ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

H D Devegowda Birthday: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರ ಜನ್ಮದಿನ; ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಸೇರಿ ಗಣ್ಯರ ಶುಭಾಶಯ

H D Devegowda Birthday: ಬೆಂಗಳೂರಿನ ಜೆಡಿಎಸ್‌ ಕಚೇರಿ ಜೆ.ಪಿ ಭವನದಲ್ಲಿ ಭಾನುವಾರ ಮಾಜಿ ಪ್ರಧಾನಿ ದೇವೇಗೌಡರಿಂದ ಕೇಕ್‌ ಕಟ್ ಮಾಡಿಸುವ ಮೂಲಕ ಜೆಡಿಎಸ್‌ ನಾಯಕರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.

ಬೆಂಗಳೂರು: ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ (HD Deve Gowda) ಅವರ 92ನೇ ಜನ್ಮದಿನದ (Birthday) ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌, ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ, ಮಾಜಿ ಸಿಎಂ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿ ಅನೇಕ ಗಣ್ಯರು ಶುಭಾಶಯ ಕೋರಿದ್ದಾರೆ. ಇನ್ನು ಬೆಂಗಳೂರಿನ ಜೆಡಿಎಸ್‌ ಕಚೇರಿ ಜೆ.ಪಿ ಭವನದಲ್ಲಿ ಭಾನುವಾರ ಮಾಜಿ ಪ್ರಧಾನಿ ದೇವೇಗೌಡರಿಂದ ಕೇಕ್‌‌ ಕಟ್ ಮಾಡಿಸುವ ಮೂಲಕ ಜೆಡಿಎಸ್‌ ಮುಖಂಡರು, ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿ, ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರಿಗೆ ಹುಟ್ಟುಹಬ್ಬದ ಶುಭಾಶಯಗಳು. ಸಾರ್ವಜನಿಕರ ಸೇವೆಗಾಗಿ ಎಚ್‌ಡಿಡಿ ಎಲ್ಲೆಡೆ ಗೌರವಾನ್ವಿತರಾಗಿದ್ದಾರೆ. ಹಲವಾರು ವಿಷಯಗಳ ಕುರಿತು ಅವರ ಬುದ್ಧಿವಂತಿಕೆ ಮತ್ತು ಒಳನೋಟಗಳು ಹೆಚ್ಚಿನ ಶಕ್ತಿಯ ಮೂಲವಾಗಿದೆ. ಅವರಿಗೆ ದೀರ್ಘ ಮತ್ತು ಆರೋಗ್ಯಕರ ಜೀವನ ಕರುಣಿಸಲಿ ಎಂದು ಹಾರೈಸುತ್ತೇನೆಂದು ತಿಳಿಸಿದ್ದಾರೆ.



ಇನ್ನು ಸಿಎಂ ಸಿದ್ದರಾಮಯ್ಯ ಅವರು ಪೋಸ್ಟ್ ಮಾಡಿ, ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳು ಆದ ಎಚ್‌.ಡಿ. ದೇವೇಗೌಡ ಅವರಿಗೆ ಜನ್ಮದಿನದ ಶುಭಾಶಯಗಳು. ಮತ್ತಷ್ಟು ಕಾಲ ತಮಗೆ ಉತ್ತಮ ಆರೋಗ್ಯ ಮತ್ತು ಆಯಸ್ಸನ್ನು ದೇವರು ಕರುಣಿಸಲೆಂದು ಹಾರೈಸುತ್ತೇನೆ ಎಂದು ಶುಭ ಹಾರೈಸಿದ್ದಾರೆ.



ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಅವರು ಪೋಸ್ಟ್‌ ಮಾಡಿ, ಹಿರಿಯ ರಾಜಕೀಯ ಧುರೀಣ, ಮುತ್ಸದ್ಧಿ ನೇತಾರ, ಮಾಜಿ ಪ್ರಧಾನಮಂತ್ರಿಗಳಾದ ಮಾನ್ಯ ಶ್ರೀ ಎಚ್.ಡಿ.ದೇವೇಗೌಡರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಆಶೀರ್ವಾದ ಸದಾ ತಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.



ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ, ನನ್ನ ಪೂಜ್ಯ ತಂದೆಯವರು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಮಣ್ಣಿನ ಮಗ ಎಚ್‌.ಡಿ. ದೇವೇಗೌಡ ಅವರಿಗೆ ಜನ್ಮದಿನದ ಭಕ್ತಿಪೂರ್ವಕ ಶುಭಾಶಯಗಳು. ನನ್ನ ಶಕ್ತಿ, ನನ್ನ ಧೈರ್ಯ, ನನ್ನ ಸ್ಫೂರ್ತಿ ನನ್ನ ತಂದೆಯವರೇ ಆಗಿದ್ದಾರೆ. ಅವರ ಸಂಘರ್ಷದ ಹಾದಿ, ಸಾಧನೆ, ಸೇವಾ ತತ್ಪರತೆ ನನ್ನ ಮೇಲೆ ಅಗಾಧ ಪ್ರಭಾವ ಬೀರಿದೆ. ಇಡೀ ಬದುಕನ್ನು ರಾಷ್ಟ್ರ ಸೇವೆಗೆ ಸಮರ್ಪಿಸಿರುವ ಈ ಮಹಾನ್ ನಾಯಕನ ಕುಡಿಯಾಗಿ ಹುಟ್ಟಿರುವುದು ನನ್ನ ಜನ್ಮಜನ್ಮದ ಸುಕೃತ. ಆ ಭಗವಂತ ನನ್ನ ತಂದೆಯವರಿಗೆ ಇನ್ನೂ ಹೆಚ್ಚಿನ ಆಯುರಾರೋಗ್ಯ ಕರುಣಿಸಲಿ. ಸುದೀರ್ಘ ಕಾಲ ನಮಗೆಲ್ಲಾ ಮಾರ್ಗದರ್ಶನ ಮಾಡಿ, ಜನಸೇವೆ ಮಾಡುವ ಚೈತನ್ಯ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.



ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಪ್ರತಿಕ್ರಿಯಿಸಿ, ನಾಡಿನ ಹಿರಿಯ ರಾಜಕಾರಣಿ, ಮಾಜಿ ಪ್ರಧಾನಿಗಳಾದ ಶ್ರೀ ಎಚ್.ಡಿ. ದೇವೇಗೌಡ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸುತ್ತೇನೆ ಎಂದು ತಿಳಿಸಿದ್ದಾರೆ.



ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರತಿಕ್ರಿಯಿಸಿ, ಗೌರವಾನ್ವಿತ ಮಾಜಿ ಪ್ರಧಾನಿಗಳಾದ ಶ್ರೀ ಎಚ್‌.ಡಿ.ದೇವೇಗೌಡಜೀ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ತಮ್ಮ ಸುಧೀರ್ಘ ರಾಜಕೀಯ ಅನುಭವ ಹಾಗೂ ಹೋರಾಟಗಳು ನಾಡಿನ ಹಾಗೂ ದೇಶದ ಇತಿಹಾಸದಲ್ಲಿ ಮಹತ್ವದ ಹೆಜ್ಜೆಗುರುತುಗಳು, ವಯಸ್ಸು ಲೆಕ್ಕಿಸದ ರಾಜಕೀಯ ಕ್ರಿಯಾಶೀಲತೆ ಭವಿಷ್ಯದ ರಾಜಕಾರಣಿಗಳಿಗೆ ಸ್ಫೂರ್ತಿಯ ಸೆಲೆಯಾಗಿದೆ.

ಗ್ರಾಮೀಣ ಜನರ ಬಗೆಗಿನ ನೈಜ ಕಾಳಜಿಯ ಕೊಡುಗೆಗಳು ಮಣ್ಣಿನ ಮಕ್ಕಳ ಪಾಲಿಗೆ ಚೈತನ್ಯ ತುಂಬಿದ ಸಮೃದ್ಧತೆಯ ಸಂಕೇತಗಳು. ಭಗವಂತನು ತಮಗೆ ಉತ್ತಮ ಆಯುರಾರೋಗ್ಯ ಕರುಣಿಸಿ, ನಾಡು ಹಾಗೂ ದೇಶದ ಬೆಳವಣಿಗೆಗೆ ಅತ್ಯಮೂಲ್ಯ ಮಾರ್ಗದರ್ಶನ ನೀಡುತ್ತಿರುವಂತಾಗಲಿ ಎಂದು ಪ್ರಾರ್ಥಿಸುವೆ ಎಂದು ತಿಳಿಸಿದ್ದಾರೆ.



ದೇವೇಗೌಡರ ಜನ್ಮದಿನದ ಹಿನ್ನೆಲೆಯಲ್ಲಿ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರು ಪದ್ಮನಾಭ ನಗರದ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.



ಜೆಡಿಎಸ್‌ ಕಚೇರಿಯಲ್ಲಿ ಎಚ್‌ಡಿಡಿ ಜನ್ಮದಿನದ ಸಂಭ್ರಮ