ- ಮಕರವಿಳಕ್ಕು ಉತ್ಸವ ಆರಂಭ
ಪವಿತ್ರ ಶ್ರೀ ಶಬರಿಮಲೆ ದೇವಾಲಯದಲ್ಲಿ ಮಂಡಲ- ಮಕರವಿಳಕ್ಕು (Mandala- Makaravilakku) ಯಾತ್ರೆ ನಿನ್ನೆ ಅರಂಭವಾಗಿದೆ. ಈ ಋತುವಿಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ರಾಜ್ಯ ಸರ್ಕಾರವು ಸನ್ನಿಧಾನ, ಪಂಬಾದಾದ್ಯಂತ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಎರಡು ತಿಂಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆ ಜನವರಿ 20, 2026 ರವರೆಗೆ ಮುಂದುವರಿಯುತ್ತದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನ ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತಿದ್ದು, ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಬೆಟ್ಟದ ದೇವಾಲಯಕ್ಕೆ ಆಗಮಿಸಿದ್ದರು.
ಶ್ರೀ ಶಬರಿಮಲೆ ದೇವಾಲಯದಲ್ಲಿ ಭಕ್ತರು -
ಶಬರಿಮಲೆ: ಕೋಟ್ಯಂತರ ಭಕ್ತಾದಿಗಳ ನಂಬಿಕೆ- ಶ್ರದ್ಧೆಗಳ ಸನ್ನಿಧಾನವಾಗಿರುವ ಕೇರಳದ ಶ್ರೀ ಶಬರಿಮಲೆ ದೇವಾಲಯದ (Sri Sabarimala Temple_ ಪವಿತ್ರ ಮಂಡಲ- ಮಕರವಿಳಕ್ಕು ಯಾತ್ರೆಯ (Sabarimala yatra) ಆರಂಭಿಕ ವಿಧಿವಿಧಾನಗಳು ಶ್ರೀ ಅಯ್ಯಪ್ಪ ಮಹಾಸ್ವಾಮಿಯ (Sri Ayyappan) ಸನ್ನಿಧಾನದಲ್ಲಿ ನವೆಂಬರ್ 16 ರಂದು ಭಾನುವಾರ ಪ್ರಾರಂಭವಾಯಿತು. ಇಂದಿನಿಂದ ಮಕರವಿಳಕ್ಕು (Makaravilakku) ಯಾತ್ರೆ ಆರಂಭವಾಗಲಿದೆ. ದೇವಾಲಯದ ಪ್ರಧಾನ ಅರ್ಚಕ, ಮೇಲ್ಶಾಂತಿ ಅರುಣ್ ಕುಮಾರ್ ನಂಬೂತಿರಿ ಅವರು ಶಬರಿಮಲೆ ದೇವಳದ ಗರ್ಭಗುಡಿಯನ್ನು ಸಂಜೆ 5 ಗಂಟೆಗೆ ವೃಶ್ಚಿಕಂ ಆಚರಣೆಗಳಿಗಾಗಿ ತೆರೆದ ನಂತರ ವಾರ್ಷಿಕ ಮಂಡಲ- ಮಕರವಿಳಕ್ಕು ಯಾತ್ರೆಯ ನಾಂದಿಯಾಯಿತು.
ಭಾನುವಾರ ನೂತನವಾಗಿ ನೇಮಕಗೊಂಡ ತಿರುವಾಂಕೂರು ದೇವಸ್ವಂ ಮಂಡಳಿ ಅಧ್ಯಕ್ಷ ಕೆ.ಜಯಕುಮಾರ್ ಇತರ ಅಧಿಕಾರಿಗಳೊಂದಿಗೆ ಶಬರಿಮಲೆ ಸನ್ನಿಧಾನಕ್ಕೆ ಭೇಟಿ ನೀಡಿದ್ದರು. ಉದ್ಘಾಟನಾ ಸಮಾರಂಭದಲ್ಲಿ ತಂತ್ರಿ ಕಂಡಾರರು ಮಹೇಶ್ ಮೋಹನರು ಉಪಸ್ಥಿತರಿದ್ದರು. "ಇಡಿ ಪ್ರಸಾದ್ ಶಬರಿಮಲೆಯ ಹೊಸ ಮೇಲ್ಶಾಂತಿ (ಮುಖ್ಯ ಅರ್ಚಕ) ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಮತ್ತು ಎಂಜಿ ಮನು ಮಲಿಕಪ್ಪುರಂನ ಮೇಲ್ಶಾಂತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ" ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಮೇಲ್ಶಾಂತಿ ಅರುಣ್ ಕುಮಾರ್ ನಂಬೂತಿರಿ ಅವರು ಗರ್ಭಗುಡಿಯನ್ನು ತೆರೆಯುತ್ತಿದ್ದಂತೆ ಅಯ್ಯಪ್ಪನ ಜಯಘೋಷಗಳು ದೇವಾಲಯದ ಆವರಣದಲ್ಲಿ ಪ್ರತಿಧ್ವನಿಸಿದವು. ಉದ್ಘಾಟನೆಯ ನಂತರ, ಮೇಲ್ಶಾಂತಿ ಅರುಣ್ ಕುಮಾರ್ ನಂಬೂತಿರಿ ಅವರು ಗರ್ಭಗುಡಿಯಿಂದ ತಂದ ದೀಪವನ್ನು ಬಳಸಿಕೊಂಡು ಅಗ್ನಿಕುಂಡವನ್ನು ಬೆಳಗಿಸಲು 18 ಪವಿತ್ರ ಮೆಟ್ಟಿಲುಗಳನ್ನು ಇಳಿದರು ಎಂದು ಎಎನ್‌ಐ ವರದಿ ಮಾಡಿದೆ.
