ಬೆಂಗಳೂರು, ಡಿ.18: ಗೃಹಲಕ್ಷ್ಮೀ ಯೋಜನೆಯ (Gruha Laksmi Scheme) ಹಣ ಫಲಾನುಭವಿಗಳಿಗೆ ಸರಿಯಾಗಿ ತಲುಪುತ್ತಿಲ್ಲ ಎಂದು ವಿಪಕ್ಷಗಳು ಆರೋಪಿಸಿವೆ. ಇದೇ ವಿಚಾರವಾಗಿ ಬುಧವಾರ ಸದನದಲ್ಲಿ ಗದ್ದಲ ಉಂಟಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ (Lakshmi Hebbalkar) ವಿರುದ್ಧ ವಿಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಈ ಬಗ್ಗೆ ಸದನದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಿದ್ದು, ಆದಷ್ಟು ಬೇಗ ಮಹಿಳೆಯರ ಖಾತೆಗೆ ಹಣ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಗೃಹ ಲಕ್ಷ್ಮೀ ಗದ್ದಲದ ಬಗ್ಗೆ ಮಾತನಾಡಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಗೃಹ ಲಕ್ಷ್ಮೀ ಯೋಜನೆ ಬಗ್ಗೆ ಯಾವುದೇ ಗೊಂದಲ ಇಲ್ಲ. ಗೃಹ ಲಕ್ಷ್ಮೀ ಕಂತಿನ ಹಣ ನೇರವಾಗಿ ಡಿಬಿಟಿ ಮೂಲಕ ಹೋಗುತ್ತದೆ. ಇಲ್ಲಿಯವರೆಗೆ ಯೋಜನೆ ಪ್ರಾರಂಭ ಆಗಿ 23 ಕಂತು ಹಣ ಹೋಗಿದೆ. ವಿಪಕ್ಷಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಬಗ್ಗೆ ಕೇಳುತ್ತಿದ್ದಾರೆ. ನಾನು ಅವರಿಗೆ 23 ಕಂತಿನ 46 ಸಾವಿರ ಕೋಟಿ ಹಣ ಹೋಗಿದೆ ಉತ್ತರಿಸಿದ್ದೇನೆ ಎಂದು ತಿಳಿಸಿದರು.
ಎರಡು ತಿಂಗಳ ಹಣ ಬಿಡುಗಡೆ ಆಗಿಲ್ಲ, ಸಿಎಂ ಸಿದ್ದರಾಮಯ್ಯ ಫೈನಾನ್ಸ್ ಮಿನಿಸ್ಟರ್ ಇದ್ದಾರೆ. ಅವರ ಬಳಿ ಈ ಬಗ್ಗೆ ಮಾತಾಡುತ್ತೇನೆ. ಹಣ ಬಿಡುಗಡೆ ಆಗಿಲ್ಲ ಅಂದರೆ ಮಾಡುತ್ತೇವೆ ಎಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಹಾದಿ ಬೀದಿಯಲ್ಲಿ ಗ್ಯಾರಂಟಿ ಯೋಜನೆ ಟೀಕೆ ಮಾಡಿದವರು ಬಿಜೆಪಿಯವರು. ಸರ್ಕಾರದ ಗೃಹ ಲಕ್ಷ್ಮೀ ಯೋಜನೆಗೆ ಮಸಿ ಬಳಿಯಲು ಆರೋಪ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಬಿಗ್ ಅಪ್‌ಡೇಟ್
ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದೀರಿ ಎಂಬ ವಿಪಕ್ಷಗಳ ಆರೋಪಕ್ಕೆ ಉತ್ತರಿಸಿದ ಸಚಿವೆ, ಸದನದ ದಿಕ್ಕು ತಪ್ಪಿಸುವ ಕೆಲಸ ನಾನು ಮಾಡಿಲ್ಲ, ಭಾವನೆಗಳಿಗೆ ಧಕ್ಕೆಯಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ. ಕಂತುಗಳ ಮೂಲಕ ನಾವು ಹಣ ಹಾಕಿದ್ದೇವೆ. 52 ಸಾವಿರ ಕೋಟಿ ಹಾಕಿದ್ದೇವೆ. ಎರಡು ತಿಂಗಳದ್ದು ಹಾಕಲು ಬದ್ಧತೆ ಇದೆ ಎಂದರು. ಸರ್ಕಾರದ ಬಳಿ ದುಡ್ಡಿಲ್ಲ ಅಂತ ಕಟ್ ಅಪ್ ಮಾಡಿಲ್ಲ, ಇದರಲ್ಲಿ ಯಾವುದೇ ಮುಚ್ಚು ಮರೆ ಇಲ್ಲ. ಗೃಹಲಕ್ಷ್ಮೀ ವಿರೋಧ ಮಾಡಿದ್ದವರಿಗೆ ಬದ್ಧತೆ ಇಲ್ಲ. ನಮಗೆ ಕಮಿಟ್ಮೆಂಟ್ ಇದೆ. ಹಣ ಹಾಕುವ ಕುರಿತು ಸಿಎಂ ಸಿದ್ದರಾಮಯ್ಯ ಜೊತೆಗೆ ಮಾತಾಡುತ್ತೇನೆ. ಆದಷ್ಟು ಬೇಗ ಹಾಕಿರದಿರೋ ಹಣ ಹಾಕುತ್ತೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದರು.