ನವದೆಹಲಿ: ಶೈಕ್ಷಣಿಕ ಪರಿವರ್ತನೆ ಮತ್ತು ಮಕ್ಕಳ ಭವಿಷ್ಯ ರೂಪಿಸುವಲ್ಲಿ NCERT ಪಾತ್ರ ಪ್ರಮುಖವಾಗಿದ್ದು, ಶಿಕ್ಷಣ ಕ್ಷೇತ್ರದಲ್ಲಿ AI ಪಾತ್ರವನ್ನು ಗಮನದಲ್ಲಿಟ್ಟುಕೊಂಡು ಸಂಶೋಧನೆ ಹಾಗೂ ತಂತ್ರಜ್ಞಾನ ಬಳಕೆಗೆ ಹೆಚ್ಚಿನ ಒತ್ತು ನೀಡಬೇಕಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಹೇಳಿದರು.
ನವದೆಹಲಿಯಲ್ಲಿ NCERT 66ನೇ ಸಂಸ್ಥಾಪನಾ ದಿನಾಚರಣೆ ಉದ್ದೇಶಿಸಿ ಮಾತನಾಡಿದ ಸಚಿವರು, ಡಿಜಿಟಲ್ ಸಾಕ್ಷರತೆ, AI ಅರಿವು, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹಾರ ಮತ್ತು ನಾವೀನ್ಯತೆ ಕೌಶಲ್ಯಗಳೊಂದಿಗೆ ಕಲಿಕಾರ್ಥಿಗಳನ್ನು ಸಜ್ಜುಗೊಳಿಸಬೇಕಿದೆ ಎಂದರು.
ಆರು ದಶಕಕ್ಕೂ ಹೆಚ್ಚು ಕಾಲ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ವಿಶೇಷವಾಗಿ ಪಠ್ಯಪುಸ್ತಕ, ಕಲಿಕಾ ಸಾಮಗ್ರಿ ಮತ್ತು ಪಠ್ಯಕ್ರಮ ನಿರ್ವಹಣೆಯಲ್ಲಿ NCERT ಪ್ರಮುಖ ಪಾತ್ರ ವಹಿಸಿದ್ದು, NCERTಯನ್ನು ಮತ್ತಷ್ಟು ನವೀನಗೊಳಿಸಿ ಸಂಶೋಧನೆ ಆಧಾರಿತವಾಗಿ ಭವಿಷ್ಯಕ್ಕೆ ಸಿದ್ಧವಾಗಿಸೋಣ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿ (NEP) 2020 ಶೈಕ್ಷಣಿಕ ಸುಧಾರಣೆಗಳಿಗೆ ಒಂದು ನಿರ್ದಿಷ್ಟ ಚೌಕಟ್ಟನ್ನು ಒದಗಿಸಿದೆ. ಸಮಗ್ರ ಅಭಿವೃದ್ಧಿ, ಸೃಜನಶೀಲತೆ, ವಿಮರ್ಶಾತ್ಮಕ ಚಿಂತನೆ, ಅನುಭವ ಆಧಾರಿತ ಕಲಿಕೆ ಮತ್ತು ಸಾಮರ್ಥ್ಯ ಆಧಾರಿತ ಶಿಕ್ಷಣದ ಮೇಲೆ ಒತ್ತು ನೀಡಲಾಗಿದೆ ಎಂದು ರಾಷ್ಟ್ರೀಯ ಶಿಕ್ಷಣ ನೀತಿ ಮೇಲೆ ಬೆಳಕು ಚೆಲ್ಲಿದರು ಸಚಿವ ಜೋಶಿ.
ಬಹುಭಾಷಾ ಶಿಕ್ಷಣದ ಕಡೆಗೆ NCERT ಪ್ರಯತ್ನ ನಡೆಸಿದೆ. 1ರಿಂದ 8ನೇ ತರಗತಿ ಪಠ್ಯಪುಸ್ತಕಗಳನ್ನು 22 ಭಾಷೆಗಳಲ್ಲಿ ಮತ್ತು 93 ಬುಡಕಟ್ಟು ಭಾಷೆಗಳು ಸೇರಿದಂತೆ ವಿವಿಧ ಭಾರತೀಯ ಭಾಷೆಗಳಲ್ಲಿ 121 ಪ್ರಾಥಮಿಕಗಳೊಂದಿಗೆ ಸಿದ್ಧಪಡಿಸಲಾಗುತ್ತಿದೆ. ಭಾರತೀಯ ಜ್ಞಾನ ವ್ಯವಸ್ಥೆಗಳನ್ನು ಪಠ್ಯಪುಸ್ತಕಗಳಲ್ಲಿ ಸಂಯೋಜಿಸಲಾಗಿದೆ ಎಂದು ಹೇಳಿದರು.
ರೊಬೊಟಿಕ್ಸ್ ಕಲಿಕಾ ಕೇಂದ್ರ, ಅನುವಾದ ಪ್ರಯೋಗಾಲಯ ಮತ್ತು ನವೀಕರಿಸಿದ ಟೆಲಿವಿಷನ್ ಸ್ಟುಡಿಯೋ ಸೌಲಭ್ಯಗಳು ತಂತ್ರಜ್ಞಾನ-ಸಕ್ರಿಯಗೊಳಿಸಿದ ಕಲಿಕೆ, ಭಾರತೀಯ ಭಾಷೆಗಳಲ್ಲಿ ಶಿಕ್ಷಣ ಮತ್ತು ಶೈಕ್ಷಣಿಕ ವಿಷಯದ ಅಭಿವೃದ್ಧಿಯನ್ನು ಬೆಂಬಲಿಸುತ್ತದೆ ಎಂದರು.
ರೊಬೊಟಿಕ್ಸ್ ಮತ್ತು ಅನುವಾದ ಪ್ರಯೋಗಾಲಯಗಳು ಮತ್ತು ನವೀಕರಿಸಿದ ಟಿವಿ ಸ್ಟುಡಿಯೋ, ಥೀಮ್ ಪಾರ್ಕ್ ಅನ್ನು ಉದ್ಘಾಟಿಸಿದ ಸಚಿವರು, ʼಎನ್‌ಸಿಇಆರ್‌ಟಿಯಲ್ಲಿ ಸಸ್ಯ ಮತ್ತು ಪ್ರಾಣಿ ಸಂಕುಲʼ ಎಂಬ ಶೀರ್ಷಿಕೆಯ ಕಾಫಿ ಟೇಬಲ್ ಪುಸ್ತಕ ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಭಾರತೀಯ ಭಾಷಾ ಸಮಿತಿ ಅಧ್ಯಕ್ಷ ಡಾ.ಚಾಮು ಕೃಷ್ಣಶಾಸ್ತ್ರಿ, ಎನ್‌ಸಿಇಆರ್‌ಟಿ ನಿರ್ದೇಶಕ ಪ್ರೊ. ದಿನೇಶ್ ಪ್ರಸಾದ್ ಸಕ್ಲಾನಿ ಹಾಗೂ ಶಿಕ್ಷಣ ಸಚಿವಾಲಯ, ಎನ್‌ಸಿಇಆರ್‌ಟಿಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.