ನಂತರ ಅವರು ಹೊಸದಾಗಿ ನೇಮಕಗೊಂಡ ಮೇಲ್ಶಾಂತಿಗಳನ್ನು ಸನ್ನಿಧಾನಕ್ಕೆ ಕರೆದೊಯ್ದರು. ಭಕ್ತಾದಿಗಳು, ಕನ್ನಿಸ್ವಾಮಿಗಳು ತಮ್ಮ ಇರುಮುಡಿ ಕಟ್ಟುಗಳೊಂದಿಗೆ ಮೆಟ್ಟಿಲುಗಳ ಕೆಳಗೆ ಕಾಯುತ್ತಿದ್ದರು. ನಂತರ ಅವರ ದರ್ಶನಕ್ಕೆ ವ್ಯವಸ್ಥೆ ಮಾಡಲಾಯಿತು. ಈ ಬಾರಿಯ ಯಾತ್ರೆಯು ಆರಂಭದ ದಿನದಿಂದಲೇ ಭಾರಿ ಜನಜಂಗುಳಿಯನ್ನು ಕಂಡಿದೆ.
ಮಂಡಲ-ಮಕರವಿಳಕ್ಕು ಋತುವಿಗಾಗಿ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೇರಳ ರಾಜ್ಯ ಸರ್ಕಾರವು ಸನ್ನಿಧಾನ, ಪಂಬಾದಾದ್ಯಂತ ವಿಸ್ತಾರವಾದ ವ್ಯವಸ್ಥೆಗಳನ್ನು ಮಾಡಿದೆ. ಎರಡು ತಿಂಗಳ ಕಾಲ ನಡೆಯುವ ಈ ವಾರ್ಷಿಕ ತೀರ್ಥಯಾತ್ರೆ ಜನವರಿ 20, 2026 ರವರೆಗೆ ಮುಂದುವರಿಯುತ್ತದೆ. ಶಬರಿಮಲೆ ಅಯ್ಯಪ್ಪ ಸನ್ನಿಧಾನ ಪ್ರಪಂಚದಾದ್ಯಂತದ ಭಕ್ತರನ್ನು ಆಕರ್ಷಿಸುತ್ತದೆ.
ಇದನ್ನೂ ಓದಿ: Droupadi Murmu : ಇರುಮುಡಿ ಹೊತ್ತು ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿದ ರಾಷ್ಟ್ರಪತಿ
ಮೊದಲ ದಿನವೇ ಹೆಚ್ಚಿನ ಸಂಖ್ಯೆಯ ಭಕ್ತರು ಪವಿತ್ರ ಬೆಟ್ಟದ ದೇವಾಲಯಕ್ಕೆ ಆಗಮಿಸಿದ್ದರು. ಅಧಿಕಾರಿಗಳು ಮರಕೂಟಂನಿಂದ ಸನ್ನಿಧಾನಂವರೆಗಿನ ಚಂದ್ರನಂದನ್ ರಸ್ತೆಯ ಉದ್ದಕ್ಕೂ ಚಾರಣ ಮಾರ್ಗ ಮತ್ತು ಬೆಂಚುಗಳೊಂದಿಗೆ ಸಿದ್ಧರಾಗಿದ್ದರು. ಭಕ್ತರು ವಿಶ್ರಾಂತಿ ಪಡೆಯಲು ಹೆಚ್ಚುವರಿ ಆಸನ ಸೌಲಭ್ಯಗಳನ್ನು ಒದಗಿಸಲು ವಲಿಯನಾಡಪಂದಲ್ ಮತ್ತು ಸರಮಕುತಿ ನಡುವಿನ ಸರತಿ ಸಾಲಿನ ಸಂಕೀರ್ಣದ ಎರಡೂ ಬದಿಗಳಲ್ಲಿ 400 ಮೀಟರ್ ತಡೆಗೋಡೆಯನ್ನು ನಿರ್ಮಿಸಲಾಗಿದೆ.
ಇದಲ್ಲದೆ, ಪಂಬಾ ಮತ್ತು ಸನ್ನಿಧಾನಂ ನಡುವೆ ಬಿಸಿ ಕುಡಿಯುವ ನೀರಿನ ಕಿಯೋಸ್ಕ್‌ಗಳು ಮತ್ತು 56 ಶುಂಠಿ ನೀರು ವಿತರಣಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಯಾತ್ರಾರ್ಥಿಗಳ ದೈನಂದಿನ ಸಂಖ್ಯೆಯ ಮೇಲೆ ಮಿತಿ ವಿಧಿಸಲಾಗಿದೆ. ವರ್ಚುವಲ್ ಕ್ಯೂ ವ್ಯವಸ್ಥೆಯ ಮೂಲಕ ಒಟ್ಟು 90,000-70,000 ಭಕ್ತರಿಗೆ ಮತ್ತು ಸ್ಪಾಟ್ ಬುಕಿಂಗ್ ಮೂಲಕ 20,000 ಭಕ್ತರಿಗೆ ಪ್ರತಿದಿನ ಅವಕಾಶ ನೀಡಲಾಗುವುದು ಎಂದು ಪಿಟಿಐ ವರದಿ ಮಾಡಿದೆ.