ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಡಾ ಹಗರಣ: 2 ಸಾವಿರ ಕೋಟಿ ರುಪಾಯಿ ಮೌಲ್ಯದ 1,100 ನಿವೇಶನಗಳ ಹಂಚಿಕೆ ರದ್ದುಪಡಿಸಿ ಸರ್ಕಾರದಿಂದ ಆದೇಶ

Muda Scam: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ 50:50 ಅನುಪಾತದ ಅಡಿಯಲ್ಲಿ ಮಾಡಲಾಗಿದ್ದ1,100 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಈ ಕುರಿತ ಆದೇಶವನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೊರಡಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಮೈಸೂರು, ಆ. 19: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ 50:50 ಅನುಪಾತದ ಅಡಿಯಲ್ಲಿ ಮಾಡಲಾಗಿದ್ದ1,100 ಬದಲಿ ನಿವೇಶನಗಳ (Muda Scam) ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ, ಉನ್ನತ ಮಟ್ಟದ ತಾಂತ್ರಿಕ ಸಮಿತಿಯು ನೀಡಿರುವ ವರದಿಯನ್ವಯ ಈ ಆದೇಶ ಹೊರಡಿಸಲಾಗಿದೆ. 2023ರ ಮಾರ್ಚ್ 14ರ ನಿರ್ದೇಶನವನ್ನು ಉಲ್ಲಂಘಿಸಿ ಮಾಡಲಾದ ಎಲ್ಲ 50:50 ಬದಲಿ ನಿವೇಶನಗಳ ಹಂಚಿಕೆಯನ್ನ ರದ್ದುಪಡಿಸುವಂತೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸೂಚಿಸಿದ್ದಾರೆ.

ಈಗಾಗಲೇ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿಯಾಗಿದ್ದರೆ ಬದಲಿ ನಿವೇಶನಗಳ ಕ್ರಯಪತ್ರ ರದ್ದುಪಡಿಸಲು ಸಿವಿಲ್ ಕೋರ್ಟ್‌ನಲ್ಲಿ ದಾವೆ ಹೂಡಿ ನೋಂದಣಿಯಾಗಿರುವ ಬದಲಿ ನಿವೇಶನಗಳ ಖಾತೆ ಮಾಡುವುದನ್ನು ತಡೆಹಿಡಿಯಲು ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಲಾಗಿದೆ. ಅಲ್ಲದೆ ಸರ್ಕಾರದ ಮಾರ್ಗಸೂಚಿ ಬರುವವರೆಗೆ ಕ್ರಯಪತ್ರ ನೀಡದಂತೆ ಸೂಚಿಸಲಾಗಿದೆ.

ಒಂದು ವೇಳೆ ಖಾತಾ ಆಗಿದ್ದಲ್ಲಿ ಸ್ಥಳೀಯ ಸಂಸ್ಥೆಗಳು ನಿಯಮಾನುಸಾರ ರದ್ದುಪಡಿಸಲು ಕ್ರಮ ಕೈಗೊಳ್ಳಬೇಕಿದೆ. ಈ ಆದೇಶದ ಮೇರೆಗೆ ಕೈಗೊಂಡ ಕ್ರಮಗಳ ಕುರಿತು ವರದಿಯನ್ನು ಸರ್ಕಾರಕ್ಕೆ ತಕ್ಷಣವೇ ಸಲ್ಲಿಸುವಂತೆ ಕೋರಲಾಗಿದೆ. ಒಂದುವೇಳೆ ವಿಫಲವಾದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮತ್ತೆ ಸುತ್ತಿಕೊಂಡ ಮುಡಾ ಹಗರಣ; ಹೈಕೋರ್ಟ್‌ನಿಂದ ತುರ್ತು ನೋಟಿಸ್‌

ಈ ಬಗ್ಗೆ ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಸಂತಸ ವ್ಯಕ್ತಪಡಿಸಿದ್ದಾರೆ. ʼʼಮುಡಾ ಹಗರಣದಲ್ಲಿ ದೊಡ್ಡದೊಂದು ಜಯ ಸಿಕ್ಕಿದೆ. 2 ಸಾವಿರ ಕೋಟಿ ರುಪಾಯಿಗೂ ಹೆಚ್ಚು ಮೌಲ್ಯದ 50:50 ಅನುಪಾತದಲ್ಲಿ ಹಂಚಿಕೆ ಮಾಡಿರುವ ಎಲ್ಲ 1,100 ನಿವೇಶನಗಳನ್ನು ವಾಪಸ್‌ ಮುಡಾಗೆ ಬರುವವರೆಗೂ ಹೋರಾಟ ನಡೆಸುತ್ತೇನೆಂದು ಹೇಳಿದ್ದೆ. ಅದು ಈಗ ಹೇಳಿದಂತೆ ಆಗಿದೆʼʼ ಎಂದಿದ್ದಾರೆ.

