ಬೆಂಗಳೂರು: ಈ ಬಾರಿ ಮೈಸೂರು ದಸರಾ (Mysuru dsara) ನೋಡಲೆಂದು ಹೊರಟವರಿಗೆ ಕೆಎಸ್‌ಆರ್‌ಟಿಸಿ (KSRTC) ಶಾಕ್ ನೀಡಿದೆ. ಬೆಂಗಳೂರು- ಮೈಸೂರು (Bengaluru- mysuru) ಬಸ್ ಟಿಕೆಟ್ ದರ (Bus Ticket Price) ಹೆಚ್ಚಳವಾಗಿದೆ. ಸಾಲು ಸಾಲಾಗಿ ರಜೆಗಳು ಬಂದಿರುವುದರಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ. ಟಿಕೆಟ್ ಬೇಡಿಕೆ ಹತ್ತು ಪಟ್ಟು ಹೆಚ್ಚಿದೆ. ಹೀಗಾಗಿ ಕೆಎಸ್ಆರ್ಟಿಸಿ ಮಾತ್ರವಲ್ಲ, ಖಾಸಗಿ ಬಸ್ಗಳು ಕೂಡ ಹಬ್ಬವನ್ನೇ ನೆಪವಾಗಿ ಇಟ್ಟುಕೊಂಡು ಪ್ರಯಾಣ ದರ ಏರಿಕೆ ಮಾಡಿವೆ.
ಬುಧವಾರ ಆಯುಧಪೂಜೆ, ಗುರುವಾರ ವಿಜಯದಶಮಿ (Vijaya Dashami), ಶುಕ್ರವಾರ ಒಂದು ದಿನ ರಜೆ ಹಾಕಿದರೆ ಮತ್ತೆ ವಾರಾಂತ್ಯ. ಸಾಲು ಸಾಲು ರಜೆ ಬಂದಿದ್ದು, ಜನರೆಲ್ಲ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಅದರಲ್ಲೂ, ದಸರಾ ಕಣ್ತುಂಬಿಕೊಳ್ಳಲು ಬೆಂಗಳೂರಿನಿಂದ ನಿತ್ಯ ಸಾವಿರಾರು ಜನರು ಪ್ರಯಾಣ ಮಾಡುತ್ತಾರೆ. ಆದರೆ, ಕೆಎಸ್ಆರ್ಟಿಸಿ (KSRTC) ಪ್ರಯಾಣಿಕರಿಗೆ ಬಿಸಿ ಮುಟ್ಟಿಸಿದೆ.
ಎಷ್ಟು ಏರಿಕೆ?
ಕೆಎಸ್ಆರ್ಟಿಸಿ ನಿಗಮ 20ರಿಂದ 30 ರುಪಾಯಿ ಟಿಕೆಟ್ ದರ ಹೆಚ್ಚಳ ಮಾಡಿದೆ. ಈ ಹಿಂದೆ ಕೆಎಸ್ಆರ್ಟಿಸಿ ಎಕ್ಸ್‌ಪ್ರೆಸ್ ಬಸ್‌ನಲ್ಲಿ ಬೆಂಗಳೂರು ಟು ಮೈಸೂರಿಗೆ 162 ರುಪಾಯಿ ಇತ್ತು. ಇದೀಗ 180 ರುಪಾಯಿ ಆಗಿದೆ. ನಾನ್ ಸ್ಟಾಪ್ ಬಸ್‌ನಲ್ಲಿ ಈ ಹಿಂದೆ- 210 ರುಪಾಯಿ ಇದ್ದದ್ದು ಈಗ 230 ರುಪಾಯಿಗೆ ಏರಿದೆ. ರಾಜಹಂಸ ಬಸ್‌ನಲ್ಲಿ ಈ ಹಿಂದೆ 250 ರುಪಾಯಿ ಇದ್ದದ್ದು ಇದೀಗ 280 ರುಪಾಯಿ ಆಗಿದೆ. ಎಲೆಕ್ಟ್ರಿಕ್ ಎಸಿ ಬಸ್ ಈ ಹಿಂದೆ 400 ರುಪಾಯಿ, ಇದೀಗ 420 ರುಪಾಯಿ. ಐರಾವತ ಕ್ಲಬ್ ಕ್ಲಾಸ್ ಈ ಹಿಂದೆ 430 ರುಪಾಯಿ, ಇದೀಗ 450 ರುಪಾಯಿ.
