ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Sivasri Skandaprasad: ಸಂಸದ ತೇಜಸ್ವಿ ಸೂರ್ಯ ಜತೆ ಸಪ್ತಪದಿ ತುಳಿದ ಗಾಯಕಿ ಶಿವಶ್ರೀ; ಪ್ರಧಾನಿ ಮೋದಿಯಿಂದ ಮೆಚ್ಚುಗೆ ಪಡೆದ ಇವರ ಹಿನ್ನೆಲೆ ಏನು?

Sivasri Skandaprasad: ಕಟುಂಬಸ್ಥರು, ಆಪ್ತರ ಸಮ್ಮುಖದಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹಾಗೂ ತಮಿಳುನಾಡು ಮೂಲದ ಕರ್ನಾಟಕ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ ಮಾ. 6ರಂದು ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಪ್ರಧಾನಿ ಮೋದಿ ಅವರಿಂದ ಮೆಚ್ಚುಗೆ ಪಡೆದ ಶಿವಶ್ರೀ ಅವರ ಪರಿಚಯ ಇಲ್ಲಿದೆ.

ತೇಜಸ್ವಿ ಸೂರ್ಯ ಜತೆ ಸಪ್ತಪದಿ ತುಳಿದ ಗಾಯಕಿ ಶಿವಶ್ರೀ ಹಿನ್ನೆಲೆ ಏನು?

ತೇಜಸ್ವಿ ಸೂರ್ಯ ಮತ್ತು ಶಿವಶ್ರೀ ಸ್ಕಂದಪ್ರಸಾದ್‌.

Profile Ramesh B Mar 10, 2025 6:20 PM

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ (‌Bengaluru south MP Tejasvi Surya) ಹಾಗೂ ತಮಿಳುನಾಡು ಮೂಲದ ಕರ್ನಾಟಕ ಸಂಗೀತ ಗಾಯಕಿ ಶಿವಶ್ರೀ ಸ್ಕಂದಪ್ರಸಾದ್‌ (Sivasri skandaprasad) ಮಾ. 6ರಂದು ಬೆಂಗಳೂರಿನಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಬಿಜೆಪಿ ನಾಯಕರಾದ ಅಣ್ಣಾಮಲೈ, ಪ್ರತಾಪ್‌ ಸಿಂಹ ಮತ್ತು ಅಮಿತ್‌ ಮಾಳವಿಯಾ ಮತ್ತಿತರರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು. ಮಾ. 9ರಂದು ಅದ್ಧೂರಿ ಆರತಕ್ಷತೆ ಸಮಾರಂಭವೂ ನಡೆದಿದೆ. ಮದುವೆಯ ಫೋಟೊ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆದ ಬಳಿಕ ಶಿವಶ್ರೀ ನೆಟ್ಟಿಗರ ಗಮನ ಸೆಳೆದಿದ್ದಾರೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಗೂಗಲ್‌ನಲ್ಲಿ ಅತೀ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪೈಕಿ ಶಿವಶ್ರೀ ಹೆಸರು ಮುಂಚೂಣಿಯಲ್ಲಿದೆ. ಅವರ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.

ಚೆನ್ನೈ ಮೂಲದ ಶಿವಶ್ರೀ ಅವರು ಕರ್ನಾಟಕ ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ದೇಶ-ವಿದೇಶದಲ್ಲಿ ಕಾರ್ಯಕ್ರಮ ನೀಡಿರುವ ಅವರು ತಮ್ಮ ಮಧುರ ಧ್ವನಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ ಗಮನವನ್ನೂ ಸೆಳೆದಿದ್ದಾರೆ. ಬಹುಮುಖ ಪ್ರತಿಭೆ ಎನಿಸಿಕೊಂಡಿರುವ ಇವರು ಭರತನಾಟ್ಯ ಕಲಾವಿದೆಯೂ ಹೌದು. ಸಂಗೀತಗಾರರ ಕುಟುಂಬದಲ್ಲಿ 1996ರ ಆ. 1ರಂದು ಜನಿಸಿದ ಶಿವಶ್ರೀ ಅವರ ತಂದೆ ಪ್ರಸಿದ್ದ ಮೃದಂಗ ವಾದಕ ಸೀರ್ಕಾಝಿ ಜೆ.ಸ್ಕಂದಪ್ರಸಾದ್‌.



