ಬೆಂಗಳೂರು, ಮಾ. 11: ಗುತ್ತಿಗೆದಾರನಿಂದ 5 ಲಕ್ಷ ರುಪಾಯಿ ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದು ಬಂಧನಕ್ಕೊಳಗಾಗಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿಗೆ (MLA Chandru Lamani) ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣದ ವಿಚಾರಣೆ ನಡೆಸುತ್ತಿರುವ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕಳೆದ ತಿಂಗಳು ಗದಗ ಜಿಲ್ಲೆ ಲಕ್ಷ್ಮೇಶ್ವರ ಪಟ್ಟಣದಲ್ಲಿರುವ ಶಾಸಕರ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿ ಅವರನ್ನು ರೆಡ್ ಹ್ಯಾಂಡಾಗಿ ಬಂಧಿಸಲಾಗಿತ್ತು.
ಡಾ. ಚಂದ್ರು ಲಮಾಣಿ 15 ದಿನಗಳಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಾರ್ಚ್ 11ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. 2 ಲಕ್ಷ ರುಪಾಯಿ ವೈಯಕ್ತಿಕ ಬಾಂಡ್ ಹಾಗೂ ಇಬ್ಬರು ಶ್ಯೂರಿಟಿ ಒದಗಿಸುವ ಷರತ್ತಿನೊಂದಿಗೆ ನ್ಯಾಯಾಲಯ ಜಾಮೀನು ನೀಡಿದೆ ಎಂದು ಮೂಲಗಳು ತಿಳಿಸಿವೆ.
ಘಟನೆ ವಿವರ
ರಸ್ತೆ ಕಾಮಗಾರಿ ಸಂಬಂಧಿಸಿ ಗುತ್ತಿಗೆದಾರ ವಿಜಯ ಪೂಜಾರ ಎಂಬುವರಿಂದ ಡಾ. ಚಂದ್ರು ಲಮಾಣಿ 5 ಲಕ್ಷ ರುಪಾಯಿ ಲಂಚ ಪಡೆಯುವ ವೇಳೆ ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ತಂಡ ದಾಳಿ ನಡೆಸಿತ್ತು.
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸಂಕಧಾಳ ಗ್ರಾಮದಲ್ಲಿ 1 ಕೋಟಿ ರುಪಾಯಿ ವೆಚ್ಚದಲ್ಲಿ ರಸ್ತೆ ಬದಿಯ ತಡೆಗೋಡೆ ನಿರ್ಮಾಣ ಕಾಮಗಾರಿ ಮಂಜೂರಾಗಿದೆ. ಇದಕ್ಕಾಗಿ ಗುತ್ತಿಗೆದಾರ ವಿಜಯ ಪೂಜಾರ ಎಂಬುವರ ಬಳಿ ಗುತ್ತಿಗೆಗಾಗಿ ಶಾಸಕ 11 ಲಕ್ಷ ರುಪಾಯಿ ಡೀಲ್ ಮಾಡಿಕೊಂಡಿದ್ದರು ಎನ್ನಲಾಗಿದೆ.
ಶಾಸಕ ಚಂದ್ರು ಲಮಾಣಿ ವಿರುದ್ಧ ನಡೆದಿತ್ತಾ ಷಡ್ಯಂತ್ರ?; ಸ್ವಾಮೀಜಿ ಆಡಿಯೊ ವೈರಲ್!
ಷಡ್ಯಂತ್ರದ ಆರೋಪ
ಡಾ. ಚಂದ್ರು ಲಮಾಣಿ ಬಂಧನದ ಹಿಂದೆ ಷಡ್ಯಂತ್ರವಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಪ್ರಕರಣಕ್ಕೆ ಸಂಬಂಧಿಸಿ ಸ್ಫೋಟಕ ಆಡಿಯೊವೊಂದು ವೈರಲ್ ಆಗಿತ್ತು. ಶಾಸಕನನ್ನು ಲಂಚ ಪ್ರಕರಣದಲ್ಲಿ ಸಿಲುಕಿಸಲು ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿತ್ತು. ಶಿರಹಟ್ಟಿ ತಾಲೂಕಿನ ಆದರಹಳ್ಳಿ ಕುಮಾರ ಮಹಾರಾಜ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು ಮಾತನಾಡಿದ್ದಾರೆ ಎನ್ನಲಾದ ಆಡಿಯೊ ವೈರಲ್ ಆಗಿತ್ತು. ತಮ್ಮದೇ ಸಮುದಾಯದ ಶಾಸಕರ ವಿರುದ್ಧ ಬಂಜಾರ ಸಮಾಜದ ಸ್ವಾಮೀಜಿ ಷಡ್ಯಂತ್ರ ಮಾಡಿದ್ದಾರೆ ಎಂಬ ಆರೋಪ ಸಂಚಲನ ಮೂಡಿಸಿತ್ತು.
ಡಾ. ಚಂದ್ರು ಲಮಾಣಿ ವಿರುದ್ಧದ ಷಡ್ಯಂತ್ರ ಆರೋಪ ಕೇಳಿಬಂದ ವಿಚಾರಕ್ಕೆ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮಿಜಿ ಬಳಿಕ ಸ್ಪಷ್ಟನೆಯನ್ನೂ ನೀಡಿದ್ದರು. ʼʼಆಡಿಯೊದಲ್ಲಿ ನಾನು ಮಾತನಾಡಿದ್ದು ಸತ್ಯ. ಆದರೆ ಲೋಕಾಯುಕ್ತ ಪ್ರಕರಣಕ್ಕೂ, ನನಗೂ ಸಂಬಂಧವಿಲ್ಲ. ಆಗ ಜಗಳದ ಸಮಯದಲ್ಲಿ ಶಾಸಕರು ಒತ್ತಡ ಕೊಟ್ಟಿದ್ದಕ್ಕೆ ಸಿಟ್ಟಿನಲ್ಲಿ ಮಾತನಾಡಿದ್ದೇನೆ ನಿಜ. ಆದರೆ ಈ ಪ್ರಕರಣಕ್ಕೆ ನನಗೂ ಸಂಬಂಧ ಇಲ್ಲʼʼ ಎಂದಿದ್ದರು. ಈ ಷಡ್ಯಂತ್ರದಲ್ಲಿ ಕಾಂಗ್ರೆಸ್‌ನ ಕೈವಾಡವೂ ಇದೆ ಎಂದು ಚಂದ್ರು ಬೆಂಬಲಿರು ದೂರಿದ್ದರು. ಒಟ್ಟಿನಲ್ಲಿ ಈ ಪ್ರಕರಣ ಭಾರಿ ಸಂಚಲನ ಮೂಡಿಸಿತ್ತು.