ಈ ಬಗ್ಗೆ ಕೆಎಸ್ಆರ್ಟಿಸಿ ನಿಗಮ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕೆಎಸ್ಆರ್ಟಿಸಿ ನಿಗಮವು ದಸರಾ ಹಬ್ಬದ ವೇಳೆ ಬೆಂಗಳೂರು ಟು ಮೈಸೂರಿಗೆ ಮಾತ್ರ ಕಳೆದ 20 ವರ್ಷಗಳಿಂದ, ಕೆಲವು ದಿನಗಳವರೆಗೆ ಮಾತ್ರ ಅಂದರೆ ಸೆಪ್ಟೆಂಬರ್-26 ರಿಂದ ಅಕ್ಟೋಬರ್- 8ರ ವರೆಗೆ ನಾನ್ ಸ್ಟಾಪ್, ಎಕ್ಸ್ಪ್ರೆಸ್, ಎಸಿ ಬಸ್ ಗಳಲ್ಲಿ 20 ರಿಂದ 30 ರುಪಾಯಿ ವರೆಗೆ ದರ ಹೆಚ್ಚಳ ಮಾಡುತ್ತೇವೆ. ಕೆಎಸ್ಆರ್ಟಿಸಿ ನಿಗಮವು ದಸರಾ ಸಂದರ್ಭದಲ್ಲಿ ಬೇರೆ ಡಿಪೋಗಳಿಂದ ಹೆಚ್ಚುವರಿ ಬಸ್ಸುಗಳನ್ನು ಪಡೆದು ಪ್ರಯಾಣಿಕರಿಗೆ ಸೇವೆ ನೀಡುತ್ತದೆ. ಬೆಂಗಳೂರು ಟು ಮೈಸೂರು ಹೋಗುವಾಗ ಬಸ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ಇರುತ್ತದೆ. ಮೈಸೂರಿನಿಂದ ವಾಪಸ್ಸು ಬರುವಾಗ ಪ್ರಯಾಣಿಕರ ಸಂಖ್ಯೆ ಕಡಿಮೆ ಇರುತ್ತದೆ. ಈ ನಷ್ಟವನ್ನು ಸರಿದೂಗಿಸಲು ಈ ದರ ಏರಿಕೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಖಾಸಗಿ ಬಸ್ ಬಸ್ ಟಿಕೆಟ್ ದರ ಏರಿಕೆ
ಬೆಂಗಳೂರಿಂದ ಹುಬ್ಬಳ್ಳಿಗೆ ಸಾಮಾನ್ಯವಾಗಿ ಖಾಸಗಿ ಬಸ್ ಪ್ರಯಾಣದರ 1000 ರೂಪಾಯಿ ಇರುತ್ತಿತ್ತು. ಆದೀಗ, 2039 ರೂಪಾಯಿ ಆಗಿದೆ. ಇನ್ನು, ದಾವಣಗೆರೆಗೆ ತೆರಳಲು 750 ರೂಪಾಯಿ ಟಿಕೆಟ್ ದರ ಇತ್ತು. ಈಗ 1489 ರೂಪಾಯಿಗೆ ಹೆಚ್ಚಳ ಮಾಡಿದ್ದಾರೆ. ಬೆಂಗಳೂರಿಂದ ಬೆಳಗಾವಿಗೆ 1200 ರೂಪಾಯಿ ಇರುತ್ತಿದ್ದ ಬಸ್ ಟಿಕೆಟ್ ದರ ಈಗ 2677 ರೂಪಾಯಿ ತನಕ ಏರಿಕೆ ಆಗಿದೆ. ಬೆಂಗಳೂರಿಂದ ಮಂಗಳೂರಿಗೆ ಸಾಮಾನ್ಯ ದಿನಗಳಲ್ಲಿ 1200 ರೂಪಾಯಿ ಇರುತ್ತಿತ್ತು. ಈಗ, 1800 ರೂಪಾಯಿ ಆಗಿದೆ. ಇನ್ನು, ಬೆಂಗಳೂರಿಂದ ಕಲಬುರಗಿಗೆ 1100 ರೂ. ಇದ್ದ ಬಸ್ ಟಿಕೆಟ್ ದರ ಈಗ 2299 ರೂಪಾಯಿ ಆಗಿದೆ. ಬಸ್ ಪ್ರಯಾಣ ದರ ಏರಿಕೆಗೆ ಪ್ರಯಾಣಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Navaratri Fashion 2025: ದಸರಾ ಸಂಭ್ರಮಕ್ಕೆ ಕಾಲಿಟ್ಟ ಮಿನುಗುವ ಸಿಕ್ವೀನ್ಸ್ ಡಿಸೈನರ್‌ವೇರ್ಸ್