ಶಿವಶ್ರೀ ಕುಟುಂಬದ ಬಹುತೇಕರು ಸಂಗೀತ, ಶಾಸ್ತೀಯ ನೃತ್ಯ ಸೇರಿದಂತೆ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹೀಗಾಗಿ ಇದು ಅವರಿಗೆ ಜನ್ಮದತ್ತವಾಗಿಯೇ ಒಲಿದು ಬಂದಿದೆ. ಶಿವಶ್ರೀ ಅವರ ಅಜ್ಜಿ ಜನಪ್ರಿಯ ಭರತನಾಟ್ಯದ ಕಲಾವಿದರಿಗಾಗಿ ಹಾಡುತ್ತಿದ್ದರು. ಅಜ್ಜ ಸೀರ್ಕಾಝಿ ಜಯರಾಮನ್‌ ಶಾಸ್ತ್ರೀಯ ಸಂಗೀತದಲ್ಲಿ ಸಾಕಷ್ಟು ಹೆಸರು ಮಾಡಿದ್ದರು.

ಈ ಸುದ್ದಿಯನ್ನೂ ಓದಿ: Tejsvi Surya Marriage: ಸಪ್ತಪದಿ ತುಳಿದ ತೇಜಸ್ವಿ ಸೂರ್ಯ- ಶಿವಶ್ರೀ ಸ್ಕಂದಪ್ರಸಾದ್‌

ಬಾಲ್ಯದಲ್ಲೇ ಭರತನಾಟ್ಯ ಕಲಿಕೆ

ಸಂಗೀತದ ಜತೆಗೆ ಶಿವಶ್ರೀ ತಮ್ಮ 3ನೇ ವಯಸ್ಸಿನಲ್ಲಿ ಆಚಾರ್ಯ ಚೂಡಾಮಣಿ ಗುರು ರೋಜಾ ಕಣ್ಣನ್‌ ಮತ್ತು ಕಲೈಮಾಮಣಿ ಕೃಷ್ಣಕುಮಾರಿ ನರೇಂದ್ರನ್‌ ಅವರಿಂದ ಭರತನಾಟ್ಯ ಕಲಿಕೆ ಆರಂಭಿಸಿದರು. ಬಾಲ್ಯದಲ್ಲೇ ಹಲವು ವೇದಿಕೆಗಳಲ್ಲಿ ಪ್ರದರ್ಶನವನ್ನೂ ನೀಡಿದರು. ಎಕ್ಸ್​ ಅಕೌಂಟ್​ನ (ಟ್ವಿಟರ್) ಬಯೋದಲ್ಲಿ ತಮ್ಮನ್ನು ಭಾರತೀಯ​, ಗಾಯಕಿ, ನರ್ತಕಿ ಮತ್ತು ಭಾರತೀಯ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸುವ ವೇದಿಕೆಯಾದ 'ಆಹುತಿ'ಯ ಸಂಸ್ಥಾಪಕಿ ಎಂದು ಅವರು ಪರಿಚಯಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ಭಾರತೀಯ ಕಲಾ ಪ್ರಕಾರಗಳು ಮತ್ತು ಆಧುನಿಕ ಪ್ರೇಕ್ಷಕರ ನಡುವಿನ ಅಂತರವನ್ನು ಕಡಿಮೆ ಮಾಡಲು 'ಆಹುತಿ' ಕಾರ್ಯ ನಿರ್ವಹಿಸುತ್ತಿದೆ.

ಶಿಕ್ಷಣ

ಶಿವಶ್ರೀ ತಾಂಜಾವೂರಿನ ಶಾಸ್ತ್ರ (SASTRA) ವಿಶ್ವವಿದ್ಯಾಲಯದಲ್ಲಿ ಬಯೋ ಎಂಜಿನಿಯರಿಂಗ್ ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದಿದ್ದಾರೆ. ಇದರೊಂದಿಗೆ ಮದ್ರಾಸ್ ವಿಶ್ವವಿದ್ಯಾಲಯದಿಂದ ಭರತನಾಟ್ಯದಲ್ಲಿ ಎಂಎ ಪದವಿಯನ್ನು, ಮದ್ರಾಸ್ ಸಂಸ್ಕೃತ ಕಾಲೇಜಿನಲ್ಲಿ ಸಂಸ್ಕೃತ ಎಂಎ ಪದವಿಯನ್ನು ಪಡೆದುಕೊಂಡಿದ್ದಾರೆ. ಜತೆಗೆ ಸೈಕ್ಲಿಂಗ್‌, ಟ್ರೆಕ್ಕಿಂಗ್‌, ವಾಕಥಾನ್‌ಗಳಲ್ಲಿಯೂ ಆಸಕ್ತಿ ಹೊಂದಿದ್ದಾರೆ.