ಏನಿದು 50:50 ಬದಲಿ ನಿವೇಶನ ಹಗರಣ?

ಸಾರ್ವಜನಿಕ ಸೌಲಭ್ಯಗಳಿಗಾಗಿ (ರಸ್ತೆ, ಪಾರ್ಕ್ ಇತ್ಯಾದಿ) ರೈತರಿಂದ ಅಥವಾ ಜಮೀನು ಮಾlಕರಿಂದ ಮುಡಾ ಪ್ರಾಧಿಕಾರವು ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ. ಈ ಯೋಜನೆ ಅಡಿಯಲ್ಲಿ ಭೂಮಿ ಕಳೆದುಕೊಂಡ ಮಾಲಕರಿಗೆ ಹಣದ ಬದಲಾಗಿ, ಅಭಿವೃದ್ಧಿಪಡಿಸಿದ ಬಡಾವಣೆಯಲ್ಲಿ ಶೇ. 50ರಷ್ಟು ನಿವೇಶನಗಳನ್ನು ಬದಲಿ ಪರಿಹಾರವಾಗಿ ನೀಡಲಾಗುತ್ತದೆ. ಈ ಕುರಿತು 2020ರಲ್ಲಿ ತೀರ್ಮಾನಿಸಲಾಯಿತು.

ಅದಾದ ಬಳಿಕ ಮುಡಾ ಮಂಡಳಿಯ ಗಮನಕ್ಕೆ ತರದೆ, ನಕಲಿ ಮತ್ತು ಬೋಗಸ್ ದಾಖಲೆಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ ಅತ್ಯಂತ ದುಬಾರಿ ಏರಿಯಾಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಸರ್ಕಾರ 2023ರಲ್ಲಿ 50:50 ಅನುಪಾತದಡಿ ನಿವೇಶನ ಹಂಚಿಕೆ ಮಾಡುವುದನ್ನು ನಿಲ್ಲಿಸುವಂತೆ ಆದೇಶ ನೀಡಿತ್ತು. ಆದರೂ ಕದ್ದುಮುಚ್ಚಿ ನಿವೇಶನ ಹಂಚಿಕೆ ಆಗುತ್ತಲೇ ಇತ್ತು.

ಮುಡಾ ಪ್ರಕರಣದಲ್ಲಿ ಮಾಜಿ ಆಯುಕ್ತ ದಿನೇಶ್‌ ಕುಮಾರ್‌ ಇಡಿ ವಶಕ್ಕೆ

ಬಳಿಕ ರಾಜ್ಯ ಸರಕಾರವು ಈ ಕುರಿತ ಸಮಗ್ರ ತನಿಖೆಗಾಗಿ ನ್ಯಾಯಮೂರ್ತಿ ಪಿ.ಎನ್. ದೇಸಾಯಿ ನೇತೃತ್ವದ ಏಕಸದಸ್ಯ ವಿಚಾರಣಾ ಆಯೋಗ ಮತ್ತು ಉನ್ನತ ಮಟ್ಟದ ತಾಂತ್ರಿಕ ಸಮಿತಿಯನ್ನು ನೇಮಿಸಿತ್ತು. ಈ ತನಿಖಾ ಆಯೋಗದ ವರದಿ ಆಧರಿಸಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅಕ್ರಮವಾಗಿ ಹಂಚಿಕೆಯಾಗಿದ್ದ ಎಲ್ಲ 1,100 ನಿವೇಶನಗಳನ್ನು ತಕ್ಷಣದಿಂದ ರದ್ದುಗೊಳಿಸಿದ್ದಾರೆ.

ರಾಜ್ಯದ ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author