ಬೆಂಗಳೂರು: ಮೈಕ್ರೋ ಫೈನಾನ್ಸ್ (Micro finance) ಕಂಪೆನಿಗಳು ಸಾಲ ವಸೂಲಿಯ ನೆಪದಲ್ಲಿ ಸಾಲ ಪಡೆದವರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಯಲು ರೂಪಿಸಲಾದ ಸುಗ್ರೀವಾಜ್ಞೆಗೆ (ordinance) ರಾಜ್ಯಪಾಲರ (Governor) ಅಂಕಿತ ದೊರೆತಿದ್ದು, ಈ ಕ್ಷಣದಿಂದ ಕಾನೂನಾಗಿ ಜಾರಿಗೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿರುವ ಸಿದ್ದರಾಮಯ್ಯ, ಮೈಕ್ರೋ ಫೈನಾನ್ಸ್ ಕಂಪೆನಿಗಳು ಸಾಲ ವಸೂಲಿಯ ನೆಪದಲ್ಲಿ ಸಾಲ ಪಡೆದವರಿಗೆ ನೀಡುತ್ತಿರುವ ಕಿರುಕುಳವನ್ನು ತಡೆಯಲು ರೂಪಿಸಲಾದ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ದೊರೆತಿದೆ. ಈ ಕಾನೂನು ಶೀಘ್ರದಲ್ಲಿ ಜಾರಿಗೆ ಬಂದು ಮೈಕ್ರೋ ಫೈನಾನ್ಸ್‌ಗಳ ನಿಯಮ ಬಾಹಿರ ಸಾಲ ವಸೂಲಿ, ಕಿರುಕುಳಗಳ ವಿರುದ್ಧ ಜನರಿಗೆ ರಕ್ಷಣೆ ನೀಡಲಿದೆ. ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ ಹೆದರಿ ಯಾರೊಬ್ಬರೂ ದುಡುಕಿನ ನಿರ್ಧಾರ ಕೈಗೊಳ್ಳದಿರಿ. ನಿಮ್ಮ ಜೊತೆ ನಮ್ಮ ಸರ್ಕಾರ ಇದೆ ಎಂದಿದ್ದಾರೆ.
ಮೈಕ್ರೋ ಫೈನಾನ್ಸ್ ಕಂಪೆನಿಗಳು ಅಥವಾ ಇತರೆ ಖಾಸಗಿ ಹಣಕಾಸು ಸಂಸ್ಥೆಗಳು, ವ್ಯಕ್ತಿಗಳು ಸಾಲ ವಸೂಲಿಯ ನೆಪದಲ್ಲಿ ನೀಡುತ್ತಿದ್ದ ಕಿರುಕುಳ, ಮಾನಸಿಕ ಹಿಂಸೆ ಮತ್ತು ದೌರ್ಜನ್ಯದಂತಹ ಅಮಾನವೀಯ, ಕಾನೂನು ಬಾಹಿರ ಕ್ರಮಗಳ ಮೇಲೆ ನಿಯಂತ್ರಣ ಹಾಗೂ ನಿರ್ಬಂಧ ಹೇರುವ ಉದ್ದೇಶದಿಂದ ನಾವು ರೂಪಿಸಿದ ಕರ್ನಾಟಕ ಕಿರು ಸಾಲ ಮತ್ತು ಸಣ್ಣ ಸಾಲ ( ಬಲವಂತದ ಕ್ರಮಗಳ ಪ್ರತಿಬಂಧಕ ) ಅಧ್ಯಾದೇಶ - 2025" ಈ ಕ್ಷಣದಿಂದ ಕಾನೂನಾಗಿ ಜಾರಿಗೆ ಬಂದಿದೆ ಎಂದು ತಿಳಿಸಿದ್ದಾರೆ.
ಮೈಕ್ರೋ ಫೈನಾನ್ಸ್‌ನಲ್ಲಿ ಸಾಲ ಪಡೆದು ಕಿರುಕುಳಕ್ಕೆ ಒಳಗಾದವರು ಪೊಲೀಸರ ಬಳಿ ದೂರು ದಾಖಲಿಸಬಹುದು, ಅಂಥವರಿಗೆ ಹೊಸ ಕಾನೂನಿನಡಿ ಹೆಚ್ಚಿನ ರಕ್ಷಣೆ ದೊರೆಯಲಿದೆ. ನಮ್ಮ ಈ ಪ್ರಯತ್ನದಿಂದ ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್, ಫೈನಾನ್ಸ್ ಹಾಗೂ ಲೇವಾದೇವಿದಾರರ ಕಿರುಕುಳ, ದೌರ್ಜನ್ಯಗಳು ಕೊನೆಯಾಗಲಿದೆ ಎಂಬ ಭರವಸೆ ಇರುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Microfinance ordinance: ಸಾಲಕ್ಕೆ ಭದ್ರತೆ ಕೇಳುವಂತಿಲ್ಲ, ನಿಯಮ ಮೀರಿದ್ರೆ 10 ವರ್ಷ ಜೈಲು ಶಿಕ್ಷೆ, 5 ಲಕ್ಷ ದಂಡ