ಸಂಗೀತದಲ್ಲಿ ಸಾಧನೆ

ಶಿವಶ್ರೀ ಎ.ಎಸ್‌.ಮುರಳಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿದ್ದಾರೆ. ಸಂಗೀತ ಕ್ಷೇತ್ರಕ್ಕೆ ಸಲ್ಲಿಸುವ ಅನುಪಮ ಕೊಡುಗೆಗಾಗಿ ಸಾಕಷ್ಟು ಪ್ರಶಸ್ತಿಗಳನ್ನೂ ಪಡೆದಿದ್ದಾರೆ. ಯುವ ಸಮ್ಮಾನ್‌ ಪ್ರಶಸ್ತಿ, ಭಜನ ಭೂಷಣ, ಭಾರತ ಕಲಾ ಚೂಡಾಮಣಿ ಮುಂತಾದ ಪ್ರತಿಷ್ಠಿತ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ವಿಶೇಷ ಎಂದರೆ ಶಿವಶ್ರೀ ಸಿನಿಮಾದ ಹಾಡಿಗಳಿಗೂ ಧ್ವನಿ ನೀಡಿದ್ದಾರೆ. ಮ್ಯೂಸಿಕ್‌ ಮಾಂತ್ರಿಕ ಎ.ಆರ್‌.ರೆಹಮಾನ್‌ ಸಂಗೀತ ಸಂಯೋಜಿಸಿರುವ ಮಣಿರತ್ನಂ ಅವರ 'ಪೊನ್ನಿಯಿನ್ ಸೆಲ್ವನ್ 1' ತಮಿಳು ಚಿತ್ರಕ್ಕಾಗಿ ಅವರು ಹಾಡಿದ್ದಾರೆ.



ಮೋದಿಯಿಂದಲೂ ಮೆಚ್ಚುಗೆ

ಕನ್ನಡ ಹಾಡುಗಳಿಗೂ ಶಿವಶ್ರೀ ಜೀವ ತುಂಬಿದ್ದಾರೆ. 2024ರಲ್ಲಿ ನಡೆದ ಅಯೋಧ್ಯೆ ರಾಮ ಮಂದಿರದ ಉದ್ಘಾಟನೆಯ ಸಮಯದಲ್ಲಿ ಶ್ರೀರಾಮನ ಕುರಿತಾಗಿ ಶವಶ್ರೀ ಹಾಡಿದ್ದ ಹಾಡನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೆಚ್ಚಿ ಟ್ವಿಟರ್‌ (ಎಕ್ಸ್‌)ನಲ್ಲಿ ಹಂಚಿಕೊಂಡಿದ್ದರು. ಶಿವಶ್ರೀ ಅವರು ಕನ್ನಡದ ‘ಪೂಜಿಸಲೆಂದೇ ಹೂವಗಳ ತಂದೆ…’ ಹಾಡನ್ನು ಹಾಡಿ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಹಾಕಿದ್ದರು. ಇದನ್ನು ಗಮನಿಸಿದ್ದ ಮೋದಿ ಅವರು, ಈ ಹಾಡಿನ ಲಿಂಕ್ ಪೋಸ್ಟ್‌ ಮಾಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದರು. ''ಶಿವಶ್ರೀ ಸ್ಕಂದಪ್ರಸಾದ್ ಅವರ ಈ ಕನ್ನಡ ಹಾಡು ಪ್ರಭು ಶ್ರೀರಾಮನ ಮೇಲಿನ ಭಕ್ತಿಯನ್ನು ಬಹಳ ಸುಂದರವಾಗಿ ಎತ್ತಿ ತೋರಿಸುತ್ತದೆ. ಇಂತಹ ಪ್ರಯತ್ನಗಳು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ'' ಎಂದು ಮೋದಿ ತಿಳಿಸಿದ್ದರು.

ಶಿವಶ್ರೀ ಅವರ ರಾಮ, ಕೃಷ್ಣ, ಈಶ್ವರ, ಪಾಂಡುರಂಗನ ಕುರಿತಾದ ಹಾಡು, ಸೌಂದರ್ಯ ಲಹರಿ ಸೇರಿದಂತೆ ಭಕ್ತಿಗೀತೆ, ಕೀರ್ತನೆ ಹಾಗೂ ಭಜನೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ.